ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Karnataka Assembly election) ಹೀನಾಯ ಸೋಲು ಕಂಡಿರುವ ರಾಜ್ಯ ಬಿಜೆಪಿ (Karnataka BJP) ಅಕ್ಷರಶಃ ಕಂಗೆಟ್ಟಿದೆ. ಅಲ್ಲದೆ, ಸೋಲಿಗೆ ಅನೇಕ ಕಾರಣಗಳನ್ನು ಈಗಾಗಲೇ ಹುಡುಕಿಕೊಂಡಿದೆ. ಈ ಮಧ್ಯೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಿರುವುದೇ ಇಷ್ಟೆಲ್ಲ ಆಗಲು ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ಮಾತನ್ನು ಇತರ ರಾಜ್ಯ ನಾಯಕರು ಒಪ್ಪಲು ಸಿದ್ಧರಿರಲಿಲ್ಲ. ಈಗೀಗ ಮಾಜಿ ಶಾಸಕರ ಸಹಿತ ಹಲವು ನಾಯಕರು ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಸೋಲಿಗೆ ಬಹುಮುಖ್ಯ ಕಾರಣವಾಗಿದೆ. ಲೋಕಸಭಾ ಚುನಾವಣೆ (Lok Sabha Election 2024) ವೇಳೆಗಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ. ಹೀಗಾಗಿ ಲೋಕಸಮರಕ್ಕೆ ಬಿಎಸ್‌ವೈ ಅನಿವಾರ್ಯವಾಗಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆಯಾಗಿ ಬಿಜೆಪಿ ಆಂತರಿಕ (BJP Politics) ಸಂಘರ್ಷಕ್ಕೆ ತೆರೆ ಎಳೆಯಲು ಪ್ರಯತ್ನ ಪಡುತ್ತಿದೆ.
ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದರ ಬಗ್ಗೆ ಇತ್ತೀಚೆಗೆ ಹಲವು ನಾಯಕರು ಧ್ವನಿ ಎತ್ತಿದ್ದಾರೆ. ಮಾಜಿ ಶಾಸಕರಾದ ರಾಜು ಗೌಡ, ಎಂ.ಪಿ. ರೇಣುಕಾಚಾರ್ಯ ಸಹಿತ ಹಲವರು ಪಕ್ಷದ ನಡೆಯನ್ನು ಖಂಡಿಸಿದ್ದಾರೆ. ಇವರೆಲ್ಲರೂ ಪಕ್ಷದಿಂದ ಒಂದು ಕಾಲನ್ನು ಹೊರಗಿಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ. ಇನ್ನು ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ 20 ಸ್ಥಾನವನ್ನು ಗೆಲ್ಲಬೇಕು ಎಂದು ಗುರಿ ಹಾಕಿಕೊಂಡಿರುವ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ (Operation Hasta) ಕೈ ಹಾಕಿದೆ. ಇದಕ್ಕೆ ಹಾಲಿ ಶಾಸಕರು ಮಾತ್ರವಲ್ಲದೆ, ಮಾಜಿ ಶಾಸಕರಿಗೂ ಗಾಳ ಹಾಕುತ್ತಿದೆ. ಈ ಎಲ್ಲ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಸಮಾಧಾನಿತರ ಶಮನಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಜತೆಗೆ ತನ್ನ ಕೆಲವೊಂದು ನಡೆಯನ್ನು ಬದಲಾಯಿಸಿಕೊಳ್ಳಲು ಪಕ್ಷ ಸಹ ಮುಂದಾಗಿದೆ ಎನ್ನಲಾಗಿದೆ.
ಬಿ.ಎಲ್. ಸಂತೋಷ್ ಸಭೆಗೆ ಗೈರಾಗಿದ್ದ ನಾಯಕರು!
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ದೂರ ಇಟ್ಟು ಬಿ.ಎಲ್. ಸಂತೋಷ್ ಸಭೆ ನಡೆಸಿದ್ದರು. ಆದರೆ, ಸಂತೋಷ್ ಕರೆದಿದ್ದ ಸಭೆಗೆ ಬಿಜೆಪಿಯ ಕೆಲವು ನಾಯಕರು ಗೈರಾಗಿದ್ದರು. ಈ ಮೂಲಕ ತಮ್ಮ ಆಕ್ರೋಶ ಹಾಗೂ ಅಸಮಾಧಾನವನ್ನು ಹೊರಹಾಕಿದ್ದರು. ಈ ಬಗ್ಗೆ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಬಹಿರಂಗವಾಗಿಯೇ ಗುಡುಗಿದ್ದರು. ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೊಂದು ಸಭೆ
ಈಗ ನಡೆದಿರುವ ಪ್ರಮಾದವನ್ನು ಸರಿಪಡಿಸಲು ಹಲವರು ಆಗ್ರಹಿಸಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ರೆಬೆಲ್‌ಗಳ ಮನವೊಲಿಕೆ ಪ್ರಯತ್ನ
ಬಿ.ಎಲ್. ಸಂತೋಷ್ ಸಭೆಗೆ ಗೈರಾಗಿ ರೆಬೆಲ್ ಆಗಿದ್ದವರ ಮನವೊಲಿಸಲು ಈ ಸಭೆ ಪ್ರಮುಖ ಪಾತ್ರ ವಹಿಸಲಿದೆ. ಈ ಸಭೆಗೆ ಆಪರೇಷನ್ ಹಸ್ತಕ್ಕೆ ಒಳಗಾಗುತ್ತಿರುವ ನಾಯಕರಿಗೂ ಆಹ್ವಾನ ನೀಡಲಾಗುತ್ತಿದೆ. ಈ ಮೂಲಕ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಅಸಮಾಧಾನಿತರ ಶಮನಕ್ಕೆ ಬಿಎಸ್‌ವೈ ನೇತೃತ್ವದಲ್ಲಿ ಸಭೆ ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ತಂತ್ರವನ್ನು ಹೆಣೆಯಲಾಗುತ್ತಿದೆ.
ಇದನ್ನೂ ಓದಿ: Karnataka Politics : ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೆ ಶಾಸಕರ ಟೆನ್ಶನ್; ಸ್ವಪಕ್ಷೀಯರಿಂದ ಬಿದ್ದ ಬರ ಭಾರ!
ಯಡಿಯೂರಪ್ಪ ಅವರಿಗೇ ನೇತೃತ್ವ ಕೊಡಿ!
ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಈ ಬಾರಿ ಮಾಡುವುದು ಬೇಡ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಸಾಧನೆ ಮಾಡಬೇಕು ಎಂದಾದಲ್ಲಿ ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆಗೆ ಹೋಗಬೇಕು. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸೋಣ ಎಂಬ ಸಲಹೆಯನ್ನು ಈಗಾಗಲೇ ಹಲವು ನಾಯಕರು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಮತ್ತೆ ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾರಿ 25 ಕ್ಷೇತ್ರಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.