Site icon Vistara News

BJP Politics: ಕಟೀಲ್‌ ಯು ಟರ್ನ್‌ ಹೊಡೆದಿದ್ದೇಕೆ? ಯಾರಾಗ್ತಾರೆ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ?

Nalin kumar Kateel BJP State president

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಹೀನಾಯ ಸೋಲು ಕಂಡಿರುವ ಬಿಜೆಪಿಯಲ್ಲಿ ಈಗ ರಾಜ್ಯಾಧ್ಯಕ್ಷರು (BJP State president) ಯಾರು ಎನ್ನುವ ಚರ್ಚೆ ತೀವ್ರವಾಗಿದೆ. ಅದರಲ್ಲೂ ಈಗ ರಾಜ್ಯಾಧ್ಯಕ್ಷರಾಗಿರುವ ನಳಿನ್‌ ಕುಮಾರ್‌ ಕಟೀಲ್‌ (Nalin Kumar kateel) ಅವರು ಒಮ್ಮೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ಘೋಷಿಸಿ ಬಳಿಕ ಯು-ಟರ್ನ್‌ (BJP Politics) ಹೊಡೆದ ಬಳಿಕ ಚರ್ಚೆ ಬಿರುಸು ಪಡೆದುಕೊಂಡಿದೆ.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಅವರ ಅಧಿಕಾರಾವಧಿ ಮುಕ್ತಾಯಗೊಂಡು ಆಗಲೇ 10 ತಿಂಗಳೇ ಕಳೆದಿದೆ. ಅವರ ಮೂರು ವರ್ಷಗಳ ಅವಧಿ 2022ರ ಆಗಸ್ಟ್‌ 20ಕ್ಕೆ ಕೊನೆಗೊಂಡಿತ್ತು. ಆದರೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷಾಧ್ಯಕ್ಷರನ್ನು ಬದಲಾವಣೆ ಮಾಡಿರಲಿಲ್ಲ. ಇದೀಗ ಪಕ್ಷ ಹೀನಾಯವಾಗಿ ಸೋಲು ಕಂಡಿರುವ ಹಿನ್ನೆಲೆಯಲ್ಲಿ ನಳಿನ್‌ ಅವರನ್ನು ಎರಡನೇ ಅವಧಿಗೆ ಮುಂದುವರಿಸುವ ಸಾಧ್ಯತೆಯಂತೂ ಇಲ್ಲವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬದಲಾವಣೆ ಖಚಿತವಾಗಿರುವುದರಿಂದ ಯಾರು ಎಂಬ ಪ್ರಶ್ನೆ ಎದ್ದಿದೆ.

ಕಟೀಲ್‌ ಯು ಟರ್ನ್‌ ಹೊಡೆದಿದ್ದೇಕೆ?

ಶುಕ್ರವಾರ ಬಳ್ಳಾರಿಯಲ್ಲಿ ಮಾತನಾಡಿದ್ದ ನಳಿನ್‌ ಕುಮಾರ್‌ ಕಟೀಲ್‌ ಅವರು ತಾನು ಈಗಾಗಲೇ ರಾಜೀನಾಮೆ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಕೊಟ್ಟಿದ್ದೇನೆ ಎಂದಿದ್ದರು. ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾಗಿ ಹೇಳಿದ್ದರು. ಆದರೆ, ಇದು ಸುದ್ದಿಯಾಗುತ್ತಿದ್ದಂತೆಯೇ ರಾಜೀನಾಮೆ ಕೊಟ್ಟಿಲ್ಲ ಎಂಬ ಸ್ಪಷ್ಟನೆ ನೀಡಿದರು.

ನಳಿನ್‌ ಕುಮಾರ್‌ ಅವರು ರಾಜ್ಯಾಧ್ಯಕ್ಷತೆಯಲ್ಲಿರುವಾಗಲೇ ಹಲವಾರು ನಾಯಕರು ಈ ಹುದ್ದೆಗಾಗಿ ಪ್ರಬಲ ಲಾಬಿ ನಡೆಸುತ್ತಿದ್ದಾರೆ. ವಿ. ಸೋಮಣ್ಣ ಮೊದಲಾದ ನಾಯಕರು ಬಹಿರಂಗವಾಗಿಯೇ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ ಬಿಜೆಪಿ ಕೇಂದ್ರ ನಾಯಕರು ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಒಂದೊಮ್ಮೆ ಕಟೀಲ್‌ ಅವರು ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬುದು ತಿಳಿದರೆ ಇನ್ನಷ್ಟು ಮಂದಿ ಬಹಿರಂಗವಾಗಿ ಹೇಳಿಕೆ ನೀಡಲು ಆರಂಭಿಸಬಹುದು ಎಂಬ ಲೆಕ್ಕಾಚಾರದಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿದಿರಬಹುದು ಎನ್ನಲಾಗಿದೆ.

ಇದರ ಜತೆಗೆ ನಳಿನ್‌ ಕುಮಾರ್‌ ಕಟೀಲ್‌ ಅವರು ರಾಜೀನಾಮೆ ನೀಡಿದ್ದರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದರೆ ಹೈಕಮಾಂಡ್‌ ರಾಜ್ಯ ಬಿಜೆಪಿ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂಬ ಸಂದೇಶ ರವಾನೆಯಾದೀತು ಎಂಬ ಕಾರಣಕ್ಕೆ ನಳಿನ್‌ ಅವರು ಯು ಟರ್ನ್‌ ಹೊಡೆದರು ಎನ್ನಲಾಗುತ್ತಿದೆ.

ಹಾಗಿದ್ದರೆ ಯಾರಿಗೆ ಸಿಗಬಹುದು ನಾಯಕತ್ವ

ಕಟೀಲ್‌ ಹೇಳಿಕೆ, ಯು ಟರ್ನ್‌ ಏನೇ ಇದ್ದರೂ ಬಿಜೆಪಿ ಹೊಸ ರಾಜ್ಯಾಧ್ಯಕ್ಷನನ್ನು ನೇಮಕ ಮಾಡುವುದು ಅನಿವಾರ್ಯವಾಗಿದೆ. ಅದರ ಜತೆಗೆ ಬಿಜೆಪಿ ಶಾಸಕಾಂಗ ಪಕ್ಷ ನಾಯಕನ ಆಯ್ಕೆಯನ್ನು ಜುಲೈ ಮೂರರಂದು ಆರಂಭವಾಗಲಿರುವ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಮುನ್ನ ಮಾಡಲೇಬೇಕಾಗಿದೆ.

ರಾಜ್ಯದಲ್ಲಿ ಬಿಜೆಪಿ ಸೋತಿದ್ದರೂ ಕೇಸರಿ ಪಡೆಯನ್ನು ಮುನ್ನಡೆಲು ಹಲವು ನಾಯಕರು ಉತ್ಸುಕತೆ ತೋರಿದ್ದಾರೆ. ಮೂರು ಪ್ರಮುಖ ಸಮುದಾಯದ ನಾಯಕರಿಂದ ಹುದ್ದೆಗಾಗಿ ಫೈಟ್‌ ನಡೆಯುತ್ತಿದೆ. ಒಕ್ಕಲಿಗ, ಲಿಂಗಾಯತ ಮತ್ತು ಹಿಂದುಳಿದ ಸಮುದಾಯದಿಂದ ನಾಯಕರು ತಮಗೆ ಹುದ್ದೆ ಬೇಕು ಎಂದು ಕೇಳುತ್ತಿದ್ದಾರೆ.

ಇದುವರೆಗೆ ಆರ್. ಅಶೋಕ್, ಸಿ.ಎನ್‌ ಅಶ್ವಥ್ ನಾರಾಯಣ್, ಶೋಭಾ ಕರಂದ್ಲಾಜೆ, ಬಸನಗೌಡ ಪಾಟೀಲ್‌ ಯತ್ನಾಳ್, ಸುನಿಲ್‌ ಕುಮಾರ್ ಅವರ ಹೆಸರು ಈ ಹುದ್ದೆಗೆ ಕೇಳಿಬರುತ್ತಿತ್ತು. ಆದರೆ, ಇದೀಗ ಮಾಜಿ ಸಚಿವ ವಿ ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನ ನನಗೆ ನೀಡಿ ಎಂದು ಬಹಿರಂಗವಾಗಿ ಕೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸೋಮಣ್ಣ ಅವರಿಗೆ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಿದರೆ ಸಾಕಷ್ಟು ಹಿರಿತನ ಹೊಂದಿರುವ ಸೋಮಣ್ಣಗೆ ಅವಕಾಶ ನೀಡಲೂಬಹುದು. ಈ ನಡುವೆ ಸಾಕಷ್ಟು ಕಡೆಯಿಂದ ಲಾಬಿ ಮಾಡುತ್ತಿರುವ ಸೋಮಣ್ಣ ಅವರು ಬಿಎಸ್‌ವೈ ಪುತ್ರ ವಿಜಯೇಂದ್ರ ಅವರು ಯಾವ ಕಾರಣಕ್ಕೂ ಈ ಹುದ್ದೆಗೆ ಏರಬಾರದು ಎಂಬ ಕಾರಣಕ್ಕೆ ಚೆಕ್‌ ಮೇಟ್‌ ಇಟ್ಟಿದ್ದಾರಾ ಎಂಬ ಪ್ರಶ್ನೆಯೂ ಕೇಳಿಬಂದಿದೆ.

ಇದನ್ನೂ ಓದಿ: ‌Nalin kumar Kateel: ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ; ಯು ಟರ್ನ್‌ ಹೊಡೆದ ನಳಿನ್‌ ಕಟೀಲ್‌

ಹಾಗಿದ್ದರೆ ಯಾವ ಕೋಟದಲ್ಲಿ ಯಾರ ಹೆಸರಿದೆ?

ಲಿಂಗಾಯತ ಕೋಟಾದಲ್ಲಿ: ವಿ.ಸೋಮಣ್ಣ, ಬಿ.ವೈ ವಿಜಯೇಂದ್ರ, ಅರವಿಂದ್ ಬೆಲ್ಲದ್
ಒಕ್ಕಲಿಗ ಕೋಟಾದಲ್ಲಿ: ಸಿ.ಟಿ ರವಿ, ಶೋಭಾ ಕರಂದ್ಲಾಜೆ, ಆರ್ ಆಶೋಕ್, ಡಾ. ಸಿ.ಎನ್. ಅಶ್ವಥ್ ನಾರಾಯಣ
ಓಬಿಸಿ ಕೋಟಾದಲ್ಲಿ:‌ ಸುನಿಲ್ ಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ

ಇಷ್ಟೆಲ್ಲ ಹೆಸರುಗಳಿದ್ದರೂ ಬಿಜೆಪಿ ಶಾಸಕಾಂಗ ಪಕ್ಷ ನಾಯಕನ ಅಂತಿಮವಾಗದೆ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಅಂತಿಮವಾಗುವುದಿಲ್ಲ ಎಂಬ ಮಾತಿದೆ. ಒಂದು ವೇಳೆ ಬಿಜೆಪಿ ಶಾಸಕಾಂಗ ಪಕ್ಷಕ್ಕೆ ಲಿಂಗಾಯತರನ್ನು ನಾಯಕರನ್ನಾಗಿ ಮಾಡಿದರೆ ಬಿಜೆಪಿ ರಾಜ್ಯಾಧ್ಯಕ್ಷತೆ ಒಕ್ಕಲಿಗರು ಇಲ್ಲವೇ ಒಬಿಸಿ ವರ್ಗಕ್ಕೆ ಒಲಿಯಲಿದೆ. ಒಕ್ಕಲಿಗರಿಗೆ ಶಾಸಕಾಂಗ ಪಕ್ಷ ನಾಯಕನ ಸ್ಥಾನ ನೀಡಿದರೆ ಬಿಜೆಪಿ ಅಧ್ಯಕ್ಷತೆ ಲಿಂಗಾಯತರಿಗೆ ಸಿಗುವ ಸಾಧ್ಯತೆ ಇದೆ.

Exit mobile version