ಬೆಂಗಳೂರು: ಚುನಾವಣಾ ಸೋಲಿನ ಬಳಿಕ ನಿಂತ ನೀರಾಗಿದ್ದ ಕರ್ನಾಟಕ ಬಿಜೆಪಿ (Karanataka BJP) ರಾಜಕೀಯದಲ್ಲಿ ಸಣ್ಣ ಸಂಚಲನ (BJP Politics) ಕಾಣಿಸಿಕೊಂಡಿದೆ. ಅತ್ಯಂತ ಕುತೂಹಲಕಾರಿ ಬೆಳವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (BJP National General Secretary CT Ravi) ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅವರನ್ನು ಅವರ ಮನೆಯಲ್ಲಿ ಭೇಟಿಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದರು. ಇತ್ತ ದಿಲ್ಲಿಯಲ್ಲೂ ಕೆಲವೊಂದು ಅಚಾನಕ್ ಬೆಳವಣಿಗೆಗಳು ನಡೆಯುತ್ತಿವೆ. ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರನ್ನು ಭೇಟಿಯಾದರೆ, ಇತ್ತ ಮಾಜಿ ಕೇಂದ್ರ ಮಂತ್ರಿ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ ಕುಮಾರ್ (Tejaswini Anant Kumar) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನೇ ಭೇಟಿಯಾಗಿ ಬಂದಿದ್ದಾರೆ. ಇದೆಲ್ಲವೂ ಯಾವುದೋ ಯೋಜಿತ ತಂತ್ರದ ಭಾಗವಾಗಿ ನಡೆಯುತ್ತಿರುವ ಭೇಟಿಗಳು ಎಂಬ ಸುದ್ದಿ ಹರಿದಾಡುತ್ತಿವೆ.
ಕುತೂಹಲ ಮೂಡಿಸಿದ ತೇಜಸ್ವಿನಿ ಅನಂತಕುಮಾರ್- ಮೋದಿ ಭೇಟಿ
ತೇಜಸ್ವಿನಿ ಅನಂತ ಕುಮಾರ್ ಅವರು ಗುರುವಾರ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಯಾವ ಕಾರಣಕ್ಕಾಗಿ ಈ ಭೇಟಿ ನಡೆಯಿತು, ಏನು ಚರ್ಚೆಯಾಯಿತು ಎನ್ನುವುದು ತಿಳಿಬಂದಿಲ್ಲ.
ನಿಜವೆಂದರೆ, ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ್ ಹೆಸರು ಇತ್ತೀಚೆಗೆ ತೀವ್ರ ಚರ್ಚೆಯಲ್ಲಿದೆ. ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಅವಕಾಶ ಕೈತಪ್ಪಿತ್ತು. ಇದಾದ ಬಳಿಕ ಮತ್ತೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೇಜಸ್ವಿನಿ ಹೆಸರು ಚರ್ಚೆಯಲ್ಲಿದೆ. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಬಿಟ್ಟು ಇವರಿಗೆ ಹೇಗೆ ಟಿಕೆಟ್ ಕೊಡುತ್ತಾರೆ ಎಂಬ ಚರ್ಚೆಯೂ ಇದೆ.
ಈ ಹಿನ್ನೆಲೆಯಲ್ಲಿ ತೇಜಸ್ವಿನಿ ಅನಂತ ಕುಮಾರ್ ಅವರು ಕಾಂಗ್ರೆಸ್ ಸೇರಿ ಕೈ ಟಿಕೆಟ್‌ನಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿಗಳು ಹರಿದಾಡಿದವು. ಅನಂತಕುಮಾರ್ ಅವರಿಗೆ ಆಪ್ತರಾಗಿದ್ದ ಜಗದೀಶ್ ಶೆಟ್ಟರ್ ಈ ಆಪರೇಷನ್ ಮಾಡುತ್ತಿದ್ದಾರೆ ಎಂಬ ಚರ್ಚೆಗಳಿದ್ದವು. ಆದರೆ, ಮೂರು ದಿನಗಳ ಹಿಂದಷ್ಟೇ ಟ್ವೀಟ್ ಮಾಡಿದ್ದ ತೇಜಸ್ವಿನಿ ಅನಂತಕುಮಾರ್ ಅವರು ಯಾವ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಹೇಳಿದ್ದರು.
ʻʻದಯವಿಟ್ಟು ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಭಾರತೀಯ ಜನತಾ ಪಕ್ಷದ ಜೊತೆಗೆ ದೃಢವಾಗಿದ್ದೇನೆ. ಇಂಗ್ಲಿಷಿನಲ್ಲಿ ಹೇಳಬಹುದಾದರೆ, “I am wedded to the party and ideology – no compromise” ಎಂದು ತೇಜಸ್ವಿನಿ ಅನಂತ ಕುಮಾರ್ ಅವರು ಟ್ವೀಟ್ ಮಾಡಿದ್ದರು.
ಇದೀಗ ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಯಾವ ಉದ್ದೇಶಕ್ಕೆ ಎಂಬ ಚರ್ಚೆ ಮತ್ತೆ ಗರಿಗೆದರಿದೆ. ಅವರಿಗೆ ರಾಜ್ಯದಲ್ಲೇನಾದರೂ ದೊಡ್ಡ ಹುದ್ದೆ ದೊರೆಯಲಿದೆಯಾ ಎಂಬ ಕುತೂಹಲವಿದೆ.
ಅಮಿತ್ ಶಾ ಅವರೊಂದಿಗೆ ಬಿವೈ ವಿಜಯೇಂದ್ರ ಭೇಟಿ
ಶಿಕಾರಿಪುರದ ಬಿಜೆಪಿ ಶಾಸಕ ಬಿ.ವೈ. ರಾಘವೇಂದ್ರ ಅವರು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಅಮಿತ್ ಶಾ ಅವರು ಬಿವೈ ವಿಜಯೇಂದ್ರ ಅವರಿಗೆ ಆಪ್ತರಾಗಿದ್ದಾರೆ ಎಂಬ ಸುದ್ದಿ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಅಮಿತ್ ಶಾ ಅವರೇ ಬಿವೈ ವಿಜಯೇಂದ್ರ ಅವರನ್ನು ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಚರ್ಚಿಸಿ ಕೆಲವೊಂದು ಸಲಹೆಗಳನ್ನು ಅವರು ನೀಡಿದರು ಎನ್ನಲಾಗಿದೆ.
ʻʻಸಂಘಟನಾ ಚಾತುರ್ಯದ ಚಾಣಕ್ಯನೆಂದೇ ಬಣ್ಣಿಸಲ್ಪಡುವ ಮಾನ್ಯ ಗೃಹ ಸಚಿವ @AmitShah ಜೀ ಅವರನ್ನು ಭೇಟಿಮಾಡಲಾಯಿತು. ರಾಜ್ಯದಲ್ಲಿ ವೈಫಲ್ಯದ ಗ್ಯಾರಂಟಿ ಬೆನ್ನಿಗಂಟಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಲು ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕುರಿತು ಮಾರ್ಗದರ್ಶನ ಪಡೆಯಲಾಯಿತುʼʼ ಎಂದು ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದಾರೆ.
ಸಂಘಟನಾ ಚಾತುರ್ಯದ ಚಾಣಕ್ಯನೆಂದೇ ಬಣ್ಣಿಸಲ್ಪಡುವ ಮಾನ್ಯ ಗೃಹ ಸಚಿವ @AmitShah ಜೀ ಅವರನ್ನು ಭೇಟಿಮಾಡಲಾಯಿತು. ರಾಜ್ಯದಲ್ಲಿ ವೈಫಲ್ಯದ ಗ್ಯಾರಂಟಿ ಬೆನ್ನಿಗಂಟಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಲು ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕುರಿತು ಮಾರ್ಗದರ್ಶನ ಪಡೆಯಲಾಯಿತು. pic.twitter.com/Fb5ewTRBCk
— Vijayendra Yeddyurappa (@BYVijayendra) July 20, 2023
ಅಚ್ಚರಿ ಮೂಡಿಸಿದ ಬಿಎಸ್ ಯಡಿಯೂರಪ್ಪ-ಸಿ.ಟಿ. ರವಿ ಭೇಟಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಬುಧವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲೇ ಭೇಟಿಯಾಗಿ ಅಚ್ಚರಿ ಮೂಡಿಸಿದರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಇಬ್ಬರು ನಾಯಕರ ನಡುವೆ ಸಂಬಂಧಗಳು ಅಷ್ಟೇನೂ ಚೆನ್ನಾಗಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಬುಧವಾರ ಪರಸ್ಪರ ಭೇಟಿಯಾದಾಗ ಅಂಥ ಯಾವ ಲಕ್ಷಣವೂ ಕಾಣಿಸಲಿಲ್ಲ.
ʻʻನಮ್ಮ ಪಕ್ಷದ ಹಿರಿಯ ನಾಯಕರು, ರೈತ ನಾಯಕ, ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರಾದ ಶ್ರೀ ಬಿ. ಎಸ್. ಯಡಿಯೂರಪ್ಪ ಜಿ ಅವರನ್ನು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿದೆನು. ಸದಾ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವ ಬಿ.ಎಸ್ ಯಡಿಯೂರಪ್ಪ ಅವರು ಇಂದು (ಬುಧವಾರ) ಉಪಹಾರದ ಸಮಯಕ್ಕೆ ಅವರ ನಿವಾಸಕ್ಕೆ ಹೋದಾಗ ನನ್ನ ಬೆಳಗ್ಗಿನ ಉಪಹಾರ ಮುಗಿಸಿದ್ದರೂ ಧವಲಗಿರಿಯ ದೋಸೆಯ ರುಚಿ ಸವಿಯುವವರೆಗೆ ಬಿಡಲಿಲ್ಲ.
ವಿಧಾನಸಭಾ ಅಧಿವೇಶನದ ನಂತರ ಲೋಕಸಭಾ ಚುನಾವಣಾ ನಿಮಿತ್ತ ರಾಜ್ಯಾದಂತ್ಯ ಪ್ರವಾಸ ಮಾಡಿ ಕಾರ್ಯಕರ್ತರ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂಬ ಅವರ ಪಕ್ಷದ ಮೇಲಿನ ಪ್ರೀತಿ ಮತ್ತು ಸಂಘಟನೆ ಮಾಡಬೇಕೆಂಬ ಛಲ ನನಗೆ ಇನ್ನಷ್ಟು ಸಂಘಟನಾತ್ಮಕ ಪ್ರವಾಸ ಮಾಡಬೇಕೆಂದು ಪ್ರೇರಣೆ ನೀಡಿತುʼʼ ಎಂದು ಸಿ.ಟಿ. ರವಿ ಅವರು ಬಿಎಸ್‌ವೈ ಭೇಟಿ ಬಳಿಕ ಬರೆದುಕೊಂಡಿದ್ದಾರೆ.
ನಮ್ಮ ಪಕ್ಷದ ಹಿರಿಯ ನಾಯಕರು, ರೈತ ನಾಯಕ, ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರಾದ ಶ್ರೀ ಬಿ. ಎಸ್. ಯಡಿಯೂರಪ್ಪ ಜಿ ಅವರನ್ನು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿದೆನು.
— C T Ravi 🇮🇳 ಸಿ ಟಿ ರವಿ (@CTRavi_BJP) July 19, 2023
ಸದಾ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವ @BSYBJP , ಇಂದು ಉಪಹಾರದ ಸಮಯಕ್ಕೆ ಅವರ ನಿವಾಸಕ್ಕೆ ಹೋದಾಗ ನನ್ನ ಬೆಳಗ್ಗಿನ ಉಪಹಾರ ಮುಗಿಸಿದ್ದರೂ ಧವಲಗಿರಿಯ ದೋಸೆಯ ರುಚಿ… pic.twitter.com/Z1a700jpoK
ಸಿ.ಟಿ. ರವಿ ಅವರು ಬಿ.ಎಸ್.ವೈ ಅವರನ್ನು ಭೇಟಿ ಮಾಡಿರುವುದು, ಆಶೀರ್ವಾದ ಕೇಳಿರುವುದು, ಕಾಲಿಗೆ ಬಿದ್ದಿರುವುದು ಗಮನಿಸಿದರೆ ಕೇಂದ್ರ ನಾಯಕರು ಸಿ.ಟಿ. ರವಿ ಅವರಿಗೆ ಯಾವುದೋ ಜವಾಬ್ದಾರಿಯನ್ನು ನೀಡುವ ಸಾಧ್ಯತೆಗಳಿದ್ದು, ಅದಕ್ಕೆ ಮುನ್ನ ಬಿಎಸ್ ಯಡಿಯೂರಪ್ಪ ಅವರ ಕೃಪೆಗೆ ಪಾತ್ರರಾಗಿ ಬನ್ನಿ ಎಂಬ ಸೂಚನೆ ಕೊಟ್ಟಿರುವಂತೆ ಕಾಣುತ್ತಿದೆ. ಇದಕ್ಕೆ ಪೂರಕವಾಗಿಯೇ ಬಿವೈ ವಿಜಯೇಂದ್ರ ಅವರನ್ನು ಅಮಿತ್ ಶಾ ಅವರು ಕರೆಸಿಕೊಂಡರಾ ಎಂಬ ಚರ್ಚೆ ಇದೆ. ಒಂದು ಮಾಹಿತಿಯನ್ನು ನಂಬುವುದಾದರೆ ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಸ್ಥಾನವನ್ನು, ಸಿ.ಟಿ. ರವಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡುವ ಸಾಧ್ಯತೆಗಳಿವೆ ಎಂಬ ಊಹಾಪೋಹ ಹರಿದಾಡುತ್ತಿದೆ.
ಇದನ್ನೂ ಓದಿ : HD Kumaraswamy : ಬಿಜೆಪಿ ಲೆಟರ್‌ಹೆಡ್‌ನಲ್ಲಿ ರಾಜ್ಯಪಾಲರಿಗೆ ದೂರು; ಮೊದಲ ಸಹಿಯೇ ಕುಮಾರಸ್ವಾಮಿ, ಸೇರೇಬಿಟ್ರಾ ಹಾಗಿದ್ರೆ?