Site icon Vistara News

BJP Protest: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ; ಪ್ರತಾಪ್ ಸಿಂಹ, ಹರೀಶ್‌ ಪೂಂಜಾ, ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌!

BJP Protest

ಬೆಂಗಳೂರು: ಬಸವೇಶ್ವರ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ (BJP Protest) ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಹರೀಶ್‌ ಪೂಂಜಾ, ಪುನೀತ್ ಕೆರೆಹಳ್ಳಿ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸ್ ಠಾಣೆ ಮುಂದೆ ಗುಂಪುಗೂಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುನೀತ್‌ ಕೆರೆಹಳ್ಳಿ ಮೇಲೆ ಪೊಲೀಸರು ದೌರ್ಜನ್ಯ ಖಂಡಿಸಿ ಬಸವೇಶ್ವರ ನಗರದ ಪೊಲೀಸ್‌ ಠಾಣೆ ಎದುರು ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್‌ನಲ್ಲಿ ಪುನೀತ್ ಕೆರೆಹಳ್ಳಿ ಎ1 ಹಾಗೂ ಪ್ರತಾಪ್ ಸಿಂಹ ಎ2, ಹರೀಶ್ ಪೂಂಜಾ A3 ಎಂದು ಉಲ್ಲೇಖಿಸಲಾಗಿದೆ. ಬಿಎನ್ಎಸ್ 126(2), 189(2), 191(2) 190BNS, ಮತ್ತು 103 ಕರ್ನಾಟಕ ಪೊಲೀಸ್ ಆ್ಯಕ್ಟ್ ಅಡಿ ಎಫ್ಐಆರ್ ದಾಖಲಾಗಿದೆ.

ಬಸವೇಶ್ವರ ನಗರದ ಪೊಲೀಸ್‌ ಠಾಣೆ ಎದುರು ಬುಧವಾರ ಮಧ್ಯಾಹ್ನ ಪ್ರತಿಭಟನೆ (BJP Protest) ನಡೆಸಲಾಗಿತ್ತು. ಈ ವೇಳೆ ಪುನೀತ್‌ ಕೆರೆಹಳ್ಳಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಪ್ರತಾಪ್‌ ಸಿಂಹ, ಶಾಸಕ ಹರೀಶ್‌ ಪೂಂಜಾ ನೇತೃತ್ವದಲ್ಲಿ ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಮಾಂಸ ಸಾಗಾಟಕ್ಕೆ ತಡೆ ಪ್ರಕರಣದಲ್ಲಿ ಬಂಧನವಾಗಿದ್ದ ಪುನೀತ್‌ ಕೆರೆಹಳ್ಳಿಗೆ ಲಾಕಪ್‌ನಲ್ಲಿ ಬಟ್ಟೆ ಬಿಚ್ಚಿಸಿ, ಹಿಂಸೆ ನೀಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧನವಾಗಿದ್ದ ಪುನೀತ್ ಕೆರೆಹಳ್ಳಿ, ಜಾಮೀನು ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಪೊಲೀಸರು ವಶಕ್ಕೆ ಪಡೆದಿದ್ದರು. ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿದ್ದಾರೆ ಎಂದು ಎಸಿಪಿ ಚಂದನ್ ವಿರುದ್ಧ ಪ್ರತಾಪ್‌ ಸಿಂಹ ಕಿಡಿಕಾರಿದ್ದರು. ಹೀಗಾಗಿ ಪ್ರತಿಭಟನೆ ನಿಯಂತ್ರಿಸಲು ಪುನೀತ್‌ ಕೆರೆಹಳ್ಳಿಯನ್ನು ಬಸವೇಶ್ವರನಗರ ಪೊಲೀಸರು ವಶಕ್ಕೆ ಪಡೆದಿದ್ದರು.

ಬಳಿಕ ಮಾತನಾಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜು.26ರಂದು ರಾತ್ರಿ ಅಕ್ರಮವಾಗಿ ಮಾಂಸ ಬರುತ್ತಿದೆ ಎಂಬ ಮಾಹಿತಿ ಇತ್ತು. ಈ ಹಿಂದೆ ಎಲ್ಲರಿಗೂ ದೂರು ನೀಡಿದೂ ಪ್ರಯೋಜನೆ ಆಗಿರಲಿಲ್ಲ. ಹೀಗಾಗಿ ಪುನೀತ್ ಕೆರೆಹಳ್ಳಿ ಸ್ಥಳಕ್ಕೆ ಹೋಗಿದ್ದರು. ಆಗ ಅಬ್ದುಲ್ ರಜಾಕ್ ಸ್ಥಳಕ್ಕೆ ಬಂದಿದ್ದಾರೆ. ಮಾಂಸದ ಬಾಕ್ಸ್ ಓಪನ್ ಮಾಡಲು ಅಬ್ದುಲ್ ರಜಾಕ್ ಒಪ್ಪಿಲ್ಲ. ಸ್ಥಳಕ್ಕೆ ಪೊಲೀದರು ಬಂದು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದು, ಕಾಟನ್ ಪೇಟೆ ಠಾಣೆಯಲ್ಲಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಪುನೀತ್ ಆರೋಪ ಮಾಡಿದ್ದಾರೆ. ಪುನೀತ್ ಅಲ್ಲಿಗೆ ಹೋಗಿದ್ದು ತಪ್ಪಾ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ | Wayanad Landslide: ವಯನಾಡು ಈಗ ಸಾವಿನ ಮನೆ: ಮೃತರ ಸಂಖ್ಯೆ 240, 160 ಶವ ಪತ್ತೆ, 220 ಜನ ಮಿಸ್ಸಿಂಗ್; ಭೀಕರ ಚಿತ್ರಣ ಇಲ್ಲಿದೆ

ಮಾಂಸ ತಂದ ಅಬ್ದುಲ್ ರಜಾಕ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳಕ್ಕೆ ಹೋದ ಕೆರೆಹಳ್ಳಿ ಅವರ ಮೇಲೆ ಕೇಸ್ ಹಾಕಿದ್ದಾರೆ. ಕಾನೂನಿನಲ್ಲಿ ಯಾವುದೇ ವ್ಯಕ್ತಿಗೆ ಟಾರ್ಚರ್ ಮಾಡೋಕ್ಕೆ ಅವಕಾಶ ಇಲ್ಲ. ಹೀಗಿರುವಾಗ ಯಾಕೆ ಬಟ್ಟೆ ಬಿಚ್ಚಿಸಿದರು?, ಅಬ್ದುಲ್ ರಜಾಕ್ ವಿರುದ್ಧ ಕೇಸ್ ದಾಖಲು ಮಾಡಬೇಕು. ಎಸಿಪಿ ಚಂದನ್ ವಿರುದ್ಧ ತನಿಖೆ ನಡೆಸಬೇಕು. ನಾನು ಯಾರಿಗೂ ವಾರ್ನಿಂಗ್ ಮಾಡಿಲ್ಲ. ಪೊಲೀಸ್ ಕಮಿಷನರ್‌ಗೆ ದೂರು ನೀಡುತ್ತೇವೆ ಎಂದು ಪ್ರತಾಪ್‌ ಸಿಂಹ ಹೇಳಿದ್ದರು.

Exit mobile version