Site icon Vistara News

Ravana controversy | ಖರ್ಗೆಯನ್ನು ಧೃತರಾಷ್ಟ್ರನಿಗೆ ಹೋಲಿಸಿದ ರವಿಕುಮಾರ್‌, ಸೋನಿಯಾಗೂ ಪುತ್ರ ವ್ಯಾಮೋಹ ಅಂದ್ರು

congress-protest-on netaji subhashchandra bose birthday is disgrace to freedom fighter

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ʻರಾವಣʼನಿಗೆ ಹೋಲಿಸಿದರೆಂಬ ವಿವಾದಕ್ಕೆ (Ravana controversy) ಸಂಬಂಧಿಸಿ ರಾಜ್ಯ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್‌. ರವಿಕುಮಾರ್‌ ಮತ್ತು ಮಹೇಶ್ ಟೆಂಗಿನಕಾಯಿ ಪ್ರತ್ಯೇಕವಾಗಿ ಮಾತನಾಡಿ ಖರ್ಗೆ ವಿರುದ್ಧ ಹರಿಹಾಯ್ದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಧೃತರಾಷ್ಟ್ರನಿಗೆ ಹೋಲಿಸಿದ ಎಮ್‌ಎಲ್‌ಸಿ ಎನ್ ರವಿಕುಮಾರ್ ಅವರು, ಖರ್ಗೆಯವರ ಪುತ್ರ ವ್ಯಾಮೋಹದಿಂದ ಕಲಬುರ್ಗಿ ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ ಅಂತ ಇಡೀ ರಾಜ್ಯಕ್ಕೇ ಗೊತ್ತು. ಪುತ್ರ ವ್ಯಾಮೋಹದಿಂದ ಅರ್ಹರಾಗಿದ್ದ ಬೇರೆಯವರಿಗೆ ಸಚಿವ ಸ್ಥಾನ ಕೊಡದೇ ಪುತ್ರನಿಗೇ ಕೊಡಿಸಿದರು. ಖರ್ಗೆಯವರು ಪುತ್ರ ವ್ಯಾಮೋಹದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಇದೇ ವೇಳೆ ಸೋನಿಯಾ ಗಾಂಧಿ ಅವರಿಗೂ ಪುತ್ರ ವ್ಯಾಮೋಹದಿಂದ ಧೃತರಾಷ್ಟ್ರನಂತೆ ಕಣ್ಣು ಕುರುಡಾಗಿದೆ ಎಂದು ಹೇಳಿದರು. ʻʻಅವರ ಕುಟುಂಬದವರೇ ಉನ್ನತ ಹುದ್ದೆ ಅಲಂಕರಿಸಬೇಕು, ರಾಷ್ಟ್ರಾಧ್ಯಕ್ಷರ ಹುದ್ದೆ ಗೆ ಬರಬೇಕು ಅಂತ ಬಯಸುವವರು ಸೋನಿಯಾ ಗಾಂಧಿʼʼ ಎಂದರು ರವಿ ಕುಮಾರ್‌.

ಸೋನಿಯಾ ಗಾಂಧಿ, ಖರ್ಗೆಗೆ ಹೊಟ್ಟೆ ಉರಿ
ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಗಳು ಮತ್ತು ಜನಮೆಚ್ಚುಗೆಯನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಹೊಟ್ಟೆ ಕಿವುಚಿಕೊಳ್ಳುತ್ತಿದೆ ಎಂದು ರವಿಕುಮಾರ್‌ ಹೆಳಿದರು.

ಹಲವು ಬಾರಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಒಬ್ಬ ಮುತ್ಸದ್ದಿಯಂತೆ ಹೇಳಿಕೆ ಕೊಡಬೇಕಿತ್ತು. ಇಡೀ ಜಗತ್ತೇ ನರೇಂದ್ರ ಮೋದಿಯವರತ್ತ ನೋಡುವುದನ್ನು ಸಹಿಸಲಾಗದ ಕಾಂಗ್ರೆಸ್ ಪಕ್ಷವು, ರಾವಣ ಶಬ್ದ ಬಳಸಿದ್ದು ಆ ಪಕ್ಷಕ್ಕೇ ನಾಚಿಕೆಗೇಡಿನ ಸಂಗತಿ. ಮಲ್ಲಿಕಾರ್ಜುನ ಖರ್ಗೆಯವರು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಬೊಮ್ಮಾಯಿ ಟೀಕೆಗೆ ಆಕ್ಷೇಪ
ಸಿಎಂ ಬೊಮ್ಮಾಯಿ ಅವರ ದಿಲ್ಲಿ ಭೇಟಿ ವೇಳೆ ನಾಯಕರು ಮಾತುಕತೆ ಸಿಗುತ್ತಿಲ್ಲ ಎಂದು ಕಾಂಗ್ರೆಸ್‌ ಗೇಲಿ ಮಾಡಿದ್ದನ್ನು ಖಂಡಿಸಿದ ರವಿಕುಮಾರ್‌, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ತಾವು ಸೋನಿಯಾ ಅವರ ಮನೆ ಮುಂದೆ ಕಾಯುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳಬೇಕು. ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್, ದೆಹಲಿಗೆ ಹೋಗಿ ರಾಹುಲ್ ಗಾಂಧಿ- ಸೋನಿಯಾ ಗಾಂಧಿಯವರ ಭೇಟಿ ಸಿಗದೆ ವಾಪಸಾದುದನ್ನು ನೆನಪಿಸಲೇ ಎಂದು ಪ್ರಶ್ನಿಸಿದರು.

ಫೈಟರ್ ರವಿ ಬಿಜೆಪಿ ಸೇರಿದ್ದರ ಬಗ್ಗೆ ಕಾಂಗ್ರೆಸ್ ಟೀಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಗೂಂಡಾ ಸಂಸ್ಕøತಿ ಇರುವವರ ದೊಡ್ಡ ಪಟ್ಟಿ ಇದೆ; ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಉತ್ತರಿಸಿದರು. ಕಾಂಗ್ರೆಸ್ ಪಕ್ಷ ಮುಳುಗುವ ಹಡಗಾಗಿದೆ. ಬಿಜೆಪಿ ಬೆಳವಣಿಗೆಯನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್‌ ಸಂಸ್ಕೃತಿ ಅನಾವರಣ ಎಂದ ಟೆಂಗಿನಕಾಯಿ
ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಅವರು ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ರಾವಣ ಎಂಬ ಶಬ್ದವನ್ನು ಬಳಸುವ ಮೂಲಕ ಖರ್ಗೆ ಅವರು ಕಾಂಗ್ರೆಸ್ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ ಎಂದರು.

ಪ್ರಿಯಾಂಕ್ ಖರ್ಗೆಯವರು ಕ್ಷೇತ್ರದಲ್ಲಿಲ್ಲ ಎಂದು ಪೋಸ್ಟರ್ ಅಂಟಿಸಿದ ಕುರಿತು ಅವರು ಮೊದಲು ಉತ್ತರಿಸಲಿ. ಹಿಂದೂಗಳನ್ನು ಟೀಕಿಸುವುದು ಸಲೀಸು ಎಂದು ಅನೇಕರು ತಿಳಿದುಕೊಂಡಿದ್ದಾರೆ. ನಮಗೆ ಹಿಂದೂಗಳ ಮತ ಬೇಡ ಎಂದು ಕಾಂಗ್ರೆಸ್ ಪಕ್ಷದವರು ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಲಿ ಎಂದು ಸವಾಲೆಸೆದರು.

ಇದನ್ನೂ ಓದಿ | ಪ್ರಧಾನಿ ಮೋದಿ ರಾವಣನಿದ್ದಂತೆ, ಪ್ರತಿ ಚುನಾವಣೆಯಲ್ಲೂ ಅವರ 10 ತಲೆ ಗೋಚರಿಸುತ್ತದೆ: ಮಲ್ಲಿಕಾರ್ಜುನ್​ ಖರ್ಗೆ ವಾಗ್ದಾಳಿ

Exit mobile version