Site icon Vistara News

BJP Rathayatre : ಈ ಬಾರಿ 150 ಗುರಿ; ಮಾ.1ರಿಂದ 4 ತಂಡಗಳಲ್ಲಿ ರಾಜ್ಯಾದ್ಯಂತ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ

BJP Rathayatre

#image_title

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಷನ್‌ ೧೫೦ ಗುರಿ ಹೊತ್ತು ಸಾಗುತ್ತಿರುವ ರಾಜ್ಯ ಬಿಜೆಪಿ ಮಾರ್ಚ್‌ ೧ರಿಂದ ೨೦ರವರೆಗೆ ರಾಜ್ಯದ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲೂ ಸಂಚರಿಸುವ ಬೃಹತ್‌ ರಥ ಯಾತ್ರೆಯನ್ನು (BJP Rathayatre) ಸಂಘಟಿಸಿದೆ. ನಾಲ್ಕು ತಂಡಗಳಾಗಿ ಸಾಗುವ ಈ ರಥಯಾತ್ರೆಗೆ ಮಾರ್ಚ್‌ ೨೫ರಂದು ದಾವಣಗೆರೆಯಲ್ಲಿ ನಡೆಯುವ ಬೃಹತ್‌ ಸಮಾವೇಶದೊಂದಿಗೆ ತೆರೆ ಬೀಳಲಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ನಿರೀಕ್ಷೆ ಇದೆ.

ಫೆಬ್ರವರಿ 28ಕ್ಕೆ ಬಿಜೆಪಿ ಕಚೇರಿಯಲ್ಲಿ ಪೂಜೆ ಮಾಡಿ ವಾಹನ ರಥಗಳನ್ನು ನಾಲ್ಕು ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತಿದ್ದು, ಅಲ್ಲಿಂದ ಯಾತ್ರೆ ಮುಂದುವರಿಯಲಿದೆ ಎಂದು ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರು ಈ ವಿಷಯ ಪ್ರಕಟಿಸಿದರು. ರಾಜ್ಯದ ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ಉಪಾಧ್ಯಕ್ಷರಾದ ಎಂ. ರಾಜೇಂದ್ರ, ವಿಧಾನಪರಿಷತ್ ಸದಸ್ಯರಾದ ರಘುನಾಥ ರಾವ್ ಮಲ್ಕಾಪುರೆ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ, ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಗೀತಾ ವಿವೇಕಾನಂದ ಹಾಗೂ ಮಾಜಿ ಎಂಎಲ್‌ಸಿ ಅರುಣ್ ಶಹಾಪುರ ಅವರು ಉಪಸ್ಥಿತರಿದ್ದರು.

ಎಲ್ಲೆಲ್ಲಿಂದ ರಥಯಾತ್ರೆ ಆರಂಭ, ಯಾರ ನೇತೃತ್ವ?

೧. ಮೊದಲ ತಂಡ: ಮಾರ್ಚ್‌ ೧ರಂದು ಚಾಮರಾಜ ನಗರ ಜಿಲ್ಲೆ ಮಲೈ ಮಹದೇಶ್ವರ ದೇವಸ್ಥಾನದಿಂದ ಪ್ರಾರಂಭ
ಉದ್ಘಾಟನೆ: ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು

ಸಂಚರಿಸಲಿರುವ ೧೦ ಜಿಲ್ಲೆಗಳು: ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ

ಸಾರಥಿಗಳು ಇವರು: ಕೆ.ಎಸ್‌. ಈಶ್ವರಪ್ಪ, ವಿ. ಸೋಮಣ್ಣ, ಕೆ.ಸಿ. ನಾರಾಯಣ ಗೌಡ, ವಿ. ಸುನೀಲ್ ಕುಮಾರ್, ಶ್ರೀನಿವಾಸ ಪ್ರಸಾದ್, ಎನ್ ಮಹೇಶ್, ಕೋಟ ಶ್ರೀನಿವಾಸ ಪೂಜಾರಿ, ಆರಗ ಜ್ಞಾನೇಂದ್ರ, ನಿರ್ಮಲಾ ಕುಮಾರ್‌ ಸುರಾನಾ

ರಥಯಾತ್ರೆಗೆ ಸಿದ್ಧವಾಗುತ್ತಿರುವ ವಾಹನಗಳು

೨. ೨ನೇ ತಂಡ: ಮಾರ್ಚ್‌ ೨ರಂದು ಬೆಳಗಾವಿ ಖಾನಾಪುರದ ನಂದಗಢದ ಸಂಗೊಳ್ಳಿ ರಾಯಣ್ಣ ಸ್ಮಾರಕದಿಂದ
ಉದ್ಘಾಟನೆ: ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವರು

ಸಂಚರಿಸಲಿರುವ ೧೦ ಜಿಲ್ಲೆಗಳು: ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ

ಸಾರಥಿಗಳು ಇವರು: ಗೋವಿಂದ ಕಾರಜೋಳ, ಲಕ್ಷಣ ಸವದಿ, ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್‌, ಶಶಿಕಲಾ ಜೊಲ್ಲೆ, ಅನಿಲ್‌ ಬೆನಕೆ, ಭೈರತಿ ಬಸವರಾಜ್‌, ಶಿವರಾಮ ಹೆಬ್ಬಾರ್‌, ಮಹೇಶ್‌ ಟೆಂಗಿನಕಾಯಿ ಮತ್ತಿತರರು

================

೩. ಮೂರನೇ ತಂಡ: ಮಾರ್ಚ್‌ ೩ರಂದು ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದಿಂದ ಆರಂಭ
ಉದ್ಘಾಟನೆ: ಅಮಿತ್‌ ಶಾ, ಕೇಂದ್ರ ಗೃಹ ಸಚಿವರು

ಸಂಚಾರ ನಡೆಸಲಿರುವ ಎಂಟು ಜಿಲ್ಲೆಗಳು: ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, 7 ವಿಜಯನಗರ, ದಾವಣಗೆರೆ

ಸಾರಥಿಗಳು ಇವರು: ಜಗದೀಶ್ ಶೆಟ್ಟರ್‌, ಶ್ರೀರಾಮುಲು, ಆನಂದ್‌ ಸಿಂಗ್‌, ಭಗವಾನ್‌ ಖುಬಾ, ಹಾಲಪ್ಪ ಆಚಾರ್‌, ಮಾಲಿಕಯ್ಯ ಗುತ್ತೇದಾರ್‌, ಪ್ರಭು ಚೌಹಾನ್‌, ಅರವಿಂದ ಲಿಂಬಾವಳಿ, ಬಾಬುರಾವ್‌ ಚಿಂಚನಸೂರು, ಮಾರುತಿ ರಾವ್‌

೪. ನಾಲ್ಕನೇ ತಂಡ: ಮಾರ್ಚ್‌ ೩ರಂದು ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ಕೆಂಪೇಗೌಡ ಪ್ರತಿಮೆಯಿಂದ
ಉದ್ಘಾಟನೆ: ಅಮಿತ್‌ ಶಾ, ಕೇಂದ್ರ ಗೃಹ ಸಚಿವರು

ಸಂಚಾರ ನಡೆಸಲಿರುವ ೮ ಜಿಲ್ಲೆಗಳು: ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ

ಸಾರಥಿಗಳು ಇವರು: ಆರ್ ಅಶೋಕ್, ಅಶ್ವಥ್ ನಾರಾಯಣ್, ಎಸ್ ಟಿ ಸೋಮಶೇಖರ್, ಮುನಿರತ್ನ, ಕೆ. ಸುಧಾಕರ್ ಮತ್ತು ಇತರರು

ಎಲ್ಲ ಕಡೆ ಭಾಗವಹಿಸುವ ನಾಯಕರು
ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್‌ ಕುಮಾರ್‌ ಕಟೀಲ್‌, ಬಿ.ಎಸ್.‌ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ

ಸಮಯಾವಕಾಶ ನೋಡಿಕೊಂಡು ಭಾಗವಹಿಸಲಿರುವ ನಾಯಕರು: ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸದಾನಂದ ಗೌಡ

20 ದಿನ, 224 ಕ್ಷೇತ್ರಗಳು, 150 ರೋಡ್‌ ಶೋ, 4 ಕೋಟಿ ಜನ ಸಂಪರ್ಕ

ಯಾತ್ರೆಗಳಲ್ಲಿ 50ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ನಾಯಕರು ಪಾಲ್ಗೊಳ್ಳುತ್ತಾರೆ. ರಾಜ್ಯದ ಎಲ್ಲಾ 31 ಜಿಲ್ಲೆಗಳು ಮತ್ತು 224 ವಿಧಾನಸಭಾ ಕ್ಷೇತ್ರಗಳ ಸಂಪರ್ಕ ನಡೆಯಲಿದೆ. ನಾಲ್ಕು ರಥಗಳ ಮೂಲಕ ಒಟ್ಟು 8,000 ಕಿ.ಮೀ . ಯಾತ್ರೆ ಸಂಚರಿಸಲಿದೆ. ಯಾತ್ರೆಯ ಉದ್ದಕ್ಕೂ ಒಟ್ಟು 80ಕ್ಕೂ ಹೆಚ್ಚು ರ್ಯಾಲಿ ಮತ್ತು 75 ಸಾರ್ವಜನಿಕ ಸಭೆಗಳು ನಡೆಯಲಿವೆ. 150ಕ್ಕೂ ಹೆಚ್ಚು ರೋಡ್ ಶೋಗಳು ಸಹಾ ನಡೆಯಲಿವೆ. ಈ ಮೂಲಕ ನಾಡಿನ 4 ಕೋಟಿ ಜನರನ್ನು ಸಂಪರ್ಕಿಸಲಾಗುವುದು. ಯಾತ್ರೆಯ ಅವಧಿ 20 ದಿನಗಳು ಎಂದ ಅವರು, 150 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಮತ್ತು ಮೊದಲ ಬಾರಿಗೆ ಸ್ಪಷ್ಟ ಬಹುಮತ ಪಡೆದು ದಾಖಲೆ ಸೃಷ್ಟಿಸುವುದು ಇದರ ಗುರಿ ಎಂದು ವಿವರಿಸಿದರು.
ಮಾರ್ಚ್ 25ರಂದು ದಾವಣಗೆರೆಯಲ್ಲಿ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಈ ಮೆಗಾ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು. ಬಿಜೆಪಿ ಸರಕಾರಗಳ ಸಾಧನೆ, ಕಾಂಗ್ರೆಸ್‍ನ ಹುಸಿ ಭರವಸೆ- ದೇಶ ಕೊಳ್ಳೆ ಹೊಡೆದುದನ್ನು ತಿಳಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ : Amit Shah: ಮೋದಿ, ಯಡಿಯೂರಪ್ಪ ಮೇಲೆ ಭರವಸೆ ಇಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದ ಅಮಿತ್‌ ಶಾ; ಬಿಎಸ್‌ವೈ ಅನಿವಾರ್ಯವಾದರಾ?

Exit mobile version