ಮೈಸೂರು: ಭಾರತದ ಸಂಸ್ಕೃತಿ ಹಾಗೂ ಭವಿಷ್ಯ ನಿರ್ಮಾಣದ ಕೆಲಸವನ್ನು ತಳಸಮುದಾಯಗಳು ಮಾಡುತ್ತಿವೆ. ಈ ಸಮುದಾಯಗಳಿಗೆ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ನೀಡಲು ರಾಜ್ಯ ಸರ್ಕಾರ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಬಿಜೆಪಿ ವತಿಯಿಂದ ಶನಿವಾರ ಆಯೋಜಿಸಿದ್ದ ಎಸ್.ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು, ಭಾರತದ ಸಾಮಾಜಿಕವಾಗಿ ಪ್ರಮುಖವಾಗಿರುವ ಅಂಗವಾಗಿವೆ. ಈ ಸಮುದಾಯಗಳು ಭಾರತದ ಸಂಸ್ಕೃತಿಯ ತಳಹದಿಯಾಗಿದ್ದು, ಈ ಸಂಸ್ಕೃತಿ ಭಾರತದ ಅಸ್ಮಿತೆಯಾಗಿದೆ. ಇದರಿಂದ ಭಾರತಕ್ಕೆ ವಿಶಿಷ್ಟ ಸ್ಥಾನ ಸಿಕ್ಕಿದೆ. ಭಾರತದ ಅಸ್ಮಿತೆ ಹಾಗೂ ಅಭಿವೃದ್ಧಿಯನ್ನು ಕಾಯ್ದುಕೊಳ್ಳಲು ಈ ಸಮುದಾಯಗಳ ಅಭಿವೃದ್ಧಿಗೊಳಿಸುವುದು ನಮ್ಮ ಕರ್ತವ್ಯವಾಗಿದೆ. ಕೃಷಿ, ಕಾರ್ಖಾನೆ ಸೇರಿ ದುಡಿಮೆಯಲ್ಲಿ ತೊಡಗಿರುವ ತಳಸಮುದಾಯದ ದುಡಿಯುವ ವರ್ಗದವರೇ ರಾಜ್ಯದ ಆರ್ಥಿಕತೆಗೆ ಕಾರಣ ಎಂದರು.
ಎಸ್ಸಿ-ಎಸ್ಟಿ ಮೀಸಲಾತಿಯನ್ನು ಸಂವಿಧಾನಬದ್ಧವಾಗಿ ಹೆಚ್ಚಿಸಲಾಗಿದೆ
ಸಾಮಾಜಿಕ ಪೀಡನೆಗೆ ಕಾರಣವಾಗಿರುವವರ ಮಾನಸಿಕತೆಯನ್ನು ಬದಲಿಸುವ ಕೆಲಸವನ್ನು ಬಿಜೆಪಿ ಎಸ್ಸಿ ಮೋರ್ಚಾ ಮಾಡಬೇಕಿದೆ. ನಾವು ಯಾರಿಗೂ ಕಮ್ಮಿಯಿಲ್ಲ, ನಮಗೆ ಯಾರ ಅನುಕಂಪವೂ ಬೇಕಾಗಿಲ್ಲ ಹಾಗೂ ನಮಗೆ ಅವಕಾಶಗಳು ಬೇಕು ಎನ್ನುವುದನ್ನು ಸ್ಪಷ್ಟಪಡಿಸಬೇಕು. ತಳಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರ ಹತ್ತು ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕರ್ನಾಟಕದಲ್ಲಿ ಎಸ್ಸಿ-ಎಸ್ಟಿ ಮೀಸಲಾತಿಯನ್ನು ಸಂವಿಧಾನಬದ್ಧವಾಗಿ ಹೆಚ್ಚಿಸಲಾಗಿದೆ. ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ ಇರಬೇಕೆನ್ನುವ ಕಾರಣದಿಂದ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದಕ್ಕೆ ಕಾನೂನಿನ ಬಲ ನೀಡುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.
ಇದನ್ನೂ ಓದಿ | Karnataka Election : ಪಂಚರತ್ನ ಯಾತ್ರೆಯಲ್ಲಿ ಕಾಣಿಸದ ರೇವಣ್ಣ ಕುಟುಂಬ; ಭಿನ್ನರ ಜತೆ ಶಕ್ತಿ ಪ್ರದರ್ಶನ ಮಾಡಿದ ಸೂರಜ್ ರೇವಣ್ಣ!
ತಳಸಮುದಾಯಗಳನ್ನು ಅಭಿವೃದ್ಧಿಗೊಳಿಸುವುದು ಭೀತಿ ನೀತಿ
ಡಾ.ಬಿ.ಆರ್.ಅಂಬೇಡ್ಕರ್ ಶ್ರೇಷ್ಠ ಮಾನವತಾವಾದಿ. ನಾನು ಅಂಬೇಡ್ಕರ್ ವಾದಿ ಎಂದು ಗರ್ವದಿಂದ ಹೇಳುತ್ತೇನೆ. ಭಾರತೀಯ ಜನತಾ ಪಕ್ಷ ಅಂಬೇಡ್ಕರ್ ಅವರ ತತ್ವಾದರ್ಶಗಳ ಮೇಲೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳುವುದು ಗೊತ್ತಿದೆಯೇ ಹೊರತು, ಸಮುದಾಯಗಳನ್ನು ಮೇಲೆತ್ತುವ ಕೆಲಸವನ್ನು ಮಾಡಲಿಲ್ಲ. ಸಮುದಾಯಗಳನ್ನು ಕೇವಲ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಕರ್ನಾಟಕದಲ್ಲಿ ಎಸ್ಸಿ, ಎಸ್ಟಿ ಸಮುದಾಯದವರ ಜೀವನ ಉತ್ತಮಗೊಳಿಸಲು ಮಕ್ಕಳಿಗೆ ವಿದ್ಯಾರ್ಥಿವೇತನ ಹೆಚ್ಚಿಸಲಾಗಿದೆ. 100 ಅಂಬೇಡ್ಕರ್ ಹಾಸ್ಟೆಲ್ ನಿರ್ಮಾಣ, 5 ಪ್ರಮುಖ ಶೈಕ್ಷಣಿಕ ಕೇಂದ್ರಗಳಲ್ಲಿ ಮೆಗಾ ಹಾಸ್ಟೆಲ್ಗಳನ್ನು ನಿರ್ಮಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಲಾಗುತ್ತಿದೆ.
ಶಿಕ್ಷಣ, ಉದ್ಯೋಗ, ಸಬಲೀಕರಣವನ್ನು ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಸಾಧ್ಯವಾಗಿಸುವತ್ತ ಕ್ರಮ ವಹಿಸಲಾಗುತ್ತಿದೆ. ಭೂಮಿ ಖರೀದಿ, ಗೃಹ ನಿರ್ಮಾಣಕ್ಕೆ ನೆರವು ಹೀಗೆ ಸುಮಾರು 29 ಸಾವಿರ ಕೋಟಿ ರೂ.ಗಳನ್ನು ಎಸ್ಸಿಪಿ- ಟಿಎಸ್ಪಿ ಯೋಜನೆಗಳಿಗೆ ನೀಡಲಾಗಿದೆ. ಸರ್ಕಾರದ ಎಲ್ಲ ಕಾರ್ಯಕ್ರಮಗಳಲ್ಲಿ ತಳಸಮುದಾಯಗಳನ್ನು ಅಭಿವೃದ್ಧಿಗೊಳಿಸುವುದು ಬಿಜೆಪಿ ನೀತಿಯಾಗಿದೆ ಎಂದರು.
ಇದನ್ನೂ ಓದಿ | Illegal cash found : ಕಾಂಗ್ರೆಸ್ ವಿಧಾನಸೌಧವನ್ನು ಬ್ಯಾಂಕ್ ಮಾಡಿಕೊಂಡಿತ್ತು; ಸಿಎಂ ಬಸವರಾಜ ಬೊಮ್ಮಾಯಿ