Site icon Vistara News

SC ST Reservation: ಮೀಸಲಾತಿ ಲಾಭ ಪಡೆಯಲು ಬಿಜೆಪಿ ಸಿದ್ಧತೆ: ಹುಬ್ಬಳ್ಳಿಯಲ್ಲಿ ಅಭಿನಂದನಾ ಸಮಾವೇಶ

#image_title

ಬೆಂಗಳೂರು: ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳ ಹಾಗೂ ಒಳಮೀಸಲಾತಿ ನಿರ್ಧಾರಗಳನ್ನು ಮತಗಳನ್ನಾಗಿ ಪರಿವರ್ತಿಸಲು ಬಿಜೆಪಿ ಮುಂದಾಗಿದೆ. ಈ ಸಂಬಂಧ ಏಪ್ರಿಲ್ 6ರಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇದಕ್ಕೆ ಕಾರಣರಾದವರನ್ನು ರಾಜ್ಯ ಪರಿಶಿಷ್ಟ ಜಾತಿ ಸಮುದಾಯಗಳ ಒಕ್ಕೂಟದ ಮೂಲಕ ಅಭಿನಂದಿಸಲು ಮುಂದಾಗಿದೆ.

ಈ ಕುರಿತು ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಬೊಮ್ಮಾಯಿ ಸರ್ಕಾರದ ಕ್ರಮವನ್ನು ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳು ಸ್ವಾಗತ ಮಾಡಿವೆ. ಇದೇ ಕಾರ್ಯಕ್ರಮದಲ್ಲಿ ಸಿಎಂ ಅವರಲ್ಲದೆ, ಮಂತ್ರಿಮಂಡಲದ ಸದಸ್ಯರು, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಎಸ್‍ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಕ್ಯಾಬಿನೆಟ್ ಉಪ ಸಮಿತಿಯ ಮಾಧುಸ್ವಾಮಿ ಸಮಿತಿ ಸದಸ್ಯರನ್ನು ಅಭಿನಂದಿಸಲಾಗುತ್ತದೆ. ರಾಜ್ಯದ ವಿವಿಧ ಮೋರ್ಚಾಗಳ, ಎಲ್ಲ ವರ್ಗಗಳ ಮುಖಂಡರು, ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಬೇಕೆಂದು ವಿನಂತಿಸಿದರು.

ಹಲವು ದಶಕಗಳ ಹೋರಾಟಕ್ಕೆ ಸಿಕ್ಕಿದ ಗೆಲುವು ಇದಾಗಿದೆ. ಸಾಮಾಜಿಕ ನ್ಯಾಯದ ಪರವಾಗಿ ನಮ್ಮ ಸರ್ಕಾರ ಇದೆ. ಒಳ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಅನುಮತಿಗಾಗಿ ಕಳುಹಿಸಲಾಗಿದೆ. ಇದನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕಿದೆ. ಒಳ ಮೀಸಲಾತಿ ಸಂಬಂಧ ಕೆಲವೆಡೆ ಇರುವ ಗೊಂದಲಗಳನ್ನು ನಿವಾರಿಸಲಾಗುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರು ಈ ಕುರಿತು ಮಾಹಿತಿ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರು ಈ ಸಂಬಂಧ ಸಂಬಂಧಿತರಿಗೆ ಶಿವಮೊಗ್ಗದಲ್ಲಿ ಮಾಹಿತಿ ನೀಡಿದ್ದಾರೆ.

ಬಂಜಾರ, ಬೋವಿ ಮತ್ತಿತರ ಸಮಾಜಗಳನ್ನು ಪರಿಶಿಷ್ಟ ಪಟ್ಟಿಯಿಂದ ಹೊರತೆಗೆಯಬೇಕೇ ಎಂದು ಕೇಳಿ ಕಾಂಗ್ರೆಸ್ ಸರ್ಕಾರ ಇದ್ದಾಗ ರಾಷ್ಟ್ರೀಯ ಆಯೋಗವು ಪತ್ರ ಬರೆದಿತ್ತು. ಆದರೆ, ಕಾಂಗ್ರೆಸ್‍ನವರು ಉತ್ತರ ಕೊಡದೆ ಈ ಕಡತವನ್ನು ಮೂಲೆಗುಂಪು ಮಾಡಿದ್ದರು. ಬಿಜೆಪಿ ಸರ್ಕಾರ, ಬೊಮ್ಮಾಯಿಯವರ ಸಚಿವ ಸಂಪುಟ ಈ ಸಮಾಜವನ್ನು ಮೀಸಲಾತಿಯಿಂದ ಕೈಬಿಡುವುದಿಲ್ಲ ಎಂದು ನಿರ್ಧರಿಸಿದೆ. ರಾಷ್ಟ್ರೀಯ ಆಯೋಗಕ್ಕೂ ಈ ಕುರಿತು ಪತ್ರ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಅವರೂ ಈ ವಿಚಾರವನ್ನು ಬೆಂಬಲಿಸಿ ಮೀಸಲಾತಿ ಮುಂದುವರಿಸುವ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ. ಅವರ ನಿರ್ಣಯವನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರವು ತಾಂಡಾಗಳನ್ನು ಕಂದಾಯ ಗ್ರಾಮ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಆದರೆ 7 ವರ್ಷಗಳ ಕಾಲ ಒಂದೇ ಒಂದು ಗ್ರಾಮವನ್ನು ಕಂದಾಯ ಗ್ರಾಮವಾಗಿ ಘೋಷಿಸಲಿಲ್ಲ. ಗಜೆಟ್ ಅಧಿಸೂಚನೆ ಹೊರಡಿಸಲಿಲ್ಲ ಎಂದು ಟೀಕಿಸಿದರು.

ಗೊಂದಲ, ತಪ್ಪು ವ್ಯಾಖ್ಯಾನಗಳಿಗೆ ಕಿವಿಕೊಡದಿರಿ. ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಲಿದ್ದೇನೆ. ಒಳಮೀಸಲಾತಿ ವರ್ಗೀಕರಣ ಸಂಬಂಧ ಕಾಂಗ್ರೆಸ್ಸಿನ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸರ್ಕಾರಗಳು ಕೇಂದ್ರದ ಕಾಂಗ್ರೆಸ್ ಸರ್ಕಾರಕ್ಕೆ ಶಿಫಾರಸು ಮಾಡಿದ್ದವು. ಈ ಕುರಿತು ಒಟ್ಟಾಗಿ ಪರಿಶೀಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸುಪ್ರೀಂ ಕೋರ್ಟ್ ತೀರ್ಪುಗಳು, ವಿವಿಧ ಆಯೋಗಗಳ ವರದಿಗಳನ್ನು ಅಮಿತ್ ಶಾ ಅವರು ಅಧ್ಯಯನ ಮಾಡುತ್ತಿದ್ದಾರೆ. ಆ ಬಳಿಕ ನಿರ್ಧಾರ ಬರಲಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ. ನರೇಂದ್ರಬಾಬು ಹಾಜರಿದ್ದರು.

ಇದನ್ನೂ ಓದಿ: SC ST Reservation: ಎಸ್‌ಸಿ ಪಟ್ಟಿಯಿಂದ ಬಂಜಾರ, ಭೋವಿ, ಕೊರಮ, ಕೊರಚ ಸಮಾಜವನ್ನು ಕೈಬಿಡಲ್ಲ: ಯಡಿಯೂರಪ್ಪ

Exit mobile version