Site icon Vistara News

BJP Manifesto: ‘ರಾಜ್ಯ ರಾಜಧಾನಿ ಪ್ರದೇಶ’ ರಚನೆ ಕುರಿತು ಬಿಜೆಪಿ ಭರವಸೆ; ಅಷ್ಟಕ್ಕೂ ಏನಿದು?

BJP promises to establish State Capital Region for Bengaluru; here is what it means

BJP promises to establish State Capital Region for Bengaluru; here is what it means

ಬೆಂಗಳೂರು: ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತವಾಗಿ ಅರ್ಧ ಲೀಟರ್‌ ಹಾಲು, ಉಚಿತವಾಗಿ ಸಿಲಿಂಡರ್‌ ನೀಡುವುದು ಸೇರಿ ಪ್ರಣಾಳಿಕೆಯಲ್ಲಿ (BJP Manifesto) ಹಲವು ಭರವಸೆಗಳನ್ನು ಬಿಜೆಪಿ ನೀಡಿದೆ. ಉಚಿತ ಕೊಡುಗೆಗಳ ಜತೆಗೆ ರಸ್ತೆ ನಿರ್ಮಾಣದಂತಹ ಅಭಿವೃದ್ಧಿ ಯೋಜನೆಗಳ ಮೂಲಕವೂ ಮತ ಸೆಳೆಯಲು ಮುಂದಾಗಿದೆ. ಇವುಗಳ ಜತೆಗೆ ಬೆಂಗಳೂರನ್ನು ‘ರಾಜ್ಯ ರಾಜಧಾನಿ ಪ್ರದೇಶ’ವನ್ನಾಗಿ (State Capital Region-SCR) ರೂಪಿಸುವುದಾಗಿ ಬಿಜೆಪಿ ಭರವಸೆ ನೀಡಿದೆ. ಹಾಗಾದೆ, ಏನಿದು ರಾಜ್ಯ ರಾಜಧಾನಿ ಪ್ರದೇಶ? ಇದರ ನಿರ್ಮಾಣ ಹೇಗೆ ಎಂಬುದರ ಕಿರು ಮಾಹಿತಿ ಹೀಗಿದೆ…

ಏನಿದು ರಾಜ್ಯ ರಾಜಧಾನಿ ಪ್ರದೇಶ?

ಯಾವುದೇ ರಾಜ್ಯದ ರಾಜಧಾನಿಗೂ, ರಾಜ್ಯ ರಾಜಧಾನಿ ಪ್ರದೇಶಕ್ಕೂ ವ್ಯತ್ಯಾಸವಿದೆ. ರಾಜಧಾನಿ ಎಂದರೆ ಒಂದು ದೊಡ್ಡ ಜಿಲ್ಲೆ ಅಥವಾ ನಗರ ಆಗಿರುತ್ತದೆ. ಇದರ ವ್ಯಾಪ್ತಿಗೆ ಅದೊಂದೇ ನಗರ ಇರುತ್ತದೆ. ಆದರೆ, ರಾಜ್ಯ ರಾಜಧಾನಿ ಪ್ರದೇಶ ಎಂದರೆ, ಸುತ್ತಮುತ್ತಲಿನ ಜಿಲ್ಲೆಗಳ ಪಟ್ಟಣಗಳು ಕೂಡ ಕೂಡಿರುತ್ತವೆ. ರಾಜ್ಯ ರಾಜಧಾನಿ ಪ್ರದೇಶದ ಅಭಿವೃದ್ಧಿಯ ವೇಳೆ ಈ ಜಿಲ್ಲೆಗಳು, ಪಟ್ಟಣಗಳ ಅಭಿವೃದ್ಧಿಯೂ ಆಗುತ್ತದೆ. ಹೀಗೆ, ಒಂದು ನಗರ ಅಥವಾ ರಾಜಧಾನಿ, ಜಿಲ್ಲೆಗಳ ಪಟ್ಟಣಗಳು ಕೂಡಿ ಒಂದು ಎಸ್‌ಸಿಆರ್‌ ಆಗುತ್ತದೆ.

ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಇದರಿಂದ ಏನು ಅನುಕೂಲ?

ಬೆಂಗಳೂರು ಈಗಾಗಲೇ ಐಟಿ ಸಿಟಿ ಎಂದು ಖ್ಯಾತಿಯಾಗಿದೆ. ಜಾಗತಿಕವಾಗಿ ಬೆಂಗಳೂರನ್ನು ಐಟಿ ಹಬ್‌ ಆಗಿ ರೂಪಿಸುವುದು ಬಿಜೆಪಿ ಗುರಿಯಾಗಿದೆ. ಇನ್ನೂ ಹೆಚ್ಚಿನ ಐಟಿ ಕಂಪನಿಗಳು, ಸಂಶೋಧನೆಗಳು, ಉದ್ಯೋಗ ಸೃಷ್ಟಿ, ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಉದ್ದೇಶವಿದೆ. ಬೆಂಗಳೂರನ್ನು ರಾಜ್ಯ ರಾಜಧಾನಿ ಪ್ರದೇಶವನ್ನಾಗಿ ರೂಪಿಸಿದರೆ, ಸುತ್ತಮುತ್ತಲಿನ ನಗರಗಳ ಅಭಿವೃದ್ಧಿಯಾಗುತ್ತದೆ. ತಾಲೂಕು, ಪಟ್ಟಣಗಳಿಗೂ ಆಧುನಿಕ ಸೌಲಭ್ಯ, ಕಂಪನಿ, ಮೂಲ ಸೌಕರ್ಯಗಳು ಸಿಗುತ್ತವೆ. ಉದಾಹರಣೆಗೆ, ಕನಕಪುರ, ದೇವನಹಳ್ಳಿ, ರಾಮನಗರ, ಆನೇಕಲ್‌ ಸೇರಿ ಹಲವು ಪಟ್ಟಣಗಳು ಕೂಡ ರಾಜ್ಯ ರಾಜಧಾನಿ ಪ್ರದೇಶದ ವ್ಯಾಪ್ತಿಗೆ ಬರಲಿವೆ. ಇವುಗಳ ಅಭಿವೃದ್ಧಿ ಆಗಲಿದೆ.

ಇದನ್ನೂ ಓದಿ: BJP Manifesto: ಪ್ರದೇಶವಾರು ಭರವಸೆ ನೀಡಿದ ಬಿಜೆಪಿ ಪ್ರಣಾಳಿಕೆ: ಹಳೇ ಮೈಸೂರಿಗೆ ಭರ್ಜರಿ ಆಫರ್!

ದೆಹಲಿ ಮಾದರಿ, ಉತ್ತರ ಪ್ರದೇಶದಲ್ಲಿ ಜಾರಿ

ರಾಷ್ಟ್ರ ರಾಜಧಾನಿ ದೆಹಲಿಯನ್ನು ರಾಷ್ಟ್ರ ರಾಜಧಾನಿ ಪ್ರದೇಶವನ್ನಾಗಿ (NCR) ರೂಪಿಸಲಾಗಿದೆ. ದೆಹಲಿ, ಉತ್ತರ ಪ್ರದೇಶ, ಹರಿಯಾಣದ ಹಲವು ಜಿಲ್ಲೆಗಳು ಎನ್‌ಸಿಆರ್‌ ವ್ಯಾಪ್ತಿಗೆ ಬರುತ್ತವೆ. ಇದೇ ಮಾದರಿಯಲ್ಲಿ ಬೆಂಗಳೂರನ್ನು ಕೂಡ ಎಸ್‌ಸಿಆರ್‌ ಆಗಿ ರೂಪಿಸುವುದು ಬಿಜೆಪಿಯ ಉದ್ದೇಶವಾಗಿದೆ. ಇದೇ ಮಾದರಿಯಲ್ಲಿಯೇ ಯೋಗಿ ಆದಿತ್ಯನಾಥ್‌ ಅವರು ಉತ್ತರ ಪ್ರದೇಶ ರಾಜ್ಯ ರಾಜಧಾನಿ ಪ್ರದೇಶ (UPSCR) ಯೋಜನೆಯನ್ನು ರೂಪಿಸಿದ್ದಾರೆ.

Exit mobile version