ಚಿತ್ರದುರ್ಗ: ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್ ಲಂಚ ಪ್ರಕರಣದಲ್ಲಿ ಸಿಲುಕಿರುವುದು ಬಿಜೆಪಿಗೆ ಭಾರಿ ಮುಜುಗರ (Karanataka Elections) ಉಂಟು ಮಾಡಿದೆ. ಈ ಕಾರಣಕ್ಕಾಗಿ ಅದು ಮಾರ್ಚ್ 27ರಂದು ಹೊನ್ನಾಳಿಯಲ್ಲಿ ಆಯೋಜನೆಯಾಗಿದ್ದ ಫಲಾನುಭವಿಗಳ ಬೃಹತ್ ಸಮಾವೇಶವನ್ನು ಚಿತ್ರದುರ್ಗಕ್ಕೆ ಶಿಫ್ಟ್ ಮಾಡಲಾಗಿದೆ.
ಮಾರ್ಚ್ 27ಕ್ಕೆ ದಾವಣಗೆರೆಯ ಹೊನ್ನಾಳಿಯಲ್ಲಿ ಬೃಹತ್ ಫಲಾನುಭವಿಗಳ ಸಮಾವೇಶದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗುತ್ತಿದ್ದಾರೆ. ಆದರೆ, ಹೊನ್ನಾಳಿಯ ಪಕ್ಕದ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಮಾಡಾಳು ವಿರೂಪಾಕ್ಷಪ್ಪ ಅವರು ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದರಿಂದ ಸಮಾವೇಶ ನಡೆಸಲು ಬಿಜೆಪಿ ಹಿಂದೇಟು ಹಾಕಿದೆ. ಪ್ರತಿಪಕ್ಷಗಳು ಇದನ್ನೇ ದೊಡ್ಡ ವಿಷಯವಾಗಿ ಪ್ರಸ್ತಾಪಿಸಿ ಮುಜುಗರ ಉಂಟು ಮಾಡಬಹುದು ಎಂಬ ಭಯ ಬಿಜೆಪಿಯನ್ನು ಕಾಡುತ್ತಿದೆ. ಹೀಗಾಗಿ ಹೊನ್ನಾಳಿಯಲ್ಲಿ ನಡೆಯಬೇಕಿದ್ದ ಬೃಹತ್ ಕಾರ್ಯಕ್ರಮವನ್ನು ಚಿತ್ರದುರ್ಗಕ್ಕೆ ಕಾರ್ಯಕ್ರಮ ಶಿಫ್ಟ್ ಮಾಡಲಾಗಿದೆ.
ಬದಲಾದ ಕಾರ್ಯಕ್ರಮದಂತೆ ಚಿತ್ರದುರ್ಗದ ಹರ್ತಿಕೋಟೆಯಲ್ಲಿ ಬೃಹತ್ ಫಲಾನುಭವಿಗಳ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಅಮಿತ್ ಶಾ ಅವರ ಜತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಬರುವ ಸಾಧ್ಯತೆ ಇದೆ. ಈಗಾಗಲೇ ಯೋಗಿ ಆದಿತ್ಯನಾಥ್ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಬಿಜೆಪಿ ಹೇಳಿದೆ.
10 ಲಕ್ಷ ಜನರನ್ನು ಸೇರಿಸಲು ಪ್ಲ್ಯಾನ್
ಸಮಾವೇಶದಲ್ಲಿ ಸುತ್ತ ಮುತ್ತಲಿನ ಜಿಲ್ಲೆಗಳ ಫಲಾನುಭವಿಗಳು ಭಾಗಿಯಾಗಲಿದ್ದು, 10 ಲಕ್ಷ ಜನ ಸೇರಿಸಲು ಬಿಜೆಪಿ ಪ್ಲ್ಯಾನ್ ಮಾಡಿದ್ದಾರೆ. ಸಮಾವೇಶದಲ್ಲಿ ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ನಡೆಯಲಿದೆ.
ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ, ಬಿಎಸ್‌ವೈ ಸೇರಿದಂತೆ ಬಿಜೆಪಿ ಘಟಾನುಘಟಿಗಳು ನಾಯಕರು ಭಾಗವಹಿಸಲಿದ್ದಾರೆ.
ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿಸಲು ಈ ಸಮಾವೇಶ ಆಯೋಜಿಸಲಾಗಿದ್ದು, ಚಿತ್ರದುರ್ಗದಲ್ಲಿ ಈ ಬಾರಿ ಆರಕ್ಕೆ ಆರು ಕ್ಷೇತ್ರ ಗೆಲ್ಲಲು ತಂತ್ರ ರೂಪಿಸಿದೆ ಎನ್ನಲಾಗಿದೆ.
ಇದನ್ನೂ ಓದಿ : Karnataka Election: ಸಿಎಂ ಬೊಮ್ಮಾಯಿಗೇ ಟಿಕೆಟ್ ಸಿಗುವುದು ಡೌಟು ಎಂದ ಕಾಂಗ್ರೆಸ್