Site icon Vistara News

ಭವಾನಿ ರೇವಣ್ಣ ಬಿಜೆಪಿಗೆ ಬಂದ್ರೆ ಸ್ವಾಗತ ಎಂದ ಕಾರಜೋಳ, ಅವರಿಗೆ ಸೂಕ್ತ ಸ್ಥಾನಮಾನ ಕೊಡ್ತೀವಿ ಎಂದ ಕುಮಾರಸ್ವಾಮಿ

Bhavani Revanna

ಬಾಗಲಕೋಟೆ/ರಾಯಚೂರು: ಮೇಲ್ನೋಟಕ್ಕೆ ಬಂಡಾಯವೆದ್ದಿದ್ದಾರೆ ಎಂದೇ ಹೇಳಲಾಗುತ್ತಿರುವ ಭವಾನಿ ರೇವಣ್ಣ ಅವರು ಈಗ ಪ್ರಖರ ಬೆಳಕಿನಲ್ಲಿ ನಿಂತಿದ್ದಾರೆ. ಈ ನಡುವೆ ಬಿಜೆಪಿ ಕೂಡಾ ಅವರಿಗೆ ಗಾಳ ಹಾಕುತ್ತಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ.

ಕೆಲವು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ʻಭವಾನಿಯಕ್ಕ ಬಿಜೆಪಿಗೆ ಬನ್ನಿʼ ಎಂದಿದ್ದರು. ಬಳಿಕ ತಾನು ತಮಾಷೆಗೆ ಹೇಳಿದ್ದು ಎಂದು ಸ್ಪಷ್ಟನೆ ಕೊಟ್ಟಿದ್ದರು. ಈಗ ಇನ್ನೊಬ್ಬ ನಾಯಕರಾದ, ಸಚಿವ ಗೋವಿಂದ ಕಾರಜೋಳ ಅವರು ʻಭವಾನಿ ರೇವಣ್ಣ ಬಿಜೆಪಿಗೆ ಬಂದ್ರೆ ಸ್ವಾಗತʼ ಎಂದಿದ್ದಾರೆ.

ಬಾಗಲಕೋಟೆಯಲ್ಲಿದ್ದ ಕಾರಜೋಳ ಅವರಲ್ಲಿ ʻʻಭವಾನಿ ರೇವಣ್ಣ ಬಿಜೆಪಿಗೆ ಬರ್ತಾರಾʼʼ ಎಂದು ಪ್ರಶ್ನಿಸಿದಾಗ, ʻʻನಮ್ಮದು(ಬಿಜೆಪಿ) ನಿಂತ ನೀರಲ್ಲ. ಹರಿಯುವ ನೀರು.. ಹರಿಯುವ ನೀರಿಗೆ ಹೊಸ ನೀರು ಬಂದು ಸೇರಿಕೊಂಡ್ರೆ ಸ್ವಾಗತ ಮಾಡಿಕೊಳ್ತೇವೆʼʼ ಎಂದು ಸೂಚ್ಯವಾಗಿ ಹೇಳಿದರು.

ಕುಮಾರಸ್ವಾಮಿ ಹೇಳಿದ್ದೇನು?

ಈ ನಡುವೆ, ಇತ್ತ ಹೊಳೆನರಸೀಪುರದಲ್ಲಿ ಮಾತನಾಡಿದ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ, ಟಿಕೆಟ್‌ ವಿಚಾರದಲ್ಲಿ ಕುಮಾರಸ್ವಾಮಿ, ದೇವೇಗೌಡ್ರು, ಇಬ್ರಾಹಿಂ ಅವರೇ ಫೈನಲ್‌. ಇದರಲ್ಲಿ ಯಾವ ವಿವಾದವೂ ಇಲ್ಲ ಎಂದು ಹೇಳಿದರು. ಕುಮಾರಣ್ಣ ಕಷ್ಟಪಟ್ಟು ಪಕ್ಷವನ್ನು ಕಟ್ಟುತ್ತಿದ್ದಾರೆ. ಅವರ ಮತ್ತು ನನ್ನ ನಡುವಿನ ಒಳ್ಳೆಯ ಸಂಬಂಧಕ್ಕೆ ಹುಳಿ ಹಿಂಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಇದಾದ ಬಳಿಕ ರಾಯಚೂರಿನಲ್ಲಿ ಮಾತನಾಡಿದ ಜೆಡಿಎಸ್‌ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಅವರು, ʻʻಭವಾನಿ ರೇವಣ್ಣ ರಾಜ್ಯ ರಾಜ್ಯಕಾರಣದಲ್ಲಿ ಉಳಿತಾರೋ ಇಲ್ಲ ಸ್ಥಳೀಯ ಮಟ್ಟದ ರಾಜಕಾರಣದಲ್ಲಿರ್ತಾರಾ ಅನ್ನೊ ಗೊಂದಲ ಬೇಕಾಗಿಲ್ಲ. ಸೂಕ್ತ ಸಮಯದಲ್ಲಿ ಯಾವ ಸ್ಥಾನಮಾನದಲ್ಲಿ ಕೆಲಸ ಮಾಡಬೇಕೋ ಆ ಜವಾಬ್ದಾರಿಯನ್ನು ಕೊಡುತ್ತೇವೆ.ʼʼ ಎಂದರು.

ಇದನ್ನೂ ಓದಿ | JDS Politics : ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ನಿರ್ಧಾರವೇ ಅಂತಿಮ, ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದ ರೇವಣ್ಣ

Exit mobile version