ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುಕ ಎಂದು ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆಗೆ ಕರೆಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶನಿವಾರ (ಡಿ. ೧೭) ಬಿಜೆಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ (BJP Protest) ನಡೆಯಿತು.
ಯುವ ಮೋರ್ಚಾ ಅಧ್ಯಕ್ಷ ಡಾ. ಸಂದೀಪ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪಾಕಿಸ್ತಾನದ ವರ್ತನೆ ವಿರುದ್ಧ ತೀವ್ರ ಆಕ್ರೋಶವನ್ನು ಹೊರಹಾಕಲಾಯಿತು. ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ. ಅಲ್ಲಿನ ಆರ್ಥಿಕತೆ ಕುಸಿದಿದ್ದು, ಅರಾಜಕತೆ ಸೃಷ್ಟಿಯಾಗಿದೆ. ಹೀಗಾಗಿ ಜಾಗತಿಕವಾಗಿ ಬೇರೆ ಕಡೆ ಗಮನ ಸೆಳೆಯಲು ಇಂತಹ ಹೇಳಿಕೆಯನ್ನು ನೀಡಲಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಬಿಲಾವಲ್ ಭುಟ್ಟೋ ಪ್ರತಿಕೃತಿ ದಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಪಾಕಿಸ್ತಾನದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಈ ವೇಳೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್, ಮೂರು ಕಾರಣಕ್ಕೆ ಇಂದು ರಾಜ್ಯ – ರಾಷ್ಟ್ರದೆಲ್ಲೆಡೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಪಾಕಿಸ್ತಾನದ ಸಚಿವ ಭುಟ್ಟೋ ಅವರು ಪಾಕಿಸ್ತಾನದ ದಿವಾಳಿತನ ಮರೆಸಲು ವಿಶ್ವವೇ ಮೆಚ್ಚಿರುವ ನಾಯಕ ಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಜತೆಗೆ ಆರ್‌ಎಸ್ಎಸ್ ಬಗ್ಗೆಯೂ ವ್ಯಂಗ್ಯ ಮಾಡಿದ್ದಾರೆ. ಕೂಡಲೇ ಅವರು ದೇಶದ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ | Pathaan Controversy | ಮುಸ್ಲಿಂ ಸಂಘಟನೆಗಳಿಂದಲೂ ʻಪಠಾಣ್ʼ ಸಿನಿಮಾ ನಿಷೇಧಿಸುವಂತೆ ಒತ್ತಾಯ!
ಪಾಕಿಸ್ತಾನ ದಿವಾಳಿತನದಿಂದ ಪ್ರಪಂಚದ ಮುಂದೆ ಬೆತ್ತಲಾಗಿದೆ. ಬಿಟ್ಟಿ ಪ್ರಚಾರಕ್ಕಾಗಿ ಮೋದಿ ಬಗ್ಗೆ ಮತ್ತು ಆರ್‌ಎಸ್‌ಎಸ್ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದವರು ಹೇಳಿದರು.
ನಾವು ನಮ್ಮ ದೇಶದಲ್ಲಿ ಸುರಕ್ಷಿತವಾಗಿ ಇದ್ದೇವೆ ಎಂದರೆ ಅದಕ್ಕೆ ಸೈನಿಕರು ಕಾರಣ. ಆದರೆ, ರಾಹುಲ್ ಗಾಂಧಿ ನಮ್ಮ ವೀರ ಸೈನಿಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ದೇಶದ ರಕ್ಷಣೆ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿರಬೇಕು. ಆದರೆ ದೇಶದ ಸೈನಿಕರ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್‌ನವರು ಟಿಪ್ಪುವನ್ನು ಬೆಂಬಲಿಸುವ ಹೇಳಿಕೆ ನೀಡಿದ್ದಾರೆ. ಈಗ ಡಿ ಕೆ ಶಿವಕುಮಾರ್ ಅವರು ಕುಕ್ಕರ್ ಬ್ಲಾಸ್ಟ್ ಮಾಡಿದ ಶಾರಿಕ್ ಪರವಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ 2023ರ ಚುನಾವಣೆಯಲ್ಲಿ ಮುಸ್ಲಿಮರ ಓಲೈಕೆಗೆ ಮುಂದಾಗಿದ್ದಾರೆ. ಕೂಡಲೇ ಎಲ್ಲರೂ ನಾಡಿನ ಜನತೆ ಕ್ಷಮೆ ಯಾಚಿಸಬೇಕು ಎಂದು ಸಂದೀಪ್ ಆಗ್ರಹಿಸಿದರು.
ಸಮುದಾಯಗಳ ಓಲೈಕೆಯಲ್ಲಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿದಿದೆಯೆಂದರೆ, ಉಗ್ರಗಾಮಿಗಳನ್ನೂ ಮಾವನ ಮಗನಂತೆ ಆ ಪಕ್ಷದವರು ನೋಡುತ್ತಾರೆ ಎಂದು ಬಿಜೆಪಿ ನಾಯಕರು ಕಿಡಿಕಾರಿದರು. ಡಿ.ಕೆ. ಶಿವಕುಮಾರ್‌ಗೆ ಧಿಕ್ಕಾರ, ಸಿದ್ರಾಮುಲ್ಲಾಖಾನ್‌ಗೆ ಧಿಕ್ಕಾರ ಎಂಬ ಘೋಷಣೆಯನ್ನೂ ಪ್ರತಿಭಟನೆ ವೇಳೆ ಕೂಗಲಾಯಿತು.
ಬಿಲಾವಲ್ ಭುಟ್ಟೋ ಹೇಳಿದ್ದೇನು?
ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಬಿಲಾವಲ್ ಭುಟ್ಟೋ ”ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ, ಗುಜರಾತ್‌ನ ಕಟುಕ ಬದುಕಿದ್ದಾರೆ ಮತ್ತು ಅವರು ಭಾರತದ ಪ್ರಧಾನಿಯಾಗಿದ್ದಾರೆ” ಎಂದು ಹೇಳಿದ್ದರು. ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ವಿಶ್ವಸಂಸ್ಥೆಯಲ್ಲಿ ಮಾತನಾಡುವಾಗ ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದು ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಮಾತನಾಡುವಾಗ ಭುಟ್ಟೋ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದರು. ಈ ಹೇಳಿಕೆ ನೀಡುತ್ತಿದ್ದಂತೆ ದೇಶದಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.
ಇದಕ್ಕೆ ಭಾರತವೂ ತಿರುಗೇಟು ನೀಡಿದ್ದು, ”1971ರಲ್ಲಿ ಬಂಗಾಳಿಗಳು ಮತ್ತು ಹಿಂದುಗಳ ವಿರುದ್ಧ ಪಾಕಿಸ್ತಾನದ ಆಡಳಿತಗಾರರ ನಡೆಸಿದ ನರಮೇಧವನ್ನು ಮರೆತಿರುವಂತೆ ಕಾಣುತ್ತಿದೆ” ಎಂದು ಹೇಳಿಕೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್, ಒಸಾಮಾ ಬಿನ್ ಲಾಡೆನ್‌ಗೆ ಆತಿಥ್ಯ ನೀಡಿದ್ದ ಹಾಗೂ ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರಿಗೆ ಆಶ್ರಯ, ಕುಮ್ಮಕ್ಕು ಕೊಟ್ಟಿದ್ದ ನೆರೆಯ ದೇಶಕ್ಕೆ, ವಿಶ್ವಸಂಸ್ಥೆಯಂಥ ವೇದಿಕೆಯಲ್ಲಿ ಇತರರಿಗೆ ಉಪದೇಶ ನೀಡುವ ವಿಶ್ವಾಸಾರ್ಹತೆ ಅಥವಾ ಯಾವುದೇ ಯೋಗ್ಯತೆಯೂ ಇಲ್ಲ. ಪಾಕಿಸ್ತಾನದ ಭಯೋತ್ಪಾದನೆಯ ಕೇಂದ್ರ ಬಿಂದು ಎಂದು ಹೇಳಿದ್ದರು.
ಇದನ್ನೂ ಓದಿ | ಅತ್ಯಾಚಾರ ಆರೋಪಿಗಳ ಬಿಡುಗಡೆ ಪ್ರಶ್ನಿಸಿದ ಬಿಲ್ಕಿಸ್ ಬಾನೊ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್