Site icon Vistara News

BJP Protest :‌ ಗ್ಯಾರಂಟಿಗೆ ಕಂಡಿಷನ್‌ ಹಾಕಿ ಮೋಸ ಮಾಡಿದ್ರೆ ಹುಷಾರ್ ; ಕಾಂಗ್ರೆಸ್‌ಗೆ ಬಿಜೆಪಿ ಕಂಡಿಷನ್‌

BJP Protest

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರಕಾರ (Congress Government) ತಾನು ಚುನಾವಣಾ ಪ್ರಣಾಳಿಕೆಯಲ್ಲಿ (Congress Manifesto) ಘೋಷಣೆ ಮಾಡಿದ ಐದೂ ಗ್ಯಾರಂಟಿಗಳ (Congress Guarantee) ಜಾರಿಯಲ್ಲಿ ಕಂಡಿಷನ್‌ಗಳನ್ನು ಹಾಕಿ ಮೋಸ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ (BJP Party) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ (BJP protest at Freedom Park) ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿಗಳಿಗೆ ಕಂಡಿಷನ್‌ (Conditions for Guarantee) ಹಾಕಬಾರದು, ಮತಾಂತರ ನಿಷೇಧ ಕಾಯಿದೆ, ಗೋಹತ್ಯೆ ನಿಷೇಧ ಕಾಯಿದೆಯನ್ನು ಹಿಂದಕ್ಕೆ ಪಡೆಯಬಾರದು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ನಾಯಕರು ಆಗ್ರಹಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಘೋಷಿಸಿದ ಮಹತ್ವದ ಹೋರಾಟ ಇದಾಗಿದ್ದು, ಬಿಜೆಪಿಯ ಎಲ್ಲ ನಾಯಕರು ಅವರ ಬೆಂಬಲಕ್ಕೆ ನಿಂತಿದ್ದಾರೆ.

ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕರು ವಿಧಾನಸೌಧದ ಒಳಗೆ ಹೋರಾಟ ನಡೆಸಿದರೆ ಬಿ.ಎಸ್‌. ಯಡಿಯೂರಪ್ಪ ಅವರು ಸದನದ ಹೊರಗೆ ಎಲ್ಲ ನಾಯಕರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದ್ದರು. ಸದನ ನಡೆಯುವ ಎಲ್ಲ ದಿನಗಳಲ್ಲೂ ದಿನಪೂರ್ತಿ ಪ್ರತಿಭಟನೆ ನಡೆಯಲಿದೆ ಎಂದು ಬಿಎಸ್‌ವೈ ಪ್ರಕಟಿಸಿದ್ದರು. ಅದರ ಭಾಗವಾಗಿ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭಗೊಂಡಿದೆ.

ಬಿಜೆಪಿಯ ಪ್ರತಿಭಟನೆಯ ದೃಶ್ಯಾವಳಿ

ಬಿಜೆಪಿ ಕೇಂದ್ರ ಸಲಹಾ ಮಂಡಳಿಯ ಸದಸ್ಯರಾಗಿರುವ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಗೋಪಾಲಯ್ಯ, ಬಿಜೆಪಿ ವಕ್ತಾರ ಎನ್‌. ರವಿ ಕುಮಾರ್‌‌, ಮಾಜಿ ಸಚಿವರಾದ ಬಿ.ಸಿ ನಾಗೇಶ್, ನಾಯಕರಾದ ಮಾಲಿಕಯ್ಯ ಗುತ್ತೆದಾರ್, ನಟಿ‌ ತಾರಾ, ಎನ್ ಮಹೇಶ್, ಹರತಾಳು ಹಾಲಪ್ಪ, ಸೋಮಶೇಖರ್ ರೆಡ್ಡಿ, ಡಿ ಎನ್ ಜೀವರಾಜ್, ಮಾಜಿ ಐಪಿಎಸ್ ಅನಿಲ್ ಕುಮಾರ್, ಸಪ್ತಗಿರಿಗೌಡ, ನೆ ಲ ನರೇಂದ್ರ ಬಾಬು ಹಲವು ಮಂದಿ ಭಾಗವಹಿಸಿದ್ದಾರೆ.

ಬಿಜೆಪಿಯ ಪ್ರತಿಭಟನೆಯ ದೃಶ್ಯಾವಳಿ ಇಲ್ಲಿದೆ

ಸುಳ್ಳು ಹೇಳಿ ಅಸ್ತಿತ್ವಕ್ಕೆ ಬಂದ ಸರ್ಕಾರ

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು, ಐದು ಭಾಗ್ಯವನ್ನು ಘೋಷಿಸಿ ಜನರಿಗೆ ಸುಳ್ಳು ಹೇಳಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕೊಟ್ಟ ಗ್ಯಾರಂಟಿಯನ್ನ ಯಾವುದೇ ಕಂಡಿಷನ್ ಇಲ್ಲದೇ ಅನುಷ್ಠಾನ ಮಾಡ್ಬೇಕು ಎಂದು ಆಗ್ರಹಿಸಿದರು.

ನಮ್ಮ ಸರ್ಕಾರ ಜಾರಿಗೆ ತಂದ ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯಿದೆಗಳನ್ನು ಕಾಂಗ್ರೆಸ್‌ ಸರ್ಕಾರ ವಾಪಸ್‌ ಪಡೆಯಲು ಸಂಚು ನಡೆಸಿದೆ. ಇದರ ವಿರುದ್ಧ ತೀವ್ರ ಹೋರಾಟ ಸಂಘಟಿಸಲಾಗುವುದು ಎಂದು ಹೇಳಿದರು.

ಸುಳ್ಳು ಹೇಳೋದು ಕಾಂಗ್ರೆಸ್‌ನ ಡಿಎನ್‌ಎಯಲ್ಲಿದೆ

ಕೊಳ್ಳೇಗಾಲದ ಮಾಜಿ ಶಾಸಕ ಮಹೇಶ ಅವರು ಮಾತನಾಡಿ, ʻʻಸುಳ್ಳು ಹೇಳೋದು ಕಾಂಗ್ರೆಸ್ ಪಕ್ಷದ ಡಿಎನ್‌ಎನಲ್ಲೇ ಇದೆ. ಬಡವರನ್ನು ಬಡವರಾಗಿಯೇ ಇಡೋದು ಕಾಂಗ್ರೆಸ್‌ನ ನೀತಿ. ಸಿದ್ದರಾಮಯ್ಯ ಅವರು ರಾಜ್ಯಪಾಲರಿಂದ‌ ಸುಳ್ಳು ಹೇಳಿಸಿದ್ದಾರೆ. 5 ಕೆಜಿ ಅಕ್ಕಿಯನ್ನು ಕೊಡಲಾಗುತ್ತಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ್ದಾರೆ. ಆದರೆ, 5 ಕೆಜಿ ಅಕ್ಕಿಯನ್ನು ಕೇಂದ್ರ ಕೊಡುತ್ತಿದೆ ಎಂದು ಎಲ್ಲಿಯೂ ಹೇಳಿಲ್ಲʼʼ ಎಂದರು.

ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ʻʻನಾವು ಈಗ ಸೋತಿರಬಹುದು. ಆದರೆ ನಾವೆಲ್ಲ ಭವಿಷ್ಯದ ಬಿಜೆಪಿ ಶಾಸಕರು ಅಂತ ಹೇಳಲು ಬಯಸುತ್ತೇನೆ. ಕಾಂಗ್ರೆಸ್ ಏನು ಜವಾಬ್ದಾರಿ ಇದೆಯೋ ಅದೇ ರೀತಿ ವಿಪಕ್ಷಕ್ಕೂ ಹೆಚ್ಚಿನ ಜವಾಬ್ದಾರಿ ಇದೆʼʼ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿ ಕುಮಾರ್‌ ಅವರು ಮಾತನಾಡುತ್ತಾ ಬಾಯಿತಪ್ಪಿ, ನಾಡದ್ರೋಹಿ, ವಚನಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಹೇಳಿದರು.

ಇದನ್ನೂ ಓದಿ: Assembly Session: ನಿಲುವಳಿಗೆ ʼಮೊಂಡಾಟʼ ಮಾಡಿದ ಬಿಜೆಪಿ: ಇಂತಹ ಸಂಪ್ರದಾಯವೇ ಇಲ್ಲ ಎಂದ ಸಿಎಂ

Exit mobile version