Site icon Vistara News

BJP Rathayatre : ಬಿಜೆಪಿ ರಾಜ್ಯವ್ಯಾಪಿ ರಥಯಾತ್ರೆಗಾಗಿ ನಾಲ್ಕು ರಥಗಳು ರೆಡಿ, ಸ್ಪೆಷಲ್‌ ವಾಹನಗಳ ವಿಶೇಷತೆ ಏನು?

BJP Rathayatre

#image_title

ಬೆಂಗಳೂರು: ಮಾರ್ಚ್‌ ೧ರಿಂದ ೨೦ರವರೆಗೆ ನಾಡಿನ ಉದ್ದಗಲಕ್ಕೂ ಸಂಚರಿಸಲಿರುವ ಬಿಜೆಪಿಯ ರಥ ಯಾತ್ರೆಯನ್ನು (BJP Rathayatre) ಮುನ್ನಡೆಸಲಿರುವ ನಾಲ್ಕು ರಥಗಳು ಹೇಗಿವೆ ಗೊತ್ತಾ? ಮಾರ್ಚ್‌ ೧, ೨ ಮತ್ತು ೩ರಂದು ರಾಜ್ಯದ ನಾಲ್ಕು ಕಡೆಗಳಿಂದ ಹೊರಡು ಎಲ್ಲ ೨೨೪ ಕ್ಷೇತ್ರಗಳಲ್ಲಿ ಸಂಚರಿಸಿ ದಾವಣಗೆರೆಯಲ್ಲಿ ಸಮಾವೇಶಗೊಳ್ಳಲಿರುವ ಈ ರಥಗಳ ವಿಶೇಷತೆ ಏನು ಎನ್ನುವುದು ತಿಳಿದಿದೆಯಾ?ʻ

ಮಾರ್ಚ್‌ ಒಂದರಂದು ಸಂಚಾರ ಆರಂಭಿಸಲಿರುವ ನಾಲ್ಕು ರಥಗಳನ್ನು ಮಾಧ್ಯಮಗಳಿಗೆ ತೋರಿಸಿ ಅವುಗಳ ವಿಶೇಷತೆಯನ್ನು ತೆರೆದಿಟ್ಟಿದ್ದಾರೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್. ಮೈಸೂರು ರಸ್ತೆ ಬಳಿಯ ಲಾಲ್‍ಬಾಗ್ ಹತ್ತಿರ ಇರುವ ಎಸ್.ಎಂ. ಕಣ್ಣಪ್ಪ ಆಟೋಮೊಬೈಲ್ಸ್”ನಲ್ಲಿ ಇಂದು ಬಿಜೆಪಿ ವಿಜಯಸಂಕಲ್ಪ ಯಾತ್ರೆಯ 4 ರಥಗಳ ವೀಕ್ಷಣೆ ಕಾರ್ಯಕ್ರಮದಲ್ಲಿ ಪತ್ರಕರ್ತರ ಜೊತೆ ಅವರು ಮಾತನಾಡಿದರು.

ಬಿಜೆಪಿ ರಥ ಯಾತ್ರೆಗೆ ರೆಡಿಯಾಗಿರುವ ವಾಹನ

ರಥದೊಳಗೆ ಏಳು ಸೀಟು, ಹೋಂ ಥಿಯೇಟರ್‌

ನಾಲ್ಕೂ ರಥಗಳ ಲೈಲ್ಯಾಂಡ್ ಚಾಸಿಯನ್ನು ಪ್ರಕಾಶ್ ರೋಡ್‍ಲೈನ್ಸ್‍ನವರು ನಿರ್ಮಿಸುತ್ತಿದ್ದಾರೆ. ಪ್ರತಿ ರಥವು 30 ಅಡಿ ಉದ್ದ, 8 ಅಡಿ ಅಗಲದ್ದಾಗಿದೆ. ರಥದಲ್ಲಿ ನಿಂತು ಭಾಷಣ ಮಾಡಲು ಸುಂದರ ಕೆನೊಪಿ ರಚಿಸಿದ್ದೇವೆ. 4 ಮೊಬೈಲ್ ಚಾರ್ಜರ್‍ಗಳು, ರೋಡ್ ಷೋಗೆ ಪೂರಕ ಮೈಕ್ ವ್ಯವಸ್ಥೆ ಇದ್ದು, ಸುಮಾರು ಒಂದು ಕಿಮೀ ದೂರಕ್ಕೆ ಕೇಳಿಸುವಷ್ಟು ಪ್ರಬಲವಾಗಿದೆ. ಕೆನೊಪಿ ಮೇಲೆ 4 ಬಿಗ್ ಹಾರನ್ ಇದೆ ಎಂದು ರವಿಕುಮಾರ್‌ ವಿವರಿಸಿದರು.

ಬಸ್ ಒಳಗಡೆ 7 ಸೀಟುಗಳಿವೆ. ಹೋಂ ಥಿಯೇಟರ್ ಇದೆ. 32 ಇಂಚಿನ ಟಿವಿ, ಚಾಲಕನ ಜೊತೆ ಮಾತನಾಡಲು ಇಂಟರ್‌ಕಾಮ್‌ ವ್ಯವಸ್ಥೆ ಇದೆ. ಜನರೇಟರ್ ಇದೆ. ಆಡಿಯೋ ಸಿಸ್ಟಂ, ಕ್ಯಾಮೆರಾ, ಹೊರಮುಖವಾಗಿ ಎಲ್‍ಇಡಿ ಡಿಸ್‍ಪ್ಲೇ ಇದೆ ಎಂದು ತಿಳಿಸಿದರು. ಹರೀಶ್ ಮತ್ತು ಗಣೇಶ್ ಅವರು ರಥ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

೫ ಸಾವಿರ ಜನರನ್ನು ಉದ್ದೇಶಿಸಿ ಮಾತನಾಡಬಹುದು

ಚುನಾವಣಾ ಗೀತೆ, ಭಾಷಣ ಕೇಳಿಸುವುದಲ್ಲದೆ, 5 ಸಾವಿರ ಜನರಿಗೆ ಬಸ್‍ನಿಂದ ಭಾಷಣ ಮಾಡುವ ವ್ಯವಸ್ಥೆ ಒಳಗೊಂಡಿದೆ. ಯಾತ್ರೆ ಯಶಸ್ವಿಗೆ ಮುಂಚಿತವಾಗಿಯೇ 4 ಸಪೋರ್ಟ್ ವಾಹನ ತೆರಳಲಿದೆ. ಅದು ಕೂಡ ಬ್ರ್ಯಾಂಡೆಡ್ ಆಗಿದೆ. ಮಾಧ್ಯಮದವರು ವಿಡಿಯೋ, ಫೋಟೋ ತೆಗೆಯಲು ಅನುಕೂಲ ಮಾಡಿಕೊಡಲು ನಾಲ್ಕು ಮಾಧ್ಯಮ ವಾಹನಗಳು ಇರುತ್ತವೆ ಎಂದರು.

ʻʻಹಿಂದೆ ನಾವು ಪರಿವರ್ತನಾ ಯಾತ್ರೆ, ಏಕತಾ ಯಾತ್ರೆ, ರಾಮಮಂದಿರಕ್ಕಾಗಿ ರಥಯಾತ್ರೆ ಮಾಡಿದ್ದೇವೆ. ಈಗ ರಾಜ್ಯದಲ್ಲಿ ಮತ್ತೊಮ್ಮೆ ಬಹುಮತದ ಸರಕಾರವನ್ನು ತರಲು ನಾಲ್ಕು ರಥಯಾತ್ರೆ ಮಾಡುತ್ತಿದ್ದೇವೆʼʼ ಎಂದು ತಿಳಿಸಿದರು. ಫೆ. ೨೮ರಂದು ಪೂಜೆ ಸಲ್ಲಿಸಿ ರಥವನ್ನು ನಾಲ್ಕು ಸ್ಥಳಗಳಿಗೆ ಕಳುಹಿಸಲಿದ್ದೇವೆ ಎಂದು ವಿವರಿಸಿದರು.

ʻʻಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಪಂಕ್ಚರ್ ಆಗಿದೆ. ಜನವೇ ಇರಲಿಲ್ಲ ಎಂದ ಅವರು, ನಮ್ಮ ಯಾತ್ರೆಗೆ ಸಂಬಂಧಿಸಿ ಅದ್ಭುತ ಯೋಜನೆ ಮಾಡಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಿಂದ ಸುಳ್ಳಿನ ಸ್ಪರ್ಧೆ

ವಾಹನಗಳ ವಿವರ ಕೊಡುತ್ತಲೇ ಕಾಂಗ್ರೆಸ್‌ನ ಮೇಲೂ ಹರಿಹಾಯ್ದರು ರವಿಕುಮಾರ್‌.
ʻʻಪ್ರವಾಹ ಬಂದಾಗ ಮತ್ತು ಮನೆಗಳು ಬಿದ್ದಾಗ ಕಾಂಗ್ರೆಸ್‍ನವರು ಎಷ್ಟು ಪರಿಹಾರ ಕೊಡುತ್ತಿದ್ದರು? ಅದೇ 98 ಸಾವಿರ ಅಲ್ಲವೇ? ನಾವು 5 ಲಕ್ಷ ಕೊಡುತ್ತೇವೆ. ಮನೆಗೆ ಸ್ವಲ್ಪ ಹಾನಿಯಾದರೆ 50 ಸಾವಿರ ರೂಪಾಯಿ, ಕುಟುಂಬಕ್ಕೆ ಸಣ್ಣ ಪ್ರಮಾಣದ ಗಾಯ ಆದರೆ 10 ಸಾವಿರ ಕೊಡುತ್ತಿದ್ದೇವೆ. ಕರ್ನಾಟಕದ ಇತಿಹಾಸದಲ್ಲಿ ಯಾರೂ ಇಷ್ಟು ದೊಡ್ಡ ಪ್ರಮಾಣದ ಹಣ ಕೊಟ್ಟಿಲ್ಲ. ಸಹಾಯ ಮಾಡಿಲ್ಲ; ಪ್ರವಾಹ ನಿರ್ವಹಿಸಿಲ್ಲ. ನಮ್ಮ ಸರಕಾರ ಮಾಡಿದೆ. ಕಾಂಗ್ರೆಸ್ ಎಂದರೆ ಸುಳ್ಳಿನ ಪಾರ್ಟಿʼʼ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟರು. ʻʻಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್‍ನಲ್ಲಿ ಸ್ಪರ್ಧೆ ಇದೆ. ಸಿದ್ದರಾಮಯ್ಯ, ಅವರನ್ನು ಮೀರಿಸಿ ಡಿ.ಕೆ.ಶಿವಕುಮಾರ್ ಸುಳ್ಳಿನ ಸ್ಪರ್ಧೆಗೆ ಇಳಿದಂತಿದೆʼʼ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್‌. ರವಿಕುಮಾರ್‌ ಮತ್ತು ಇತರ ಬಿಜೆಪಿ ಮುಖಂಡರು


ʻʻಬಿಜೆಪಿಯಲ್ಲಿ ನಾವು 50ಕ್ಕೂ ಹೆಚ್ಚು ಸಮರ್ಥ ನಾಯಕರ ಹೆಸರು ಹೇಳಬಲ್ಲೆವು. ಕಾಂಗ್ರೆಸ್‍ನಲ್ಲಿ ಅಂಥ ನಾಯಕರು ಯಾರಿದ್ದಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್‍ನವರು ನಮ್ಮ ನಾಯಕತ್ವವನ್ನು, ಅಭಿವೃದ್ಧಿಯನ್ನು ಕೊಂಡಾಡುತ್ತಿದ್ದಾರೆ. ಆದರೆ, ಎದುರುಗಡೆ ಅದನ್ನು ಹೇಳಲು ಆಗುತ್ತಿಲ್ಲʼʼ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜಕೀಯಕ್ಕೆ ಬರುವುದು ಸ್ವಾಮೀಜಿಗಳಿಗೆ ಬಿಟ್ಟದ್ದು

ʻʻನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಸಾಧುಗಳು, ಸಂತರು, ಮಹಾಂತರ ಪ್ರಮುಖ ಪಾತ್ರ ಇದೆ. ಮನೆ ಮನೆಯಲ್ಲಿ ದೇವರ ಮನೆ ಇದೆ. ಸಂತರು, ಸ್ವಾಮೀಜಿಗಳನ್ನು ಬಿಟ್ಟು ನಮ್ಮ ಪಕ್ಷ ಇಲ್ಲ. ಅವರ ಮಾರ್ಗದರ್ಶನ, ಆಶೀರ್ವಾದ ಪಡೆಯುತ್ತೇವೆ, ತಪ್ಪೇನಿದೆʼʼ ಎಂದು ಪ್ರಶ್ನಿಸಿದ ಅವರು, ʻʻರಾಜಕೀಯಕ್ಕೆ ಬರುವುದು, ಬಿಡುವುದು ಸ್ವಾಮೀಜಿಗಳಿಗೆ ಬಿಟ್ಟ ವಿಚಾರ. ಅದರೊಳಗೆ ನಮ್ಮ ಯಾವುದೇ ಪಾತ್ರ ಇಲ್ಲʼʼ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಗೀತಾ ವಿವೇಕಾನಂದ, ಮಾಜಿ ಉಪಮೇಯರ್ ಹಾಗೂ ಜಿಲ್ಲಾ ವಕ್ತಾರ ಎಸ್. ಹರೀಶ್, ಜಿಲ್ಲಾ ಉಪಾಧ್ಯಕ್ಷ ಗಣೇಶ್ ಕೃಷ್ಣಮೂರ್ತಿ ಅವರು ಭಾಗವಹಿಸಿದ್ದರು.

ಇದನ್ನೂ ಓದಿ : Karnataka politics : ಮೋದಿ ಬಾಯಲ್ಲಿ ಒಮ್ಮೆಯೂ ಬೊಮ್ಮಾಯಿ ಹೆಸರು ಬರಲಿಲ್ಲ; ಇಷ್ಟೊಂದು ನಿರ್ಲಕ್ಷ್ಯವೇ ಎಂದು ಕೇಳಿದ ಕಾಂಗ್ರೆಸ್‌

Exit mobile version