ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ (Assembly election) ಬಳಿಕ ಬಿಜೆಪಿಯಲ್ಲಿ ಅಂತಹ ಉತ್ಸಾಹ ಏನೂ ಕಾಣುತ್ತಿಲ್ಲ. ಜತೆಗೆ ಸೂಕ್ತ ನಾಯಕನೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ (Leader of the Opposition) ಸ್ಥಾನಕ್ಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ (BJP state president) ಸ್ಥಾನಕ್ಕೆ ಇನ್ನೂ ನೂತನ ಸಾರಥಿಯನ್ನು ಆಯ್ಕೆ ಮಾಡಿಲ್ಲ. ಇದು ಪಕ್ಷದಲ್ಲಿ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಜತೆಗೆ ಆಪರೇಷನ್ ಹಸ್ತ (Operation Hasta) ಭೀತಿಯೂ ಎದುರಾಗಿದೆ. ಈ ಎಲ್ಲ ರಾಜಕೀಯ ಬೆಳವಣಿಗೆ ಮಧ್ಯೆ ಮತ್ತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅವರ ನಾಯಕತ್ವದ ಕೂಗು ಕೇಳಿ ಬಂದಿದೆ. ಜತೆಗೆ ಲಿಂಗಾಯತರನ್ನು ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣವಾಗಿದೆ. ಮುಂದಿನ ಲೋಕಸಭೆ ಚುನಾವಣೆಯೊಳಗೆ (Lok Sabha Election 2024) ಇದನ್ನು ಸರಿಪಡಿಸಿಕೊಳ್ಳಬೇಕು ಎಂಬ ಎಚ್ಚರಿಕೆ ಸಂದೇಶವನ್ನು ಬಹಿರಂಗವಾಗಿ ಇಬ್ಬರು ನಾಯಕರು ನೀಡಿದ್ದಾರೆ. ಈಗ ಪಕ್ಷದ ನಿರ್ಧಾರದ ಬಗ್ಗೆ ಮಾಜಿ ಶಾಸಕ ರಾಜು ಗೌಡ (Former MLA Raju Gowda) ಹಾಗೂ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ (MLC Pradeep Shettar) ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಮೂಲಕ ಬಿಜೆಪಿ ರಾಜಕೀಯದ (BJP Politics) ಆಂತರಿಕ ಅಸಮಾಧಾನ ಹೊರ ಬರುತ್ತಿದೆ.
ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ: ರಾಜುಗೌಡ
ರಾಜ್ಯ ಬಿಜೆಪಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅನಿವಾರ್ಯ. ಆದರೆ, ಯಡಿಯೂರಪ್ಪ ಅವರನ್ನು ಇಳಿಸಿದ್ದೇ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋಲುವುದಕ್ಕೆ ಕಾರಣವಾಯಿತು. ಆ ತಪ್ಪು ಮಾಡಬಾರದಿತ್ತು ಎಂದು ಮಾಜಿ ಶಾಸಕ ರಾಜುಗೌಡ ಹೇಳಿದರು.
ಇದನ್ನೂ ಓದಿ: Karnataka Politics : ಸ್ಥಳೀಯ ಕಮಿಟಿಗಳಿಗೆ ಶಾಸಕರಿಗಿಂತ ಕಾರ್ಯಕರ್ತರಿಗೆ ಅವಕಾಶ ಕೊಡಿ: ಬಿ.ಎಲ್. ಶಂಕರ್ ಖಡಕ್ ಮಾತು
ವಿಸ್ತಾರ ನ್ಯೂಸ್‌ನಲ್ಲಿ ಈ ಬಗ್ಗೆ ಮಾತನಾಡಿದ ರಾಜುಗೌಡ, ವಿಧಾನಸಭಾ ಚುನಾವಣೆಯ ತಪ್ಪು ಸರಿಪಡಿಸಿಕೊಳ್ಳದಿದ್ದರೆ, ಮುಂದೆ ಲೋಕಸಭಾ ಚುನಾವಣೆಯಲ್ಲೂ ಇದೇ ಫಲಿತಾಂಶ ಬರುತ್ತದೆ. ಹೀಗಾಗಿ ನಮ್ಮವರು ತಪ್ಪು ತಿದ್ದಿಕೊಳ್ಳಬೇಕು. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಹೋದರೆ ಮಾತ್ರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧ್ಯ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣನೆ ಮಾಡಲಾಯಿತು. ನಮ್ಮ ಸೋಲಿಗೆ ಅದೇ ಕಾರಣವಾಗಿದೆ. ಇವತ್ತು ಸಹ ನಮಗೆ ಯಡಿಯೂರಪ್ಪ ಅವರ ಮಾರ್ಗದರ್ಶನದ ಅವಶ್ಯಕತೆ ಇದೆ. ಅವರ ಮಾರ್ಗದರ್ಶನದಲ್ಲಿ ಲೋಕಸಭೆ ಎದುರಿಸುತ್ತೇವೆ. ವಿಧಾನಸಭಾ ಚುನಾವಣೆಯಲ್ಲಿ ಆದ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ತಪ್ಪು ಸರಿಪಡಿಸಿಕೊಳ್ಳದಿದ್ದರೆ ಅದೇ ಫಲಿತಾಂಶ ಬರುತ್ತದೆ. ನಾವೆಲ್ಲ ಸೋಲುವುದಕ್ಕೆ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಕಾರಣ. ಯಡಿಯೂರಪ್ಪ ಈಗಲೂ ಸೋತವರನ್ನು ಕರೆದು ಮಾತನಾಡುತ್ತಾರೆ ಎಂದು ಹೇಳಿದರು.
ಲಿಂಗಾಯತ ನಾಯಕರನ್ನು ತುಳಿದಿದ್ದೇ ಸೋಲಿಗೆ ಕಾರಣ: ಪ್ರದೀಪ್ ಶೆಟ್ಟರ್
ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ಎಂಬ ರೀತಿ ಕಾಣಿಸುತ್ತಿದೆ. ರಾಜ್ಯದಲ್ಲಿ ಲಿಂಗಾಯತರಿಗೆ ನಾಯಕತ್ವ ಕೊಡಬೇಕು. ರಾಜ್ಯದಲ್ಲಿ ಲಿಂಗಾಯತ ನಾಯಕರನ್ನು ತುಳಿದಿದ್ದೇ ವಿಧಾನಸಭಾ ಸೋಲಿಗೆ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಪ್ರದೀಪ್ ಶೆಟ್ಟರ್, ಇದೀಗ ಅನೇಕ ಲಿಂಗಾಯತ ನಾಯಕರು ಒಂದು ಕಾಲನ್ನು ಪಕ್ಷದಿಂದ ಹೊರಗಡೆ ಇಟ್ಟಿದ್ದಾರೆ. ಮಾಜಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಜೆ.ಸಿ. ಮಾಧುಸ್ವಾಮಿ, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಚಿಕ್ಕನಗೌಡರ ಅವರು ಹೊರಹೋಗುವ ಚಿಂತನೆಯಲ್ಲಿದ್ದಾರೆ ಎಂದು ಹೇಳಿದರು.
ನಾನು ವಿಧಾನ ಪರಿಷತ್ ಸದಸ್ಯನಾಗಿದ್ದರೂ ಕೆಲವು ಕಾರ್ಯಕ್ರಮಗಳಿಗೆ ಕಡೆಗಣನೆ ಮಾಡಿದ್ದಾರೆ. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿಯೂ ನನ್ನನ್ನು ಕರೆಯುತ್ತಿಲ್ಲ. ಯಾಕೆ ಹೀಗೆ ಆಗುತ್ತಿದೆ ಅನ್ನೋದು ಅರ್ಥ ಆಗುತ್ತಿಲ್ಲ. ವೀರಶೈವ ಲಿಂಗಾಯತ ನಾಯಕರಿಗೆ ನಾಯಕತ್ವ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕಡೆ ವೀರಶೈವ ಲಿಂಗಾಯತರಿಗೆ ಟಿಕೆಟ್ ಕೊಡಬೇಕು ಎಂದು ಪ್ರದೀಪ್ ಶೆಟ್ಟರ್ ಒತ್ತಾಯಿಸಿದರು.
ಇದನ್ನೂ ಓದಿ: Operation Hasta : ಮಾಜಿ ಶಾಸಕರಾದ ಬಿ.ಸಿ. ಪಾಟೀಲ್, ರಾಜೂಗೌಡ ಜತೆ ಡಿಕೆಶಿ ರಹಸ್ಯ ಮಾತುಕತೆ!
ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕ ಮಾಡಿದ್ದಾರೆ: ಪ್ರದೀಪ್ ಶೆಟ್ಟರ್
ನಾನು ಪಕ್ಷ ಬಿಟ್ಟು ಹೋಗಲ್ಲ. ಲಿಂಗಾಯತ ನಾಯಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇನೆ. ಕಾಂಗ್ರೆಸ್‌ನ ಅನೇಕ ದೊಡ್ಡ ನಾಯಕರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದು ನಮಗೆ ಸಮಸ್ಯೆ ಆಗಿದೆ. ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ. ರಾಜ್ಯದ ಬಿಜೆಪಿ ಉಸ್ತುವಾರಿಗಳು ಬದಲಾಗಬೇಕು ಎಂದು ಪ್ರದೀಪ್ ಶೆಟ್ಟರ್ ಹೇಳಿದ್ದಾರೆ.