ದಾವಣಗೆರೆ: ರಾಜ್ಯದಲ್ಲಿ ಬಿಜೆಪಿಯ (BJP Karnataka) ಹೀನಾಯ ಚುನಾವಣಾ ಸೋಲಿಗೆ (Debacle in Election) ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಕಾರಣ. ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ (MP Renukacharya) ಆಗ್ರಹಿಸಿದ್ದಾರೆ. ಇದರ ಜತೆಗೆ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದು ಘೋರ ದುರಂತ ಮತ್ತು ಅಪರಾಧ ಎಂದು ಘಂಟಾಘೋಷವಾಗಿ ಹೇಳುತ್ತೇನೆ (BJP Politics) ಎಂದಿದ್ದಾರೆ.
ಮಂಗಳವಾರ ದಾವಣಗೆರೆಯಲ್ಲಿ ಮಾತನಾಡಿ ಬಿಜೆಪಿ ಸೋಲಿಗೆ ಹಲವು ಕಾರಣಗಳನ್ನು ಪಟ್ಟಿ ಮಾಡಿದ್ದ ಅವರು ಬುಧವಾರವೂ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಇದು ಬಿಜೆಪಿ ರಾಜ್ಯಾಧ್ಯಕ್ಷತೆ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಸಂಬಂಧಿಸಿ ಯಾವ ನಾಯಕರೂ ಬಹಿರಂಗ ಹೇಳಿಕೆ ನೀಡಬಾರದು, ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬ ನಳಿನ್ ಕುಮಾರ್ ಕಟೀಲ್ ಅವರ ಎಚ್ಚರಿಕೆ ನೀಡಿದ ಪ್ರತಿಕ್ರಿಯೆ ಎಂದು ಭಾವಿಸಲಾಗಿದೆ.
ರಾಜ್ಯ ಬಿಜೆಪಿಯಲ್ಲಿ ನಾಯಕರೆಲ್ಲ ಬಹಿರಂಗವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರೆ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಗಳಲ್ಲಿ ಮಾರಾಮಾರಿಯ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಇದರ ನಡುವೆ ನೇರವಾಗಿ ನಾಯಕತ್ವವನ್ನು ಪ್ರಶ್ನೆ ಮಾಡಿದ್ದಾರೆ ರೇಣುಕಾಚಾರ್ಯ.
ನಾನು ಸೋಲಿನ ಹತಾಶೆಯಿಂದ ಮಾತನಾಡುತ್ತಿಲ್ಲ (BJP Politics)
ʻʻಎಲ್ಲರನ್ನೂ ಪಕ್ಷದಿಂದ ಹೊರಗೆ ಹಾಕಿದ್ರಿ.. ಇದರ ಉದ್ದೇಶ ಏನು ಎಂದು ಜನರು ಕೇಳುತ್ತಿದ್ದಾರೆ. ನೀವು ಹೇಳಬಹುದು, ರೇಣುಕಾಚಾರ್ಯ ಸೋತಿದ್ದಾನೆ. ಹಾಗಾಗಿ ಹತಾಶ ಮನೋಭಾವನೆಯಿಂದ ಮಾತನಾಡುತ್ತಿದ್ದಾನೆ ಅಂತ. ನಾನು ಸೋತಿಲ್ಲ. ನನ್ನ ಜನ ಮತ್ತು ಮುಖಂಡರು ನನಗೆ 75 ಸಾವಿರ ಮತ ಹಾಕಿದ್ದಾರೆ. ಆದರೆ, ಈ ಹೀನಾಯ ಸೋಲಿಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕುʼʼ ಎಂದು ರೇಣುಕಾಚಾರ್ಯ ಹೇಳಿದರು.
ಮೊದಲು ರಾಜೀನಾಮೆ ಕೊಡಿ ನಂತ್ರ ಶಿಸ್ತು ಕ್ರಮ
ʻʻಯಡಿಯೂರಪ್ಪ ಅವರನ್ನು ಯಾವ ರೀತಿ ಕಡೆಗಣಿಸಿದ್ರಿ? ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದಿರಿ, ಆದರೆ, ಅವರ ಕೈಗಳನ್ನು ಕಟ್ಟಿ ಹಾಕಿದಿರಿ. ಏನು ಮಾಡಲು ಹೊರಟಿದ್ದೀರಿ ನೀವುʼʼ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ʻʻರಾಜ್ಯಾಧ್ಯಕ್ಷರಿಗೆ ನಾನು ವಿನಂತಿ ಮಾಡುತ್ತೇನೆ, ನಿಮ್ಮ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿದೆ. ನೀವು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕುʼʼ ಎಂದು ಆಗ್ರಹಿಸಿದ್ದಾರೆ.
ʻʻನೀವು ರಾಜೀನಾಮೆ ಕೊಡುವ ಬದಲು ಶಿಸ್ತು ಕ್ರಮ ಜರುಗಿಸ್ತೇವೆ ಅಂತೀರಲ್ಲಾ? ಯಾರ ಮೇಲೆ ಶಿಸ್ತು ಕ್ರಮ ಜರುಗಿಸುತ್ತೀರಿ? ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಒಳ ಒಪ್ಪಂದ ಎಂದು ಪಕ್ಷದ ಅತಿರಥ ಮಹಾರಥರೆಲ್ಲ ಮಾತನಾಡಿಕೊಂಡರಲ್ಲ.. ಅವತ್ತು ಯಾಕೆ ಮಾತನಾಡಲಿಲ್ಲ ನೀವು? ಆವತ್ತು ನಿಮ್ಮ ಬಾಯಿಗೆ ಬೀಗ ಹಾಕಿತ್ತಾ?ʼʼ ಎಂದು ಕೇಳಿದ್ದಾರೆ.
ಯಡಿಯೂರಪ್ಪ ಬಿಜೆಪಿ ಬೆಳೆಸಿದ್ದಕ್ಕೆ ನೀವು ಇದ್ದೀರಿ
ʻʻಪಕ್ಷದ ವಿರುದ್ಧವಾಗಿ ದೊಡ್ಡ ದೊಡ್ಡ ನಾಯಕರೆಲ್ಲ ಮಾತನಾಡಿದರು. ಹೊಂದಾಣಿಕೆ ರಾಜಕಾರಣ ಅಂದರು. ಆದರೆ, ನೀವು ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದಿರಿ. ಈಗ ಯಡಿಯೂರಪ್ಪ ಪರವಾಗಿ ಮಾತನಾಡಿದರೆ ಶಿಸ್ತು ಕ್ರಮದ ಎಚ್ಚರಿಕೆ ಅಲ್ವಾ? ಅಂದರೆ ಯಡಿಯೂರಪ್ಪ ಅವರ ಪರವಾಗಿ ಮಾತನಾಡಿದರೆ ಪಕ್ಷ ವಿರೋಧಿಗಳು, ಯಡಿಯೂರಪ್ಪ ಅವರ ಪರವಾಗಿ ಮಾತನಾಡಿದರೆ ಅವರು ಪಕ್ಷದ ಪರವಾಗಿರುವವರು ಅಂತ ಅರ್ಥನಾ?ʼʼ ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ ರೇಣುಕಾಚಾರ್ಯ.
ʻʻಯಡಿಯೂರಪ್ಪ ಅವರು ಬಿಜೆಪಿ ಕಟ್ಟಿ ಬೆಳೆಸಿಲ್ವಾ? ಇವತ್ತು ನಾಯಕರು ಅನಿಸಿಕೊಂಡ ಯಾರೂ ಬಿಜೆಪಿಯನ್ನು ಕಟ್ಟಿ ಬೆಳೆಸಿಲ್ಲ. ಯಡಿಯೂರಪ್ಪ ಅವರ ಪಾದಯಾತ್ರೆಗಳು, ಅವರ ಜೈಲು ವಾಸ, ಅವರ ಹೋರಾಟಗಳು, ಒಂದಾ ಎರಡಾ? ನೂರಾರು ಆ ಕಾರಣಕ್ಕಾಗಿ ಬಿಜೆಪಿ ಇಷ್ಟರ ಮಟ್ಟಿಗಿನ ಸಾಧನೆ ಮಾಡಿದೆ.ʼʼ ಎಂದು ರೇಣುಕಾಚಾರ್ಯ ನೆನಪಿಸಿದರು.
ರಾಜ್ಯಾಧ್ಯಕ್ಷರನ್ನು 16 ಬಾರಿ ಭೇಟಿ ಮಾಡಿ ವಿವರಿಸಿದ್ದೇನೆ
ʻʻರಾಜ್ಯದ ಅಧ್ಯಕ್ಷರೇ ನನಗೆ ಈಗಲೂ ನಿಮ್ಮ ಬಗ್ಗೆ ಗೌರವ ಇದೆ. ನಾನು ಅನೇಕ ಬಾರಿ ದಿಲ್ಲಿಯಲ್ಲಿ ಹೇಳಿಬಂದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಏನೆಲ್ಲ ಆಗುತ್ತಿದೆ, ಪರಿಣಾಮ ಏನಾಗಬಹುದು ಎಂದು ವಿವರಿಸಿ ಹೇಳಿದೆ. ಕರ್ನಾಟಕದ ಪ್ರಮುಖ ನಾಯಕರನ್ನು ಭೇಟಿ ಮಾಡಿ ಹೇಳಿದೆ. ಇದೇ ರಾಜ್ಯಾಧ್ಯಕ್ಷರನ್ನು 16 ಬಾರಿ ಭೇಟಿ ಮಾಡಿ ಹೇಳಿದ್ದೇನೆ. ಇಷ್ಟಾದರೂ ಯಾಕೆ ನೀವು ಗೆಲುವಿಗೆ ಯೋಜನೆಗಳನ್ನು ರೂಪಿಸಲಿಲ್ಲ. ಯಾಕೆʼʼ ಎಂದು ಪ್ರಶ್ನಿಸಿದರು.
ʻʻಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದು ಘೋರ ದುರಂತ, ಅಪರಾಧ ಎಂದು ಈಗಲೂ ಘಂಟಾಘೋಷವಾಗಿ ಹೇಳುತ್ತೇನೆ. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದರೂ ಅವರನ್ನು ಕೆಲಸ ಮಾಡಲಾಗದಂತೆ ಕೈಗಳನ್ನು ಕಟ್ಟಿ ಹಾಕಿದರು. ಪಕ್ಷ ವಿರೋಧಿ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಇದರಿಂದಾಗಿ ಪಕ್ಷಕ್ಕೆ ಈ ಸ್ಥಿತಿ ಬಂದಿದೆʼʼ ಎಂದು ನೇರವಾಗಿಯೇ ರೇಣುಕಾಚಾರ್ಯ ಹೇಳಿದರು.
ಇದನ್ನೂ ಓದಿ: BJP Politics: ಕೆಲಸಕ್ಕೆ ಬಾರದ ಪ್ರಣಾಳಿಕೆ ಸೇರಿ ಬಿಜೆಪಿ ಸೋಲಿಗೆ 8 ಕಾರಣ ನೀಡಿದ ರೇಣುಕಾಚಾರ್ಯ!
ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳೋಣ
ʻʻಇನ್ನು ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಬರುತ್ತದೆ. ಅದರಲ್ಲಿ ಗೆಲ್ಲಬೇಕು. ಮುಂದೆ ಲೋಕಸಭಾ ಚುನಾವಣೆ ನಡೆಯಲಿದೆ ಅದರಲ್ಲಿ 25 ಸ್ಥಾನ ಗೆಲ್ಲಬೇಕು. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು. ಈಗಲೂ ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಹೇಗೆ? ಪಕ್ಷವನ್ನು ಉಳಿಸಬೇಕಲ್ಲ.ʼʼ ಎಂದು ಕೇಳಿದ್ದಾರೆ ಮಾಜಿ ಶಾಸಕ ರೇಣುಕಾಚಾರ್ಯ.