Site icon Vistara News

CM Siddaramaiah : ಸಿದ್ದರಾಮಯ್ಯರಿಂದ ಮುಸ್ಲಿಂ ಓಲೈಕೆ ಎಂದ ಬಿಜೆಪಿ; ಹೇಳಿದ್ದರಲ್ಲಿ ತಪ್ಪಿಲ್ಲ ಎಂದ ಸಿಎಂ!

CM Siddarmaiah infrot of vidhansoudha

ಬೆಂಗಳೂರು: ಸೋಮವಾರ (ಡಿ. 4) ಹುಬ್ಬಳ್ಳಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಮುಸ್ಲಿಂ ಸಮುದಾಯದ (Muslim community) ರಕ್ಷಣೆ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿರುವ ಮಾತಿಗೆ ಈಗ ವಿವಾದ ಸ್ವರೂಪ ಪಡೆದುಕೊಂಡಿದೆ. ಬಿಜೆಪಿ ನಾಯಕರು (BJP leaders) ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ. ಒಂದು ಸಮುದಾಯದ ಓಲೈಕೆ ರಾಜಕಾರಣ ಇದಾಗಿದೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಕಿಡಿಕಾರಿದೆ. ಅಲ್ಲದೆ, ಕಾಂಗ್ರೆಸ್‌ ಪಕ್ಷವನ್ನು ಕಟುವಾದ ಮಾತುಗಳಿಂದ ಟೀಕೆ ಮಾಡಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಾನು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಾನು ಹೇಳಿದ್ದರಲ್ಲಿ ತಪ್ಪು ಏನಿದೆ…!? ನಾನು ಹೇಳಿದ್ದು ಒಂದು ನೀವು ಬರೆದಿರುವುದು ಒಂದು. ಒಂದು ಪತ್ರಿಕೆಯವರು ಸರಿಯಾಗಿ ಬರೆದಿದ್ದಾರೆ. ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ ಅಂತ ನಾನು ಹೇಳಿರೋದು. ನೀವು ಅದಕ್ಕೆ ಉಪ್ಪು ಖಾರ ಹಾಕಬೇಡಿ ಎಂದು ಹೇಳಿದರು.

ಇದನ್ನೂ ಓದಿ: Belagavi Winter Session: ಸದನದಲ್ಲಿ ಎಲೆ ಚುಕ್ಕಿ ರೋಗ ಸದ್ದು; ಗಂಭೀರವಾಗಿ ಪರಿಗಣಿಸಿದ ಸರ್ಕಾರ

ಅಲ್ಪಸಂಖ್ಯಾತರನ್ನು ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ

ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ. ಅಲ್ಪಸಂಖ್ಯಾತರಿಗೆ 4 ರಿಂದ 5 ಸಾವಿರ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡುವುದಾಗಿ ಹೇಳಿದ್ದೇನೆ. ಇದನ್ನು ಬಿಜೆಪಿ ಓಲೈಕೆ ರಾಜಕಾರಣ ಎಂದು ಕರೆದರೆ ಹೇಗೆ? ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಮುದಾಯದ ಪರ ಇದ್ದೇವೆ ಎಂದು ಹೇಳಬೇಕಾಗುತ್ತೆ: ಸತೀಶ್‌ ಜಾರಕಿಹೊಳಿ

ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಸಚಿವ ಸತೀಶ್ ಜಾರಕಿಹೊಳಿ ಸಮರ್ಥನೆ ಮಾಡಿಕೊಂಡಿದ್ದಾರೆ. ಸಮುದಾಯದ ಕಾರ್ಯಕ್ರಮಗಳಲ್ಲಿ ಅಂತಹ ಹೇಳಿಕೆ ಸಹಜ. ಸಮುದಾಯದ ಪರ ಇದ್ದೇವೆ ಎಂದು ಹೇಳಬೇಕಾಗುತ್ತದೆ. ಅದು ಮುಸ್ಲಿಂ ಸಮುದಾಯ ಇರಲಿ ಯಾವುದೇ ಸಮುದಾಯ ಇರಲಿ ಎಂದು ಹೇಳಿದ್ದಾರೆ.

ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಕಿಡಿ

ಈ ಸರ್ಕಾರ ಬಂದ ದಿನದಿಂದಲೂ ಈ ಕೆಲಸವನ್ನು ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ಓಲೈಸುವುದು ಅಷ್ಟೇ ಇವರ ರಾಜಕಾರಣ. ಅಭಿವೃದ್ಧಿ ರಾಜಕಾರಣ ಇಲ್ಲ. ಬರೀ ದ್ವೇಷದ ರಾಜಕಾರಣ ಮಾಡುವುದು ಅಷ್ಟೇ ಇವರ ಕೆಲಸ. ಸದನದಲ್ಲಿ ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ಚರ್ಚೆ ಮಾಡುತ್ತೇವೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.

ಇದೊಂದು ಎಡಬಿಡಂಗಿ ಸರ್ಕಾರ: ಆರ್.‌ ಅಶೋಕ್

ಇದೊಂದು ಎಡಬಿಡಂಗಿ ಸರ್ಕಾರವಾಗಿದೆ. ಹಿಂದು ಸೆಕೆಂಡ್ ದರ್ಜೆ ಪ್ರಜೆಗಳಲ್ಲ. ಮುಸ್ಲಿಂ ಓಲೈಕೆ ಮಾಡುವುದನ್ನು ಬಿಡಲಿ. ಒಬ್ಬ ಸಿಎಂ ಒಂದು ಸಮುದಾಯದ ಪರ ನಿಲ್ಲೋದು ಸರಿಯಲ್ಲ. ಸಚಿವ ಜಮೀರ್ ಅಹಮದ್ ಖಾನ್ ಆಯಿತು. ಈಗ ಸಿದ್ದರಾಮಯ್ಯ‌ ಮಾತನಾಡುತ್ತಿದ್ದಾರೆ. ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು ಶಾದಿ ಭಾಗ್ಯ ಮಾಡಿದರು. ಎಸ್ಸಿ ಸಮುದಾಯದಲ್ಲಿ ಬಡವರು ಇರಲಿಲ್ವಾ? ಇವರನ್ನು ಕಳೆದ ಬಾರಿ ಜನ ಸೋಲಿಸಿದ್ದರು. ಈಗ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಚಾಳಿ ಶುರು ಮಾಡಿದ್ದಾರೆ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದು ಖಂಡನೀಯ. ಹಿಂದುಗಳು ಕೆಳಗೆ, ಮುಸ್ಲಿಮರು ಮೇಲೆ ಅಂತ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು. ಸಂವಿಧಾನ ಪೀಠಿಕೆಯನ್ನು ಹೇಳುವಾಗ ಎಲ್ಲರೂ ಒಂದೇ ಅಂತ ಹೇಳಲಾಗುವುದು. ಈಗ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇದು ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ಟಿಪ್ಪು ಸುಲ್ತಾನ್ ಆಚರಣೆಯಂತಹ ಕಾರ್ಯಕ್ರಮವನ್ನು ಬಿಡಬೇಕು ಎಂದು ಆರ್.‌ ಅಶೋಕ್‌ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಒಂದು ಸಮುದಾಯಕ್ಕೆ ಓಲೈಕೆ ಮಾಡಬಾರದು: ಆರಗ

ಒಬ್ಬ ಮುಖ್ಯಮಂತ್ರಿಯಾಗಿ ಒಂದು ಸಮುದಾಯಕ್ಕೆ ಓಲೈಕೆ ಮಾಡಬಾರದು. ನಾನು ನಿಮಗೆ ರಕ್ಷಣೆ ಕೊಡುತ್ತೇವೆ ಎಂದು ಹೇಳುತ್ತಾರೆ. ಅವರಿಗೆ ಏನು ಭಯ ಇದೆ? ಸಿಎಂ ಅವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇಂತಹ ತುಷ್ಟೀಕರಣದಿಂದ ಮೂರು ರಾಜ್ಯವನ್ನು ಕಳೆದುಕೊಂಡಿದ್ದಾರೆ. ಸಿಎಂ ಹೇಳಿಕೆಯನ್ನು ನಾನು ಖಂಡಿಸತ್ತೇನೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.

ಇದನ್ನೂ ಓದಿ: Illegal Arecanut: ರಾಜ್ಯದಲ್ಲಿ ಅಕ್ರಮ ಅಡಿಕೆ ದಂಧೆ? ಬೆಂಗಳೂರಲ್ಲಿ ಅಂತಾರಾಜ್ಯ ಜಾಲ ಪತ್ತೆ

ಧರ್ಮದ ಹೆಸರಲ್ಲಿ ರಾಜಕಾರಣ: ಚಲವಾದಿ ನಾರಾಯಣ ಸ್ವಾಮಿ

ಪರಿಷತ್‌ ಸದಸ್ಯ ಚಲವಾದಿ ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿ, ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಮರು ಈಗ ಹುಟ್ಟಿದ್ದಾರೆ ಅಂದುಕೊಂಡಿದ್ದಾರೆ. ಅವರಿಗೆ ಈ ದೇಶ ಯಾವುದೇ ಅನ್ಯಾಯ ಮಾಡಿಲ್ಲ‌. ನಮ್ಮ‌ ಸರ್ಕಾರ ಇದ್ದಾಗಲೂ ಸಹಾಯ ಮಾಡಿದೆ. ಅವರು ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮುಸಲ್ಮಾನರು ನಮ್ಮ ಪಕ್ಷದಲ್ಲೂ ಇದ್ದಾರೆ. ಕಾಂಗ್ರೆಸ್‌ನವರು ಅವರನ್ನು ಓಲೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಆಯ್ತು ಮುಸ್ಲಿಂರನ್ನು ಸಿಎಂ ಮಾಡಿದ್ದಾರಾ, ಅಧ್ಯಕ್ಷ ಮಾಡಿದ್ದಾರಾ? ಎಂದು ಪ್ರಶ್ನೆ ಮಾಡಿದರು.

ಏನಿದು ವಿವಾದ?

ಹುಬ್ಬಳ್ಳಿ‌ಯಲ್ಲಿ ಸೋಮವಾರ ನಡೆದಿದ್ದ‌ ಮುಸ್ಲಿಂ ಸಮಾವೇಶದಲ್ಲಿ ಸಿಎಂ‌ ಸಿದ್ದರಾಮಯ್ಯ ಮಾತನಾಡಿ, ರಾಜಕೀಯ ‌ಲಾಭಕ್ಕೆ ಕೆಲವರು ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಾರೆ. ಇದರಿಂದ ತಾತ್ಕಾಲಿಕ ಲಾಭ ಸಿಗಬಹುದು. ಪರಸ್ಪರ ಪ್ರೀತಿ ಇರಬೇಕಾದರೆ ನಾವು ಮನುಷ್ಯತ್ವದಿಂದ ಇರಬೇಕು. ಈ ವರ್ಷ ನಾಲ್ಕು ಸಾವಿರ ಕೋಟಿ ಅನುದಾನ ಅಲ್ಪಸಂಖ್ಯಾತರ ಇಲಾಖೆಗೆ ಕೊಟ್ಟಿದ್ದೇವೆ. 10 ಸಾವಿರ ಕೋಟಿ ಹಣ ಅಲ್ಪಸಂಖ್ಯಾತ ಇಲಾಖೆಗೆ ಖರ್ಚು ಮಾಡಬೇಕು ಅನ್ನೋದು ನಮ್ಮ ಉದ್ದೇಶ. ನಾನು ಕೊಟ್ಟಿದ್ದ ಹಣ ಬಿಜೆಪಿ ಸರ್ಕಾರ ಕಡಿಮೆ ಮಾಡಿತ್ತು. ನಿಮ್ಮ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಬೇಕು. ದೇಶದ ಸಂಪತ್ತಲ್ಲಿ ನಿಮಗೆ ಪಾಲು ಸಿಗಬೇಕು. ದೇಶದ ಸಂಪತ್ತು ನಿಮಗೂ ಹಂಚುತ್ತೇನೆ. ನಿಮಗೆ ಅನ್ಯಾಯ ಮಾಡೋಕೆ ನಾನು ಬಿಡಲ್ಲ. ನಿಮ್ಮನ್ನು ನಾನು ರಕ್ಷಣೆ ಮಾಡುತ್ತೇನೆ ಎಂದು ಹೇಳಿದ್ದರು.

Exit mobile version