Site icon Vistara News

Cauvery Water Dispute: ಮಂಡ್ಯದಲ್ಲಿ ಧಗಧಗಿಸಿದ ಕಾವೇರಿ ಕಿಚ್ಚು; ಹೆದ್ದಾರಿ ತಡೆದು ಬಿಜೆಪಿ ಕಾರ್ಯಕರ್ತರ ಆಕ್ರೋಶ

bjp workers protest

ಮಂಡ್ಯ: ಕೃಷ್ಣರಾಜ ಸಾಗರ ಜಲಾಶಯದಿಂದ (ಕೆಆರ್‌ಎಸ್‌) ತಮಿಳುನಾಡಿಗೆ ಕಾವೇರಿ ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ನಗರದಲ್ಲಿ ಬಿಜೆಪಿಯಿಂದ ಸೋಮವಾರ ಬೃಹತ್‌ ಪ್ರತಿಭಟನೆ (Cauvery Water Dispute) ನಡೆಸಲಾಯಿತು. ಸಂಜಯ್‌ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಸಂಜಯ ವೃತ್ತದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರು ಸೇರಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಸಂಸದೆ ಸುಮಲತಾ ಅಂಬರೀಶ್‌ ಕೂಡ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಹೋರಾಟಕ್ಕೆ ಬೆಂಬಲ ನೀಡಿದರು.

ರಾಜ್ಯ ಸರ್ಕಾರವು ತಮಿಳುನಾಡಿನ ಸಿಎಂ ಸ್ಟಾಲಿನ್‌ ಒಳ ಒಪ್ಪಂದ ಮಾಡಿಕೊಂಡು ನೀರು ಬಿಟ್ಟಿದೆ. ಇದಕ್ಕೆ ಡಿ.ಕೆ.ಶಿವಕುಮಾರ್‌ ಹಾಗೂ ಚಲುವರಾಯಸ್ವಾಮಿ ನೇರ ಹೊಣೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಆರೋಪಿಸಿದರು.

ಇದನ್ನೂ ಓದಿ | Chaluvaraya Swami : ಕೃಷಿ ಸಚಿವರ ವಿರುದ್ಧ ನಕಲಿ ಲಂಚ ಪತ್ರ ಸೃಷ್ಟಿ: ಇಬ್ಬರಿಗೆ ಮೂರು ದಿನ ಪೊಲೀಸ್‌ ಕಸ್ಟಡಿ

ಕಿವಿಯಲ್ಲಿ ಹೂ ಇಟ್ಕೊಂಡು, ಬಾಯಿ ಬಡಿದುಕೊಂಡು ಪ್ರತಿಭಟನೆ

ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು, ಇಲ್ಲಿನ ರೈತರಿಂದ ಹುರುಳಿ ಕಾಳು ಬಿತ್ತನೆ ಮಾಡಿಸುತ್ತಿದೆ. ನೀರಾವರಿ ಬೆಳೆ ಬಿಟ್ಟು, ಅರೆ ಖುಷ್ಕಿ ಬೆಳೆ ಬೆಳೆಯುವಂತೆ ಸೂಚಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ರಸ್ತೆಯಲ್ಲಿ ಹುರುಳಿ ಕಾಳು ಅಳೆದು ಅಸಮಾಧಾನ ಹೊರಹಾಕಿದರು. ಎರಡೂ ಕಿವಿಗಳಿಗೆ ಹೂ ಇಟ್ಕೊಂಡು, ಬಾಯಿ ಬಡಿದುಕೊಂಡು ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ರೈತರ ಕಿವಿಗೆ ರಾಜ್ಯ ಸರ್ಕಾರ ಹೂ ಇಟ್ಟಿದೆ. ಲೋಕಸಭೆ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ನೀರು ಬಿಡುವ ತೀರ್ಮಾನ ತೀರ್ಮಾನ ಮಾಡಿದೆ ಎಂದು ಆರೋಪಿಸಿದರು.

ಸಂಜಯ ವೃತ್ತದಲ್ಲಿ ಹುರುಳಿ ಕಾಳು ಸುರಿದು, ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಇದೇ ವೇಳೆ ಕಾರ್ಯಕರ್ತರ ಕೈಯಲ್ಲಿ I.N.D.I.A ಪ್ಲಕಾರ್ಡ್ ಕಾಣಿಸಿಕೊಂಡವು. ಕೇಂದ್ರದಲ್ಲಿ NDA ವಿರುದ್ಧ ರಚನೆಯಾಗಿರುವ I.N.D.I.A ಒಕ್ಕೂಟದ ಮಿತ್ರ ಪಕ್ಷಕ್ಕೆ ಕಾಂಗ್ರೆಸ್‌ ಅನುಕೂಲ ಮಾಡಿಕೊಡುತ್ತಿದೆ. ಡಿ.ಕೆ.ಶಿವಕುಮಾರ್ ತಮಿಳುನಾಡಿನ ಮಾಪಿಳ್ಳೆ (ಅಳೆಯ) ಹಾಗೂ S ಸಿದ್ದರಾಮಯ್ಯ ಹೆಸರಿನಲ್ಲಿ ಸ್ಟಾಲಿನ್ ಇದ್ದಾರೆ.
ಲೋಕಸಭೆ ಚುನಾವಣೆಗಾಗಿ ತಮಿಳುನಾಡಿಗೆ ಅನುಕೂಲ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದರಿಂದ ಕಾರ್ಯಕರ್ತರನ್ನು ಪೊಲೀಸರು ಬಲವಂತವಾಗಿ ಹೊರತಳ್ಳಿದರು. ಅದರೂ ಹೆದ್ದಾರಿಯಲ್ಲಿ ಕುಳಿತು ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದರು.

ಇದನ್ನೂ ಓದಿ | BJP Politics : ಮೈಚಳಿ ಬಿಡಿ, ಸರ್ಕಾರದ ಚಳಿ ಬಿಡಿಸಲು 224 ಕ್ಷೇತ್ರದಲ್ಲಿ ಪ್ರತಿಭಟಿಸಿ; ಕೋರ್‌ ಕಮಿಟಿಯಲ್ಲಿ ಬಿಎಸ್‌ವೈ ಗುಡುಗು

ತಮಿಳುನಾಡಿನಲ್ಲಿ ಅವರ ಅಪ್ಪ, ಅಮ್ಮ, ಹೆಂಡ್ತಿ ಇದ್ದಾರಾ?

ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದಕ್ಕೆ ಆಕ್ರೋಶಗೊಂಡ ಅಜ್ಜಿಯೊಬ್ಬರು, ರಾಜ್ಯ ಸರ್ಕಾರಕ್ಕೆ ಹಿಗ್ಗಾಮುಗ್ಗಾ ಬೈದಿದ್ದಾರೆ. ಮಳೆ ಇಲ್ಲ, ಬೆಳೆ ಇಲ್ಲ ಏನೂ ಇಲ್ಲ. ಹೆಂಗಸರನ್ನು ಬೀದಿಗೆ ತಂದು ತಮಾಷೆ ನೋಡುತ್ತಿದ್ದೀರಾ? ತಮಿಳುನಾಡಿನಲ್ಲಿ ಅವರ ಅಪ್ಪ, ಅಮ್ಮ, ಹೆಂಡ್ತಿ ಇದ್ದಾರಾ? ತಮಿಳುನಾಡಿಗೆ ನೀರು ಬಿಟ್ಟಿರುವ ಇಂತಹ ಸರ್ಕಾರ ನಮಗೆ ಬೇಕಾಗಿಲ್ಲ ಎಂದು ಗೌರಮ್ಮ ಎಂಬುವವರು ಆಕ್ರೋಶ ಹೊರ ಹಾಕಿದರು.

Exit mobile version