Site icon Vistara News

BJP Politics: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿಗೆ ಕೊಕ್‌, ಬಿಜೆಪಿ ರಾಜ್ಯಾಧ್ಯಕ್ಷತೆ ಫಿಕ್ಸ್‌

CT Ravi BL Santhosh

ಬೆಂಗಳೂರು: ಅತ್ಯಂತ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಸಿ.ಟಿ. ರವಿ (CT Ravi) ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (BJP National General secretary) ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಇದರೊಂದಿಗೆ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ (BJP State President) ಹುದ್ದೆಗೆ ನೇಮಕ ಮಾಡಲಾಗುತ್ತದೆ ಎಂಬ ಸುದ್ದಿಗಳಿಗೆ ಇಂಬು ಸಿಕ್ಕಂತಾಗಿದೆ. ಇದೇ ವೇಳೆ ಕರ್ನಾಟಕ ಚುನಾವಣೆಯ ವಿಚಾರದಲ್ಲಿ ಹಲವು ಆರೋಪಗಳಿಗೆ (BJP Politics) ಒಳಗಾಗಿದ್ದ ಬಿ.ಎಲ್‌. ಸಂತೋಷ್‌ (BL Santosh) ಅವರನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ (BJP National Organizational secretary) ಹುದ್ದೆಯಲ್ಲಿ ಮುಂದುವರಿಸಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಸಂಘಟನಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಹೊಸದಾರಿ ರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಲವು ನೇಮಕಾತಿಗಳನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಬಿ.ಎಲ್‌ ಸಂತೋಷ್‌ ಅವರನ್ನು ರಾಷ್ಟೀಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಪ್ರಕಟಿಸಲಾದ ಪಟ್ಟಿಯಲ್ಲಿ ಸಿ.ಟಿ. ರವಿ ಅವರ ಹೆಸರು ಇಲ್ಲ. ಹೀಗಾಗಿ ಅವರನ್ನು ಹುದ್ದೆಯಿಂದ ಕೈಬಿಡಲಾಗಿರುವುದು ಸ್ಪಷ್ಟ. ಈ ಬೆಳವಣಿಗೆ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ ಎಂಬ ಸುದ್ದಿಗಳಿಗೆ ಜೀವ ತುಂಬಿದೆ.

ಕಳೆದ ವಿಧಾನಸಭಾ ಚುನಾವಣೆಯ ಬೆನ್ನಿಗೇ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ಚರ್ಚೆ ನಡೆದಿತ್ತು. ಆದರೆ, ವಿಧಾನಸಭೆಯಲ್ಲಿ ಬಿಜೆಪಿ ನಾಯಕ ಯಾರಾಗಬೇಕು ಎನ್ನುವ ಚರ್ಚೆಯ ನಡುವೆ ಈ ವಿಚಾರ ನನೆಗುದಿಗೆ ಬಿದ್ದಿತ್ತು. ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಅವರು ಯಾವುದೇ ಕ್ಷಣ ಹುದ್ದೆ ತ್ಯಜಿಸಲು ಸಿದ್ಧ ಎಂಬ ಸಂದೇಶ ನೀಡಿದ್ದರು.

ಒಂದೊಮ್ಮೆ ಬಿಜೆಪಿಯ ಸದನ ನಾಯಕ ಹುದ್ದೆಯನ್ನು ಲಿಂಗಾಯತರಿಗೆ ನೀಡಿದರೆ ರಾಜ್ಯಾಧ್ಯಕ್ಷ ಹುದ್ದೆ ಒಕ್ಕಲಿಗರಿಗೆ ಒಲಿಯಲಿದೆ ಎಂಬ ಚರ್ಚೆ ಇತ್ತು. ಸದನ ನಾಯಕ ಹುದ್ದೆ ಒಕ್ಕಲಿಗರಿಗೆ ನೀಡಿದರೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಲಿಂಗಾಯತರಿಗೆ ಒಲಿಯಲಿದೆ ಎನ್ನುವ ಸಂದೇಶವಿತ್ತು. ಹೀಗಾಗಿ ನಾಯಕರ ನಡುವೆ ಯಾರಾಗಬಹುದು ಎಂಬ ಲೆಕ್ಕಾಚಾರಗಳು ಜೋರಾಗಿಯೇ ನಡೆದಿದ್ದವು.

ಆದರೆ, ಇತ್ತೀಚೆಗೆ ನಾಯಕನ ಆಯ್ಕೆಯ ವಿಚಾರದಲ್ಲಿ ಒಂದು ಸ್ಪಷ್ಟತೆ ಕಂಡಿತ್ತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಇತ್ತೀಚೆಗೆ ಮಾಜಿ ಸಿಎಂ ಬಿಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಲ್ಲದೆ ಅವರ ಕಾಲಿಗೆ ಬಿದ್ದು ಆಶೀರ್ವಾದ ಕೇಳಿದ್ದರು. ಇದು ಕೇಂದ್ರದ ನಾಯಕರಿಂದ ಬಂದಿರುವ ಸೂಚನೆಯಿಂದಾದ ನಡೆ ಎಂದು ವಿಶ್ಲೇಷಿಸಲಾಗಿತ್ತು.

ಸಿ.ಟಿ. ರವಿ ಮತ್ತು ಬಿ.ಎಸ್‌. ಯಡಿಯೂರಪ್ಪ ಹಾಗು ಕುಟುಂಬದ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಇದು ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ಸೋಲಿಗೂ ಕಾರಣವಾಗಿತ್ತು. ಆದರೆ, ಕೇಂದ್ರದ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕು ಎಂದರೆ ಯಡಿಯೂರಪ್ಪ ಮತ್ತು ಕುಟುಂಬದ ಜತೆಗಿನ ಸಂಬಂಧವನ್ನು ಸರಿಪಡಿಸಿಕೊಂಡು ಬರಬೇಕು ಎಂಬ ಸಂದೇಶ ನೀಡಿದ್ದರ ಫಲವಾಗಿ ಈ ಭೇಟಿ ನಡೆದಿತ್ತು ಎಂದು ಹೇಳಲಾಗಿತ್ತು. ಅದರ ಬೆನ್ನಿಗೇ ಬಿಜೆಪಿಯ ಹಿರಿಯ ನಾಯಕ ಅಮಿತ್‌ ಶಾ ಅವರು ಬಿಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಇದು ಕೂಡಾ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದ ಒಂದು ಬೆಳವಣಿಗೆ ಎಂದು ಹೇಳಲಾಗಿತ್ತು. ಸಿ.ಟಿ. ರವಿ ಅವರಿಗೆ ಸಹಕಾರ ಕೊಡಿ ಎಂಬ ಸಂದೇಶವನ್ನು ಬಿವೈ ವಿಜಯೇಂದ್ರ ಅವರಿಗೆ ನೀಡಲಾಗಿತ್ತು ಎನ್ನಲಾಗಿದೆ.

ಇದೀಗ ಸಿ.ಟಿ. ರವಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸಿರುವುದು ಅವರಿಗೆ ಬೇರೆ ಹುದ್ದೆ ನೀಡುವುದರ ಮುನ್ಸೂಚನೆಯಂತೆ ಕಂಡಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಕ್ಕಲಿಗರ ನೇಮಕ ಆದರೆ ವಿಪಕ್ಷ ನಾಯಕನ ಹುದ್ದೆ ಲಿಂಗಾಯತರಿಗೆ ದೊರೆಯುವುದು ಖಚಿತವಾಗಿದೆ. ಅದು ಬಸವರಾಜ ಬೊಮ್ಮಾಯಿಯವರಾ? ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಾ ಅಥವಾ ಬಿವೈ ವಿಜಯೇಂದ್ರ ಅವರನ್ನು ಈ ಹುದ್ದೆಗೇರಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : BJP Politics : ದಿಲ್ಲಿಯಲ್ಲಿ ರಾಜ್ಯ ಬಿಜೆಪಿ ಸಂಚಲನ; ಮೋದಿ ಜತೆ ತೇಜಸ್ವಿನಿ ಅನಂತಕುಮಾರ್, ಅಮಿತ್‌ ಶಾ ಜತೆ ವಿಜಯೇಂದ್ರ

Exit mobile version