ಬೆಂಗಳೂರು: ಈ ಬಾರಿ ಗ್ಯಾರಂಟಿ ಯೋಜನೆಗಳ (Congress Guarantee Scheme) ಮೂಲಕ ಜನರ ಮನಸ್ಸನ್ನು ಗೆದ್ದು 135 ಸೀಟುಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದ ಕಾಂಗ್ರೆಸ್‌ಗೆ ಹೆಜ್ಜೆ ಹೆಜ್ಜೆಗೂ ಮುಳ್ಳಾಗುವ ನಿಟ್ಟಿನಲ್ಲಿ ಬಿಜೆಪಿ ರಾಜಕೀಯ ರಣತಂತ್ರವನ್ನು (BJP Karnataka Politics) ಹೆಣೆಯುತ್ತಿದೆ. ಈಗಾಗಲೇ ಉಡುಪಿ ವಿಡಿಯೊ, ಎಸ್‌ಸಿ-ಎಸ್‌ಟಿ ನಿಧಿ (SC ST Fund) ವಿಷಯವಾಗಿ ಸರ್ಕಾರದ ವಿರುದ್ಧ ಜನಾಂದೋಲನ ಮಾಡುತ್ತಿರುವ ಬಿಜೆಪಿ ಈಗ ರೈತರ ವಿಷಯವನ್ನು ಕೈಗೆತ್ತಿಕೊಂಡಿದೆ. ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಕೈಗೊಂಡಿದೆ ಎಂದು ಆರೋಪಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಗಿದ್ದು, ಮಾಜಿ ಸಚಿವರಾದ ಸಿ.ಟಿ. ರವಿ, ಅಶ್ವತ್ಥನಾರಾಯಣ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ರೈತ ಮೋರ್ಚಾದ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಮತ್ತಿತರರು ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೃಷಿ ಸುಧಾರಣಾ ಕಾಯ್ದೆ ವಾಪಸ್, ಎಪಿಎಂಸಿ ಕಾಯ್ದೆ ವಾಪಸ್ ಸೇರಿ ರೈತ ಸಂಬಂಧಿ ಯೋಜನೆಗಳನ್ನು ರಾಜ್ಯ ಸರ್ಕಾರ ಬಜೆಟ್‌ನಿಂದ ಕೈಬಿಟ್ಟಿದ್ದನ್ನು ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗಿದೆ.
ಇದನ್ನೂ ಓದಿ: Arecanut Price : ಭೂತಾನ್ ಅಡಿಕೆಯಿಂದ ಬೆಳೆಗಾರರು ಹೆದರಬೇಕಿಲ್ಲ; ಆರಗ ಜ್ಞಾನೇಂದ್ರ ಹೇಳಿದ್ದೇನು?
ಈ ವೇಳೆ ಮಾತನಾಡಿ ಮಾಜಿ ಸಚಿವ ಸಿ.ಟಿ. ರವಿ, ಕೇಂದ್ರ ಸರ್ಕಾರಕ್ಕೆ ಪೈಪೋಟಿ ನೀಡಬೇಕು ಎಂದಿದ್ದರೆ ಹೆಚ್ಚಿನ ಹಣ ನೀಡಿ. ಅದು ಬಿಟ್ಟು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯ ಸರ್ಕಾರ ನೀಡುತ್ತಿದ್ದ ಹಣವನ್ನು ಏಕೆ ನಿಲ್ಲಿಸಿದಿರಿ? ಈಗ ತಮಿಳುನಾಡಿನ ರೈತರಿಗೆ ಕದ್ದುಮುಚ್ಚಿ ನೀರು ಬಿಡುತ್ತಿದ್ದೀರಿ. ಮೊದಲು ಮಂಡ್ಯ ರೈತರ ನಾಲೆಗಳಿಗೆ ನೀರು ಕೊಡಿ ಎಂದು ಆಗ್ರಹಿಸಿದರು.
ಇಂದು ಕಾಂಟ್ರ್ಯಾಕ್ಟರ್ ಕೆಂಪಣ್ಣ ಪೇಚಾಡುತ್ತಿದ್ದಾರೆ. ಬಾಣಲೆಯಿಂದ ಬೆಂಕಿಗೆ ಬಿದ್ದೆವು ಎನ್ನುತ್ತಿದ್ದಾರೆ. ಇವತ್ತು ಚುನಾವಣೆ ನಡೆದರೂ ಕಾಂಗ್ರೆಸ್ ಸೋಲುತ್ತದೆ. ಸಿಎಂ ಸಿದ್ದರಾಮಯ್ಯ ಸೇರಿ ಅನೇಕರು ಸೋಲಲಿದ್ದಾರೆ. ಇದು ರೈತ ವಿರೋಧಿ ಸರ್ಕಾರವಾಗಿದೆ ಎಂದು ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇವಲ ರೈತ ವಿರೋಧಿ ನಿಲುವನ್ನು ತಳೆದಿದೆ. ನಮ್ಮ ಸರ್ಕಾರವು ರೈತರು ತಮ್ಮ ಬೆಳೆಯನ್ನು ಯಾವುದೇ ಅಡೆತಡೆಯಿಲ್ಲದೆ, ಎಲ್ಲಿ ಬೇಕಿದ್ದರೂ ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗಿತ್ತು. ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗಿತ್ತು. ಆದರೆ, ಈ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕಲ್ಲು ಹಾಕಿದೆ. ಸಣ್ಣ ನೀರಾವರಿ ಯೋಜನೆಯಲ್ಲಿ ಕುಂಠಿತ ಆಗಿದೆ. ಜನವಿರೋಧಿ ಸರ್ಕಾರದಿಂದ ಏನನ್ನು ಬಯಸಬಹುದು? ಎಂದು ಪ್ರಶ್ನೆ ಮಾಡಿದರು.
ಈ ಸರ್ಕಾರ ಬಂದ ನಂತರ 137 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇವಲ ಒಬ್ಬರಿಗೆ ಪರಿಹಾರ ನೀಡಿದ್ದಾರೆ. 37 ಅರ್ಜಿಗಳ ವಿಲೇವಾರಿ ಆಗಿದೆ. 135 ಜನ ಗೆದ್ದಿದ್ದಾರೆ ಎನ್ನುವ ಡಿಸಿಎಂ ಒಬ್ಬರೇ ಒಬ್ಬ ರೈತರ ಮನೆಗೆ ಹೋಗಿದ್ದಾರಾ? ಎಲ್ಲ ಅಧಿಕಾರಿಗಳಿಂದ ವಸೂಲಿ ಮಾಡುತ್ತಿದ್ದಾರೆ. ಈ ಸರ್ಕಾರ ಪ್ರತಿ ವಿಚಾರದಲ್ಲಿ ಭ್ರಷ್ಟಾಚಾರ ಮಾಡುತ್ತಿದೆ. ರೈತ ಕುಟುಂಬಗಳ ಮೇಲೆ ಎಷ್ಟು ಅನ್ಯಾಯ ಮಾಡಲು ಹೊರಟಿದ್ದೀರ? ಎಂದು ಅಶ್ವತ್ಥನಾರಾಯಣ ಪ್ರಶ್ನೆ ಮಾಡಿದರು. ಈ ವೇಳೆ ಬಿಜೆಪಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
ಇದನ್ನೂ ಓದಿ: Weather Report : ಇಂದಿನಿಂದ ಅರ್ಧ ಕರ್ನಾಟಕದಲ್ಲಿ ವರ್ಷಧಾರೆ; ಬೆಂಗಳೂರು ಸ್ವಲ್ಪ ಕೂಲ್!
ಕೈಬಿಡಲಾಗಿರುವ ಯೋಜನೆ, ಕಾರ್ಯಕ್ರಮಗಳೇನು?
ಬಿಜೆಪಿ ಸರ್ಕಾರ ತಂದಿದ್ದ ರೈತ ಪರ ಯೋಜನೆಗಳನ್ನು ಕಾಂಗ್ರೆಸ್ ಕೈಬಿಟ್ಟಿದೆ. ಎಪಿಎಂಸಿ ಕಾನೂನು ರದ್ದತಿ, ವಿದ್ಯುತ್ ದರ ಏರಿಕೆ, ರೈತ ವಿದ್ಯಾನಿಧಿ ಸ್ಥಗಿತ, ಜಿಲ್ಲೆಗೊಂದು ಗೋಶಾಲೆ ಸ್ಥಗಿತ, ಕಿಸಾನ್ ಸಮ್ಮಾನ್ ನಿಧಿಗಾಗಿ ರಾಜ್ಯ ಸರ್ಕಾರ ನೀಡುತ್ತಿದ್ದ 4 ಸಾವಿರ ರೂಪಾಯಿಯನ್ನು ಸ್ಥಗಿತ ಮಾಡಿದೆ. ಇನ್ನು ಕೃಷಿ ಭೂಮಿ ಮಾರಾಟ ಕಾಯ್ದೆಯನ್ನು ಬಿಗಿ ಮಾಡಿದೆ, ನೀರಾವರಿ ಯೋಜನೆಗಳ ನಿರ್ಲಕ್ಷ್ಯ ಮಾಡುತ್ತಿದೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ರದ್ದು, ಜೀವನ್ ಜ್ಯೋತಿ ವಿಮಾ ಯೋಜನೆಯನ್ನೂ ರದ್ದು, ರೈತ ಸಂಪದ ಯೋಜನೆ ರದ್ದು, ಸಹಸ್ರ ಸರೋವರ ಮತ್ತು ಸಹ್ಯಾದ್ರಿ ಸಿರಿ ಯೋಜನೆ ರದ್ದು, ಮೀನುಗಾರರಿಗೆ ವಸತಿ ಯೋಜನೆ ರದ್ದು ಸೇರಿದಂತೆ ಕಲ್ಯಾಣ ಕರ್ನಾಟಕದ ಕೃಷಿ ಕ್ಲಸ್ಟರ್ ಅನ್ನು ಸಹ ಕೈಬಿಡಲಾಗಿದೆ ಎಂಬ ಸಂಗತಿಯನ್ನು ಹೋರಾಟದ ಮೂಲಕ ಜನರಿಗೆ ತಿಳಿಸಲು ಬಿಜೆಪಿ ಮುಂದಾಗಿದೆ.