Site icon Vistara News

ಡಿ.ಕೆ. ಶಿವಕುಮಾರ್‌ ಈಗ ರಬ್ಬರ್‌ ಸ್ಟಾಂಪ್‌ ಅಧ್ಯಕ್ಷ: ಛಲವಾದಿ ನಾರಾಯಣಸ್ವಾಮಿ ಹೇಳಿಕೆ

chalavadi narayanaswamy bjp

ಬೆಂಗಳೂರು: ರಾಹುಲ್ ಗಾಂಧಿಯವರು ಸಿದ್ದರಾಮೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರೆ ಆ ಪಕ್ಷ ಎಷ್ಟು ದುರ್ಬಲವಾಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಆ ಪಕ್ಷ ಬಿಟ್ಟು ಎಲ್ಲರೂ ದೂರ ಸರಿಯಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ʻಜಗನ್ನಾಥ ಭವನʻದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಜ್ಯದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈಗ ಕೇವಲ ರಬ್ಬರ್ ಸ್ಟಾಂಪ್ ಆಗಿ ಉಳಿದಿದ್ದಾರೆ. ಸಿದ್ದರಾಮಯ್ಯ ಅವರನ್ನು ಕಂಡರೆ ಕಾಂಗ್ರೆಸ್ ಬೆಚ್ಚಿಬೀಳುತ್ತಿದೆ. ಅವರನ್ನು ವಿರೋಧಿಸಿದರೆ ನಮ್ಮ ಭವಿಷ್ಯ ಏನಾದೀತು ಎಂಬ ಭಯ ಕಾಂಗ್ರೆಸ್ ನಾಯಕರಲ್ಲಿದೆ. ಸಿದ್ದರಾಮಯ್ಯ ಅವರದ್ದು ದೇವರಾಜ ಅರಸರನ್ನು ಮೀರಿಸಿದ ನಾಯಕತ್ವ ಎಂದು ಕಾಂಗ್ರೆಸ್‍ನ ಡಾ. ಪರಮೇಶ್ವರ್ ಹೇಳಿದ್ದಾರೆ. ಇದು ಬಿಸಿಹಾಲು ಕುಡಿದು ಮೂತಿ ಸುಟ್ಟುಕೊಂಡ ಬೀರಬಲ್ಲನ ಬೆಕ್ಕಿನ ಕಥೆಯಂತಿದೆ ಎಂದು ವಿಶ್ಲೇಷಿಸಿದರು. ಡಾ. ಪರಮೇಶ್ವರ್ ಸೇರಿ ಕಾಂಗ್ರೆಸ್ ನಾಯಕರು ಮೂತಿ ಸುಟ್ಟ ಬೆಕ್ಕಿನಂತೆ ಸಿದ್ದರಾಮಯ್ಯರ ಓಲೈಕೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ | ಸಿದ್ದರಾಮೋತ್ಸವಕ್ಕೆ ಡಿ.ಕೆ. ಶಿವಕುಮಾರ್‌ ಅತಿಥಿ ಅಷ್ಟೆ: ಅಧ್ಯಕ್ಷರನ್ನು ದೂರವಿಟ್ಟ ಸಮಿತಿ

ಒಂದೆಡೆ ಸಿದ್ದರಾಮೋತ್ಸವ, ಇನ್ನೊಂದೆಡೆ ಶಿವಕುಮಾರೋತ್ಸವ ಹೀಗೆ ಅನೇಕ ಉತ್ಸವಗಳನ್ನು ನಡೆಸಲು ಕಾಂಗ್ರೆಸ್ ಮುಂದಾಗಿದೆ. ಅವರೇನು ಮಾಡಿದರೂ ಅದು ಪಕ್ಷದ ಆಂತರಿಕ ವಿಚಾರ. ಆದರೂ ಒಂದು ರಾಜಕೀಯ ಪಕ್ಷವಾಗಿ ಜನರಿಗೆ ಯಾವ ರೀತಿಯ ಸಂದೇಶ ಕೊಡುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಶಕ್ತಿಹೀನ ಕಾಂಗ್ರೆಸ್ ಹೈಕಮಾಂಡ್

ಹಿಂದಿನ ದಿನಗಳಲ್ಲಿ ಉತ್ಸವಗಳು ಗಾಂಧಿ ಕುಟುಂಬಕ್ಕೆ ಸೀಮಿತವಾಗಿದ್ದವು. ವಿ.ಪಿ.ಸಿಂಗ್ ಅವರು ರಾಜೀವ್ ಗಾಂಧಿಯವರನ್ನು ಮೀರಿಸುವ ಸಾಧ್ಯತೆ ಗಮನಿಸಿ ಅವರಿಗೂ ಚಿತ್ರಹಿಂಸೆ ಕೊಡಲಾಗಿತ್ತು. ಸಿದ್ದರಾಮೋತ್ಸವದ ಮೂಲಕ ಕಾಂಗ್ರೆಸ್ ಉಳಿಯಲು ಬಯಸುತ್ತಿದೆ ಎಂದರೆ ಕಾಂಗ್ರೆಸ್ ಸ್ಥಿತಿ ಎಷ್ಟು ಚಿಂತಾಜಕವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಶರಣಾಗಿದೆ. ಹೈಕಮಾಂಡ್ ತನ್ನೆಲ್ಲ ಶಕ್ತಿಯನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಸಂಪೂರ್ಣ ಕುಸಿದಿರುವುದಕ್ಕೆ ಇದು ಸ್ಪಷ್ಟ ನಿದರ್ಶನ. ಜನರ ಆಶೋತ್ತರಗಳನ್ನು ಈಡೇರಿಸಲು ಅದಕ್ಕೆ ಶಕ್ತಿ ಇಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಮಾಜಿ ಸಿಎಂ ಎಸ್. ಬಂಗಾರಪ್ಪ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ 1990ನೇ ದಶಕದಲ್ಲಿ ಕಾಂಗ್ರೆಸ್ ಹೈಕಮಾಂಡನ್ನು ಮುಟ್ಟಲಾಗದ ಸ್ಥಿತಿ ಇತ್ತು. ಮುಖ್ಯಮಂತ್ರಿಯಾಗಿ 2 ವರ್ಷ ಪೂರೈಸಿದ ಸಂದರ್ಭದಲ್ಲಿ ಒಂದು ದೊಡ್ಡ ಆಂದೋಲನವನ್ನು ಬಂಗಾರಪ್ಪ ಮಾಡಿದ್ದರು. ಲಕ್ಷಗಟ್ಟಲೆ ಜನ ಅದರಲ್ಲಿ ಸೇರಿದ್ದರು. ಅದು ಕಾಂಗ್ರೆಸ್ ಉತ್ಸವ ಆಗಿರಲಿಲ್ಲ; ಬಂಗಾರಪ್ಪ ಅವರ ಉತ್ಸವವಾಗಿತ್ತು. ಇದನ್ನು ಗಮನಿಸಿದ ಹೈಕಮಾಂಡ್ ಬಂಗಾರಪ್ಪ ಅವರಿಗೆ ಹಿಂಸೆ ಕೊಟ್ಟು ಒಂದೇ ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತ್ತು. ಹೈಕಮಾಂಡ್ ಮೀರಿದ ವ್ಯಕ್ತಿತ್ವ ಎಲ್ಲೂ ವೈಯಕ್ತಿಕವಾಗಿ ಬೆಳೆಯಬಾರದೆಂಬ ಸಿದ್ಧಾಂತ ಕಾಂಗ್ರೆಸ್‍ನದಾಗಿತ್ತು ಎಂದು ವಿವರಿಸಿದರು.

ಸಿದ್ದರಾಮಯ್ಯ ಕೇವಲ ದಲಿತ ವಿರೋಧಿಯಲ್ಲ. ಅವರು ಲಿಂಗಾಯತರ ವಿರೋಧಿಯೂ ಆಗಿದ್ದಾರೆ. ಗೌಡರ, ಒಕ್ಕಲಿಗರ ವಿರೋಧಿ ಸಿದ್ದರಾಮಯ್ಯ. ಮಾಜಿ ಪ್ರಧಾನಿ ದೇವೇಗೌಡರನ್ನು 4 ಜನರು ಒಯ್ಯುವ ಕಾಲ ಬರಲಿದೆ ಎಂದು ರಾಜಣ್ಣ ಹೇಳಿದರು. ಅಂಥ ವ್ಯಕ್ತಿಯನ್ನು ಸಿದ್ದರಾಮೋತ್ಸವದ ಅಧ್ಯಕ್ಷರಾಗಿ ಮಾಡಿದ್ದರೆ ಇದರ ಅರ್ಥ ಏನು?
ದೇವೇಗೌಡರ ಸಾವು ಬಯಸುವವರು ಸಿದ್ದರಾಮಯ್ಯ. ಹಿತ ಬಯಸುವ ವ್ಯಕ್ತಿಯಲ್ಲ. ಕಾಂಗ್ರೆಸ್‍ನವರು ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ. ದೇವೇಗೌಡರಿಗೆ ಇನ್ನಷ್ಟು ಆರೋಗ್ಯ ಮತ್ತು ಆಯುಷ್ಯವನ್ನು ದೇವರು ದಯಪಾಲಿಸಲಿ. ಅವರಿಗೆ ಇನ್ನಷ್ಟು ಜನಸೇವೆಯ ಭಾಗ್ಯ ಸಿಗಲಿ. ನಾವು ಎಲ್ಲರ ಹಿತ ಬಯಸುವವರು ಎಂದು ನುಡಿದರು.

ಇದನ್ನೂ ಓದಿ | ಸಿದ್ದರಾಮೋತ್ಸವ Vs ಶಿವಕುಮಾರೋತ್ಸವ? ಸಿದ್ದು, ಡಿಕೆಶಿ ಬೆಂಬಲಿಗರ ಪೈಪೋಟಿ ಶುರು

Exit mobile version