ಬೆಂಗಳೂರು: ರಾಜ್ಯದಲ್ಲಿ ಮೇ 10ರಂದು ವಿಧಾನಸಭಾ ಚುನಾವಣೆ (Assembly Elections 2023) ನಡೆದು ಮೇ 13ರಂದು ಫಲಿತಾಂಶ ಪ್ರಕಟವಾಗಿ ಮೇ 20ರಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ (Siddaramaiah Government) ಅಸ್ತಿತ್ವಕ್ಕೆ ಬಂದು ಒಟ್ಟಾರೆ 50 ದಿನಗಳೇ ಕಳೆದರೂ ಪ್ರಧಾನ ಪ್ರತಿಪಕ್ಷವಾಗಿರುವ ಭಾರತೀಯ ಜನತಾ ಪಕ್ಷ (BJP Party) ವಿಧಾನಸಭೆಯಲ್ಲಿ ತನ್ನ ನಾಯಕ (Opposition leader in assembly) ಯಾರಾಗಬೇಕು ಎನ್ನುವುದನ್ನು (BJP Politics) ನಿರ್ಧರಿಸಲು ಸಾಧ್ಯವಾಗಿಲ್ಲ.
ರಾಜ್ಯದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಮಾತ್ರವಲ್ಲ, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯೂ ಆಗಬೇಕು ಎನ್ನುವ ಚರ್ಚೆ ಜೋರಾಗಿದೆ. ಇವೆರಡೂ ತಳುಕು ಹಾಕಿಕೊಂಡಿರುವುದರಿಂದಲೂ ವಿಳಂಬವಾಗುತ್ತಿದೆ ಎಂಬ ಚರ್ಚೆ ಇದೆ. ಆದರೆ, ಚುನಾವಣಾ ಸೋಲಿನ ಬಳಿಕ ಬಿಜೆಪಿ ಹೈಕಮಾಂಡ್ ಇತ್ತ ಕಡೆ ತಿರುಗಿಯೂ ನೋಡದೆ ಇರುವುದರಿಂದ ಮುಂದೇನು ಮಾಡಬೇಕು, ಯಾರಿಗೆ ಯಾವ ಹುದ್ದೆ ನೀಡಬೇಕು ಎನ್ನುವ ವಿಚಾರದಲ್ಲಿ ರಾಜ್ಯದಲ್ಲಿ ಕ್ಲಾರಿಟಿಯೇ ಇಲ್ಲವಾಗಿದೆ.
ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನವನ್ನು ಲಿಂಗಾಯತರಿಗೆ ನೀಡಿದರೆ ರಾಜ್ಯಾಧ್ಯಕ್ಷತೆಯನ್ನು ಒಕ್ಕಲಿಗ ಅಥವಾ ಒಬಿಸಿಗೆ ನೀಡಬೇಕು. ವಿಧಾನಸಭಾ ವಿಪಕ್ಷ ನಾಯಕನಾಗಿ ಒಕ್ಕಲಿಗ ಇಲ್ಲವೇ ಹಿಂದುಳಿಗ ವರ್ಗದವರನ್ನು ಆಯ್ಕೆ ಮಾಡಿದರೆ ರಾಜ್ಯಾಧ್ಯಕ್ಷತೆಯನ್ನು ಲಿಂಗಾಯತರಿಗೆ ನೀಡಬೇಕು ಎನ್ನುವುದು ಒಳಗಿನ ನಡೆಯುತ್ತಿರುವ ಸಾಮಾನ್ಯ ಚರ್ಚೆ.
ಇದೆಲ್ಲದರ ತೀರ್ಮಾನಕ್ಕಾಗಿ ಬಿಜೆಪಿಯ ಮಹತ್ವದ ಶಾಸಕಾಂಗ ಪಕ್ಷ ಸಭೆ ನಡೆಯಲಿದೆ. ಇಲ್ಲಿ ವಿಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎಂದು ಹೇಳಲಾಗಿದೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಭಾನುವಾರ ನಡೆಯುವ ಶಾಸಕಾಂಗ ಪಕ್ಷ ಸಭೆಯಲ್ಲಿ ವಿಪಕ್ಷ ನಾಯಕನ ತೀರ್ಮಾನವಾಗಲಿದೆ ಎಂದಿದ್ದಾರೆ.
ಏನೇ ಆದರೂ ಭಾನುವಾರವೇ ವಿಪಕ್ಷ ನಾಯಕನ ಆಯ್ಕೆ ಆಗಲೇ ಬೇಕು. ಯಾಕೆಂದರೆ, ಜುಲೈ 3ರಿಂದ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಲಿದೆ. ಅಲ್ಲಿ ಪ್ರತಿಪಕ್ಷ ನಾಯಕ ಯಾರು ಎನ್ನುವುದನ್ನು ಬಿಜೆಪಿ ತೋರಿಸಲೇಬೇಕಾಗಿದೆ.
ವಿರೋಧ ಪಕ್ಷದ ನಾಯಕತ್ವ ರೇಸ್‌ನಲ್ಲಿ ಬಸವರಾಜ ಬೊಮ್ಮಾಯಿ, ಆರ್ ಆಶೋಕ್, ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಸಿ.ಎನ್ ಅಶ್ವತ್ಥ ನಾರಾಯಣ ಅವರಿದ್ದಾರೆ. ವಿಪಕ್ಷ ನಾಯಕ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ಕೊಡಲು ರಾಜ್ಯ ನಾಯಕರ ಬಯಕೆ ಇದೆ. ಭಾನುವಾರ ನಡೆಯುವ ಶಾಸಕರ ಸಭೆಯಲ್ಲಿ ಅಭಿಪ್ರಾಯ ಸಂಗ್ರಹವೇ ಅಂತಿಮವಾದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕರಾಗುವುದು ಬಹುತೇಕ ಖಚಿತ. ವಿಧಾನಸಭೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದಿಟ್ಟವಾಗಿ ಎದುರಿಸುವ, ದಾಖಲೆಗಳ ಮೂಲಕ ಮಾತನಾಡುವ ಶಕ್ತಿ ಇರುವುದು ಅವರೊಬ್ಬರಿಗೆ ಮಾತ್ರ ಎನ್ನುವುದನ್ನು ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಾರೆ. ಬಹುತೇಕ ಶಾಸಕರು ಬೊಮ್ಮಾಯಿ ಪರ ಇದ್ದಾರೆ. ಹೀಗಾಗಿ ಬೊಮ್ಮಾಯಿ ವಿಪಕ್ಷ ನಾಯಕ ಆಗುವುದು ಪಕ್ಕಾ ಎನ್ನುತ್ತಿವೆ ಬಿಜೆಪಿ ಮೂಲಗಳು.
ರಾಜ್ಯಾಧ್ಯಕ್ಷತೆ ಬದಲಾಗುತ್ತಾ?
ಇತ್ತ ಇನ್ನೊಂದು ಬದಿಯಲ್ಲಿ ನಡೆಯುತ್ತಿರುವ ರಾಜ್ಯಾಧ್ಯಕ್ಷರ ಬದಲಾವಣೆಯ ಚರ್ಚೆಗೂ ಪಕ್ಷ ಒಡ್ಡಿಕೊಂಡಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಿಸಿ ಬಲಿಷ್ಠ ನಾಯಕನ ಆಯ್ಕೆ ನಡೆಯಬೇಕು ಎನ್ನುವುದು ಪ್ರಬಲವಾದ ಬೇಡಿಕೆ. ಆದರೆ, ಈಗ ಕಟೀಲ್ ಅವರನ್ನು ಬದಲಿಸಿ ಹೊಸಬರನ್ನು ನೇಮಿಸಿದರೆ ಒಟ್ಟಾರೆಯಾಗಿ ಎಲ್ಲ ಘಟಕಗಳನ್ನೇ ಬದಲಿಸಬೇಕಾಗುತ್ತದೆ. ಲೋಕಸಭಾ ಚುನಾವಣೆಯ ತಯಾರಿಯ ನಡುವೆ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಾಗುತ್ತದೆ. ಇದು ಬೇಕಾ ಎನ್ನುವ ಚರ್ಚೆಯೂ ಇದೆ.
ಆದರೆ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಲೋಕಸಭಾ ಚುನಾವಣೆಗೆ ಹೋದರೆ ಗೆಲುವು ಅಸಾಧ್ಯ. ಹೀಗಾಗಿ ಕಾಂಗ್ರೆಸ್ ವಿರುದ್ಧ ಪ್ರಬಲವಾಗಿ ನಿಲ್ಲಬಲ್ಲ, ಸಂಘಟನಾ ಚತುರರರು ಅಧ್ಯಕ್ಷರಾಗಬೇಕು ಎಂಬ ಒತ್ತಾಯವಿದೆ.
ಇದನ್ನೂ ಓದಿ: MP Renukacharya : BSYಗೆ ವಯಸ್ಸಾಯ್ತು ಅಂತ ಕಿತ್ತಾಕಿದ್ರಲ್ವಾ, ಈಗ ರಾಜ್ಯ ಸುತ್ತಲು ಬೇಕಾ; ಮತ್ತೆ ರೇಣುಕಾ ಗುಡುಗು
ಸಿ.ಟಿ ರವಿ, ಶೋಭಾ ಕರಂದ್ಲಾಜೆ, ಅಶ್ವತ್ಥ ನಾರಾಯಣ, ಆರ್ ಆಶೋಕ್, ಪ್ರತಾಪ ಸಿಂಹ ಮೊದಲಾದವರ ಹೆಸರುಗಳು ಚಾಲ್ತಿಯಲ್ಲಿವೆ. ಸಿ.ಟಿ. ರವಿ ಅವರನ್ನು ಕೇಂದ್ರದ ಜವಾಬ್ದಾರಿಯಿಂದ ರಾಜ್ಯಕ್ಕೆ ಕರೆತಂದು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಡ ಹೆಚ್ಚಿನವರದ್ದು. ಆದರೆ, ಇದೆಲ್ಲ ಸದ್ಯ ಅಂತಿಮಗೊಳ್ಳುವಂತೆ ಕಾಣಿಸುತ್ತಿಲ್ಲ.