Site icon Vistara News

BJP Protest: ಬಿಜೆಪಿ ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸರು: ಮೋದಿಗೆ ಬಯ್ದರೆ ಆಕಾಶಕ್ಕೆ ಉಗುಳಿದಂತೆ ಎಂದ ಬೊಮ್ಮಾಯಿ

BJP Protest Maurya circle

#image_title

ಬೆಂಗಳೂರು: ಗ್ಯಾರಂಟಿ ಯೋಜನೆಗಳಲ್ಲೊಂದಾದ ಅನ್ನ ಭಾಗ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ವಿರುದ್ಧವಾಗಿ ಬಿಜೆಪಿ ಪ್ರತಿಭಟನೆ ನಡೆಸಲು ರಸ್ತೆಗೆ ಇಳಿಯಿತಾದರೂ ಪೊಲೀಸರು ಅವಕಾಶ ನೀಡದೆ ಎಲ್ಲರನ್ನೂ ಕರೆದೊಯ್ದರು.

ರಾಜ್ಯ ಬಿಜೆಪಿ ಅಧುಕ್ಷ ನಳಿನ್‌ ಕುಮಾರ್‌ ಕಟೀಲ್‌ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಸಿದ್ದ ಬಿಜೆಪಿ ನಾಯಕರು, ‘ಹೇಳಿದ್ದೇನು? ಮಾಡಿದ್ದೇನು?’ ಹೋರಾಟ ನಡೆಸಲು ತೀರ್ಮಾನಿಸಿದ್ದರು. ಈ ಬಗ್ಗೆ ಮಾತನಾಡಿದ್ದ ಮಾಜಿ ಡಿಸಿಎಂ ಆರ್.‌ ಅಶೋಕ್‌, ಎಲ್ಲವೂ ಉಚಿತ ಎಂದಿದ್ದ ಕಾಂಗ್ರೆಸ್ಸಿಗರು ಈಗ ಕಂಡಿಷನ್‍ಗಳನ್ನು ಹಾಕುತ್ತಿದ್ದಾರೆ. ಕೆಲವಂತೂ ಅನುಷ್ಠಾನಕ್ಕೆ ಸಾಧ್ಯವಿಲ್ಲದ ಕಂಡಿಷನ್ ಹಾಕಿದ್ದಾರೆ. ಹಿಂದೆ ಎಲ್ಲ ನಿರುದ್ಯೋಗಿ ಪದವೀಧರ ಯುವಕರಿಗೆ 3 ಸಾವಿರ ರೂ., ಡಿಪ್ಲೊಮಾ ಪಡೆದು ನಿರುದ್ಯೋಗಿ ಆಗಿರುವವರಿಗೆ 1,500 ರೂ. ಕೊಡುವುದಾಗಿ ತಿಳಿಸಿದ್ದರು. ಈಗ 2022-23ರಲ್ಲಿ ಪದವಿ, ಡಿಪ್ಲೊಮಾ ಪಡೆದು ಆರು ತಿಂಗಳ ಪ್ರಯತ್ನದ ಬಳಿಕವೂ ಉದ್ಯೋಗ ಲಭಿಸದವರು ಎಂದು ಕಂಡಿಷನ್ ಹಾಕುತ್ತಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಹಿಂದೆಗೆತವನ್ನು ಖಂಡಿಸಿ ರಾಜ್ಯವ್ಯಾಪಿ ಹೋರಾಟ ರೂಪಿಸುತ್ತೇವೆ. ವಿಧಾನಸಭೆ ಒಳಗಡೆಯೂ ದೊಡ್ಡ ರೀತಿಯ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಆಡಳಿತ ಮಂಡಿಸುವ ಬಿಲ್ ಆಧರಿಸಿ ಹೋರಾಟದ ದಿನಾಂಕವನ್ನು ಪ್ರಕಟಿಸುತ್ತೇವೆ ಎಂದರು. ರಾಜ್ಯದ ಜನರನ್ನು ಒಳಗೊಂಡು ಜೈಲ್ ಭರೋ ಅಥವಾ ಇನ್ಯಾವುದಾದರೂ ದೊಡ್ಡ ಹೋರಾಟ ನಡೆಸುತ್ತೇವೆ ಎಂದು ಅಶೋಕ್‌ ಹೇಳಿದ್ದರು.

ಮಂಗಳವಾರ ಬೆಳಗ್ಗೆ ಮೌರ್ಯ ವೃತ್ತದಲ್ಲಿ ಆರ್‌. ಅಶೋಕ್‌, ಬಸವರಾಜ ಬೊಮ್ಮಾಯಿ, ಎನ್‌. ರವಿಕುಮಾರ್‌ ಸೇರಿ ಅನೇಕರು ಆಗಮಿಸಿದರು. ಮಳೆಯ ನಡುವೆಯೇ 40-50 ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಲು ಆರಂಭಿಸಿದರಾದರೂ ಪೊಲೀಸರು ಅವಕಾಶ ನೀಡಲು ನಿರಾಕರಿಸಿದರು. ಅನುಮತಿ ಪಡೆಯದೆ ಪ್ರತಿಭಟನೆ ನಡೆಸಬಾರದು ಎಂದು ತಿಳಿಸಿದರು.

ಈ ನಡುವೆಯೇ ಮಾತನಾಡಿದ ಆರ್.‌ ಅಶೊಕ್‌, ಕಾಂಗ್ರೆಸ್ ನಾಯಕರೇ ನಿಮಗೆ ಮಾನ ಮರ್ಯಾದೆ ಇದೆಯಾ‌‌..? ಡೋಂಘೀ ರಾಜಕಾರಣ ಮಾಡ್ತೀರಾ..? ಅಕ್ಕಿ ಕೊಡೋದನ್ನು ಮುಂದೆ ಹಾಕಿದ್ರೆ ದುಡ್ಡು ಉಳಿಸಬಹುದು ಎಂಬುದು ಅವರ ಉದ್ದೇಶ. ಪೊಲೀಸರು ದೌರ್ಜನ್ಯ ಮಾಡ್ತಿದ್ದಾರೆ. ಇವರದ್ದು ಗೂಂಡಾ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನೂ ವಾಹನದಲ್ಲಿ ಕರೆದೊಯ್ಯಲು ಪೊಲೀಸರು ಮುಂದಾದಾಗ ಆಕ್ರೋಶಗೊಂಡರು. ಕಾಂಗ್ರೆಸ್‌ನವರಿಗೆ ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟಿದ್ದಾರೆ. ನಮಗೆ ಅವಕಾಶ ಕೊಡ್ತಿಲ್ಲ, ನಮ್ಮನ್ನು ಅರೆಸ್ಟ್ ಮಾಡ್ತಿದ್ದಾರೆಂದು ಆಕ್ರೋಶ ಹೊರಹಾಕಿದರು. ಬಳಿಕ ಎಲ್ಲರನ್ನೂ ವಾಹನದಲ್ಲಿ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು.

ಸರ್ಕಾರದ ವಿರುದ್ಧ ಆಕ್ರೋಶ
ಪೊಲೀಸ್‌ ಠಾಣೆಯ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.‌ ಅಶೋಕ್‌, ಪೊಲೀಸರು ನಮ್ಮ ನ್ಯಾಯಯುತ ಪ್ರತಿಭಟನೆಗೆ ಅವಕಾಶ ಕೊಟ್ಟಿಲ್ಲ. ಮಾತಾಡುವುದಕ್ಕೆ ಬಿಡದೆ ನಮ್ಮನ್ನು ಠಾಣಗೆ ಕರೆದುಕೊಂಡು ಬಂದಿದ್ದಾರೆ. ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆ ನಡೆದಿದೆ. ಕಾಂಗ್ರೆಸ್‌ನವರು ನಮ್ಮ ಹೋರಾಟ ಹತ್ತಿಕ್ಕಿದ್ದಾರೆ. ಪೊಲೀಸ್ ಬಲ ಪ್ರಯೋಗಿಸಿ‌ ನಮ್ಮ‌ ಪ್ರತಿಭಟನೆಗೆ ಅಡ್ಡಿ ಮಾಡಿಸಿದ್ದಾರೆ.

ಸರ್ಕಾರ ಬಂದ ಕೂಡಲೇ ಮೊದಲ ದಿನದಿಂದಲೇ ಇವರ ದೌರ್ಜನ್ಯ ಶುರುವಾಗಿದೆ. ಹತ್ತು ಕೆಜಿ ಅಕ್ಕಿ ಸುಳ್ಳು, ಮೋದಿ ಕೊಡುವ 5 ಕೆಜಿ ಅಕ್ಕಿ ಗ್ಯಾರಂಟಿ. ಸುಳ್ಳಿನ ಕಾಂಗ್ರೆಸ್ ವಿರುದ್ಧ ನಾವು ಪ್ರತಿಭಟನೆ ಮಾಡ್ತಿದ್ದೇವೆ. 24 ಗಂಟೆಗಳಲ್ಲಿ ಗ್ಯಾರಂಟಿ ತಂದಿಲ್ಲ ಅಂದರೆ ಯಾವುದೇ ಚುನಾವಣೆ ಪ್ರಚಾರಕ್ಕೆ ಬರೋದಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಇವಾಗ ಗ್ಯಾರಂಟಿಗಳಿಗೆ ಕಂಡಿಷನ್ ಹಾಕ್ತಿದ್ದಾರೆ. ಮಾತು ತಪ್ಪಿದ ಕಾಂಗ್ರೆಸ್, ಮೋಸ ಮಾಡಿದ ಕಾಂಗ್ರೆಸ್, ವಂಚನೆ ಮಾಡಿದ ಕಾಂಗ್ರೆಸ್. ಮೋದಿ ವಿರುದ್ಧ ಪ್ರತಿಭಟನೆ ಮಾಡ್ತಿರೋದು ಅಕ್ಕಿ ಕೊಡುವುದನ್ನು ಮುಂದೂಡಲು ಕಾಂಗ್ರೆಸ್ ನವರು ಬೀದಿಗೆ ಬರ್ತಾರೆ ಅಂದರೆ ಅವರಿಗೆ ನಾಚಿಕೆ ಆಗಬೇಕು. ಅಧಿಕಾರ, ಖಜಾನೆ ಎಲ್ಲ ಇದ್ರು ಬೀದಿಗೆ ಬರುತ್ತಿದ್ದೀರಿ ಎಂದರೆ ನಿಮಗೆ ಸರ್ಕಾರ ನಡೆಸಲು ಯೋಗ್ಯತೆ ಇಲ್ಲ ಎಂದರ್ಥ.

ಹತ್ತು ಕೆಜಿ ಅಕ್ಕಿ ಅಂತ ಹೇಳಿ ಈಗ 5 ಕೆಜಿಗೆ ಬಂದಿದ್ದಾರೆ. ಇನ್ನು 2-3 ಕೆ.ಜಿ.ಗೆ ಬರಬಹುದು. ಅಕ್ಕಿ ಕೊಡುವುದನ್ನು ಮುಂದೂಡಲು ಮೋದಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ನಿಮ್ಮ ತಪ್ಪಿಗೆ ಬಡವರನ್ನು ಯಾಕೆ ಬಲಿಪಶು ಮಾಡುತ್ತಿದ್ದೀರಿ? ಹತ್ತು ಕೆಜಿ ಜತೆಗೆ ಮೋದಿ ಸರ್ಕಾರದ 5 ಕೆ.ಜಿ. ಕೊಡಬೇಕು. ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದರು.

ಮಳೆ ಈ ಸಲ ಕಡಿಮೆ ಬೀಳುತ್ತೆ ಅಂತ ತಜ್ಞರು ಹೇಳಿದ್ದಾರೆ. ಬೆಳೆ ಬರಲ್ಲ, ಹೀಗಾಗಿ ಕೇಂದ್ರಕ್ಕೆ ಅಕ್ಕಿ ಕೊಡುವುದಕ್ಕೆ ಕಷ್ಟ. ಕಳೆದ ಮೇನಲ್ಲೇ ಯಾವುದೇ ರಾಜ್ಯಕ್ಕೆ ಅಕ್ಕಿ ಕೊಡಕ್ಕಾಗಲ್ಲ ಅಂತ ನಿರ್ಧರಿಸಲಾಗಿತ್ತು. ವಿದ್ಯುತ್ ದರ ಏರಿಕೆಯಿಂದ ಜನರು ರೊಚ್ಚಿಗೆದ್ದಿದ್ದಾರೆ. ಮುಂದೆ ಬಸ್ಸುಗಳ ಟೈರ್ ಕೂಡ ಇರೋದಿಲ್ಲ, ಮುಂದೆ ಬಸ್ಸುಗಳು ಕೂಡ ಇರೋದಿಲ್ಲ. ವ್ಯವಸ್ಥೆ ಇಲ್ಲದೇ ಫ್ರೀ ಬಸ್ಸು ಫ್ರೀ ಅಂದರೆ ಬಾಗಿಲು ಯಾಕೆ ಕಿತ್ತಾಕ್ತಾರೆ, ಕಿಟಕಿಲೀ ಯಾಕೆ ನುಗ್ಗಾತ್ತಾರೆ? ಇದೆಲ್ಲ ಸರ್ಕಾರದ ದೊಂಬರಾಟ. ಕಾಂಗ್ರೆಸ್ ಒಂದು ಮೋಸಗಾರರ ಪಾರ್ಟಿ ಎಂದರು.

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಇದೊಂದು ಸುಳ್ಳ – ಮಳ್ಳ ಸರ್ಕಾರ. ಸುಳ್ಳು ಹೇಳುವುದು ಮಳ್ಳನ‌ ತರಹ ಮೋಸ ಮಾಡುವುದು. ನಾವು 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಇವರು ಹೇಳಿದ್ದರು. ಆದರೆ ಇವರಿಂದ ಒಂದು ಕೆ.ಜಿ. ಅಕ್ಕಿ ಕೂಡ ಕೊಡೋಕೆ ಆಗಿಲ್ಲ. ಇವಾಗ 5 ಕೆಜಿ ಅಕ್ಕಿ ಕೊಡ್ತಿರೋದು ಕೇಂದ್ರ ಸರ್ಕಾರದಿಂದ. ಸುಳ್ಳು ಹೇಳೋ ಕಾಂಗ್ರೆಸ್‌ನಿಂದ ನಾವು ಪಾಠ ಕೇಳುವ ಅವಶ್ಯಕತೆ ಇಲ್ಲ.

ತಾತ್ವಿಕ ಒಪ್ಪಿಗೆ ಕೊಡುವಾಗಲೇ ಅಕ್ಕಿ ಇರಲಿಲ್ಲ. ನಿಮಗೆ ಗ್ಯಾರಂಟಿ ಕೊಡುವಾಗ ಗೊತ್ತಿರಲಿಲ್ಲವಾ..? ನಿಮಗೆ ನಿಜವಾಗಿಯೂ ಧಮ್ ತಾಕತ್ ಇದ್ರೆ, ಎಲ್ಲ ಕಡೆಯಿಂದ ಅಕ್ಕಿ ಶೇಖರಣೆ ಮಾಡಿ ಒಬ್ಬರಿಗೆ 15 ಕೆ.ಜಿ.ಯಂತೆ ಅಕ್ಕಿ ಕೊಡಿ ಎಂದರು.

ಮಾತು ಎತ್ತಿದರೆ ಬಡವರ ಪರ ಎನ್ನುತ್ತೀರಿ. ಬಡವರನ್ನೇ ಬಂಡವಾಳವಾಗಿ ಮಾಡಿಕೊಂಡಿದ್ಸೀರಿ. ಇವಾಗ ಬಡವರಿಗೆ ಶಾಕ್ ಕೊಡ್ತಿದ್ದೀರಿ. ಬಸ್ಸುಗಳು ಕೆಲವೇ ದಿನಗಳಲ್ಲೇ ನಿಂತು ಹೋಗುತ್ತವೆ. ಕರೆಂಟ್ ಕೈ ಕೊಟ್ಟು ಕೈಗಾರಿಕೆಗಳು ನಿಂತು ಹೋಗುತ್ತವೆ. ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಬಿಲ್‌ಗಳನ್ನು ಎಲ್ಲವನ್ನೂ ನಿಲ್ಲಿಸಿದ್ದೀರಿ. ಏನಾದರೂ ತಪ್ಪು ಮಾಡಿದ್ರೆ ಅವರನ್ನು ನೇಣಿಗೆ ಹಾಕಿ. ವರ್ಗಾವಣೆಯಲ್ಲಿ ಈಗಾಗಲೇ ದಂಧೆ ಶುರುವಾಗಿದೆ. ಐಎಎಸ್, ಐಪಿಎಸ್ ಸ್ಥಳಗಳನ್ನು ಮಾರಾಟಕ್ಕೆ ಇಟ್ಟಿದ್ದೀರಿ. ಇದು ಒಂದು ಬಡವರ, ಜನ ವಿರೋಧಿ ಸರ್ಕಾರ. ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಹಾಕೋಕೆ ಹೊರಟಿದ್ಸೀರಿ. ಇದರ ಬಗ್ಗೆ ಪ್ರತಿಭಟನೆ ಮಾಡಿದ್ರೆ ನಮ್ಮನ್ನು ಅರೆಸ್ಟ್ ಮಾಡ್ತೀರಿ. ಇವತ್ತು ಪೊಲೀಸ್ ರಾಜ್ಯ ನಡೆಯುತ್ತಿದೆ ಎಂದರು.

ನಿಮ್ಮ ಲಾಠಿಯಲ್ಲಿ ಶಕ್ತಿ ಇದೆಯೋ, ನಮ್ಮ ರಟ್ಟೆಯಲ್ಲಿ ಶಕ್ತಿ ಇದೆಯೋ ತೋರಿಸ್ತೀವಿ ಮುಂದಿನ ದಿನಗಳಲ್ಲಿ. ಒಂದೂವರೆ ತಿಂಗಳಲ್ಲಿ ರಾಜ್ಯದ ಪ್ರಗತಿಯನ್ನು ಹಳಿ ತಪ್ಪಿಸಿದ್ದೀರಿ. ಅಭಿವೃದ್ಧಿ ಕಾರ್ಯಗಳನ್ನು ಯಾಕೆ ನಿಲ್ಲಿಸಿದ್ದೀರಿ? ನೀವು ವಿಪಕ್ಷದಲ್ಲಿದ್ದಾಗ ಅನುಮತಿ ಪಡೆಯದೇ ಇದ್ದರೂ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದೆವು. ನಿಮ್ಮ ಪೊಲೀಸ್ ರಾಜ್ಯ ಎಷ್ಟು ದಿನ ನಡೆಸುತ್ತೀರಿ ‌ನೋಡುತ್ತೇನೆ. ಮೋದಿ ವಿರುದ್ಧ ಪ್ರತಿಭಟನೆ ಮಾಡುವುದು ಎಂದರೆ ಆಕಾಶಕ್ಕೆ ಉಗುಳಿದಂತೆ. ಅಕ್ಕಿ ಬೇಕಿದ್ರೆ ಹೋಗಿ ಕೇಳಿ. ಇದರ ವಿರುದ್ಧ ನಾವು ಪ್ರತಿಭಟನೆ ಮಾಡುತ್ತೇವೆ. ಸದನದ ಒಳಗೆ, ಹೊರಗೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Rice Politics : ಡಿಕೆಶಿ ಮಾಟಮಂತ್ರ ಎಕ್ಸ್‌ಪರ್ಟ್‌, ಮಂತ್ರದಿಂದ ಅಕ್ಕಿ ತರಿಸಲಿ ಅಂದ ಆರ್‌ ಅಶೋಕ್

Exit mobile version