Site icon Vistara News

Karnataka Politics : ರಾಜ್ಯ ಸರ್ಕಾರಕ್ಕೆ ಬಿಜೆಪಿ ಮೂರನೇ ಬಾಣ;‌ ಕೃಷಿ ನೀತಿ ವಿರುದ್ಧ ಜನಾಂದೋಲನ

BJP Raitha Morcha Protest against State congress Government

ಬೆಂಗಳೂರು: ಈ ಬಾರಿ ಗ್ಯಾರಂಟಿ ಯೋಜನೆಗಳ (Congress Guarantee Scheme) ಮೂಲಕ ಜನರ ಮನಸ್ಸನ್ನು ಗೆದ್ದು 135 ಸೀಟುಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದ ಕಾಂಗ್ರೆಸ್‌ಗೆ ಹೆಜ್ಜೆ ಹೆಜ್ಜೆಗೂ ಮುಳ್ಳಾಗುವ ನಿಟ್ಟಿನಲ್ಲಿ ಬಿಜೆಪಿ ರಾಜಕೀಯ ರಣತಂತ್ರವನ್ನು (BJP Politics) ಹೆಣೆಯುತ್ತಿದೆ. ಈಗಾಗಲೇ ಉಡುಪಿ ವಿಡಿಯೊ, ಎಸ್‌‌‌ಸಿ-ಎಸ್‌‌ಟಿ ನಿಧಿ (SC ST Fund) ವಿಷಯವಾಗಿ ಸರ್ಕಾರದ ವಿರುದ್ಧ ಜನಾಂದೋಲನ ಮಾಡುತ್ತಿರುವ ಬಿಜೆಪಿ ಈಗ ರೈತರ ವಿಷಯವನ್ನು ಕೈಗೆತ್ತಿಕೊಂಡಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಮೂರನೇ ಠಕ್ಕರ್‌‌ ಕೊಡಲು ಬಿಜೆಪಿ ಮುಂದಾಗಿದೆ. ಸೋಮವಾರವೇ ಪ್ರತಿಭಟನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ರೈತರ ವಿಷಯದಲ್ಲಿ ಸರ್ಕಾರ ಜನವಿರೋಧಿ ಧೋರಣೆ ತಾಳುತ್ತಿದೆ ಎಂದು ಮನದಟ್ಟು ಮಾಡುವ ಪ್ರಯತ್ನವನ್ನು ನಡೆಸಲಾಗುತ್ತಿದೆ. ರಾಜ್ಯ ರಾಜಕೀಯದಲ್ಲಿ (Karnataka Politics) ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಕಾಂಗ್ರೆಸ್‌ಗೆ ಈಗ ಮತ್ತೊಂದು ತಲೆನೋವು ಶುರುವಾದಂತೆ ಆಗಿದೆ.

ರಾಜ್ಯ ಸರ್ಕಾರಕ್ಕೆ ಮೂರನೇ ವಿಚಾರದಲ್ಲಿ ಪ್ರತಿಭಟನೆಯ ಬಿಸಿ ತಟ್ಟಲಿದೆ. ರೈತರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬುದು ಬಿಜೆಪಿಯ ವಾದವಾಗಿದೆ. ಈಗಾಗಲೇ ಉಡುಪಿ ವಿದ್ಯಾರ್ಥಿನಿ ವಿಡಿಯೊ ಪ್ರಕರಣದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಈ ಸಂಬಂಧ ರಾಜ್ಯಾದ್ಯಂತ ಪ್ರತಿಭಟಿಸಿ ಅಜೆಂಡಾವನ್ನು ಕಮಲ ಪಕ್ಷ ಸೆಟ್‌ ಮಾಡಿದೆ.

ಇದನ್ನೂ ಓದಿ: Weather report : ಕರಾವಳಿ, ಮಲೆನಾಡಿನಲ್ಲಿಂದು ಜಿಟಿ ಜಿಟಿ ಮಳೆ

ಇನ್ನು ಎಸ್‌‌ಸಿ-ಎಸ್‌‌ಟಿ ಸಮುದಾಯದ ನಿಧಿ ಬಳಕೆ ವಿರುದ್ಧ ಎರಡನೇ ಪ್ರತಿಭಟನೆ ನಡೆಸಿತ್ತು. ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗೆ 11 ಸಾವಿರ ಕೋಟಿ ರೂಪಾಯಿಗಳ ಬಳಕೆ ಮಾಡಿಕೊಳ್ಳಲಾಗಿದೆ. ಇದು ಕಾನೂನು ಉಲ್ಲಂಘನೆಯಾಗಿದೆ. ಎಸ್‌ಸಿ-ಎಸ್‌ಟಿ ನಿಧಿಯನ್ನು ಹೀಗೆ ಅನ್ಯ ಕೆಲಸಗಳಿಗೆ ಬಳಕೆ ಮಾಡಬಾರದು ಎಂಬ ನಿಯಮವಿದ್ದರೂ ಬಳಕೆ ಮಾಡಲಾಗಿದೆ. ಇದು ಜನವಿರೋಧಿ ಕ್ರಮ ಎಂದು ಬಿಜೆಪಿ ಬೀದಿಗೆ ಇಳಿದಿತ್ತು.

ರೈತಪರ ಯೋಜನೆಗಳ ಸ್ಥಗಿತ

ಈಗ ಮೂರನೆಯ ವಿಷಯವಾಗಿ ಕೃಷಿ ಕ್ಷೇತ್ರವನ್ನು ಕೈಗೆತ್ತಿಕೊಂಡ ಬಿಜೆಪಿಯು ರೈತರಲ್ಲಿ ಸರ್ಕಾರದ ವಿರುದ್ಧ ಭಾವನೆಗಳನ್ನು ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ಬಿಜೆಪಿ ಸರ್ಕಾರ ತಂದಿದ್ದ ರೈತ ಪರ ಯೋಜನೆಗಳನ್ನು ಕಾಂಗ್ರೆಸ್‌‌‌ ಕೈಬಿಟ್ಟಿದೆ. ಎಪಿಎಂಸಿ ಕಾನೂನು ರದ್ದತಿ, ವಿದ್ಯುತ್ ದರ ಏರಿಕೆ, ರೈತ ವಿದ್ಯಾನಿಧಿ ಸ್ಥಗಿತ, ಜಿಲ್ಲೆಗೊಂದು ಗೋಶಾಲೆ ಸ್ಥಗಿತ, ಕಿಸಾನ್‌ ಸಮ್ಮಾನ್‌‌‌‌‌‌ ನಿಧಿಗಾಗಿ ರಾಜ್ಯ ಸರ್ಕಾರ ನೀಡುತ್ತಿದ್ದ 4 ಸಾವಿರ ರೂಪಾಯಿಯನ್ನು ಸ್ಥಗಿತ ಮಾಡಿದ್ದು, ಇದು ರೈತ ವಿರೋಧಿ ಸರ್ಕಾರ ಎಂದು ಮನದಟ್ಟು ಮಾಡುವ ಕಾರ್ಯಕ್ಕೆ ಬಿಜೆಪಿ ಕೈಹಾಕಿದೆ.

ಯೋಜನೆ ರದ್ದತಿ ಬಗ್ಗೆ ಆಕ್ರೋಶ

ಇನ್ನು ಕೃಷಿ ಭೂಮಿ ಮಾರಾಟ ಕಾಯ್ದೆಯನ್ನು ಬಿಗಿ ಮಾಡಿದೆ, ನೀರಾವರಿ ಯೋಜನೆಗಳ ನಿರ್ಲಕ್ಷ್ಯ ಮಾಡುತ್ತಿದೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ರದ್ದು, ಜೀವನ್ ಜ್ಯೋತಿ ವಿಮಾ ಯೋಜನೆಯನ್ನೂ ರದ್ದು, ರೈತ ಸಂಪದ ಯೋಜನೆ ರದ್ದು, ಸಹಸ್ರ ಸರೋವರ ಮತ್ತು ಸಹ್ಯಾದ್ರಿ ಸಿರಿ ಯೋಜನೆ ರದ್ದು, ಮೀನುಗಾರರಿಗೆ ವಸತಿ ಯೋಜನೆ ರದ್ದು ಸೇರಿದಂತೆ ಕಲ್ಯಾಣ ಕರ್ನಾಟಕದ ಕೃಷಿ ಕ್ಲಸ್ಟರ್ ಅನ್ನು ಸಹ ಕೈಬಿಡಲಾಗಿದೆ ಎಂಬ ಸಂಗತಿಯನ್ನು ಜನರಿಗೆ ಹೋರಾಟದ ಮೂಲಕ ತಿಳಿಸಲು ಬಿಜೆಪಿ ಮುಂದಾಗಿದೆ.

ಇದನ್ನೂ ಓದಿ: Karnataka Politics : ಮೇಲ್ಮನೆ ನಾಮನಿರ್ದೇಶನ; ಉಮಾಶ್ರೀ, ಸೀತಾರಾಂ, ಸುಧಾಮ್ ದಾಸ್ ಹೆಸರು ಫೈನಲ್

ಸೋಮವಾರದಿಂದ ಪ್ರತಿಭಟನೆ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಹತ್ತಾರು ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಎಲ್ಲ ಜಿಲ್ಲೆಗಳಲ್ಲಿ ರೈತ ಮೋರ್ಚಾ (BJP Raitha Morcha) ವತಿಯಿಂದ ಸೋಮವಾರ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂರನೇ ವಿಷಯದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನದಲ್ಲಿ ಕಮಲ ಪಡೆ ಕಾರ್ಯತಂತ್ರವನ್ನು ಹೆಣೆದಿದೆ.

Exit mobile version