ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಬಿಜೆಪಿ ಅಳೆದೂ ತೂಗಿ 2 ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಟಿಕೆಟ್ ವಂಚಿತರ ಅಸಮಾಧಾನ ಸ್ಫೋಟಗೊಂಡಿದೆ. ಭಿನ್ನಮತ ಶಮನಕ್ಕೆ ಈಗಾಗಲೇ ವರಿಷ್ಠರ ಸಹಿತ ರಾಜ್ಯ ಮುಖಂಡರು ಮುಂದಾಗಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), “ಮೂರನೇ ಪಟ್ಟಿಯಲ್ಲೂ ಅಚ್ಚರಿಗಳಿವೆ” ಎಂದು ಹೇಳುವ ಮೂಲಕ ಮತ್ತಷ್ಟು ಬದಲಾವಣೆಗಳನ್ನು ನಿರೀಕ್ಷಿಸಿ ಎಂಬ ಸಂದೇಶವನ್ನು ಕೊಟ್ಟಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರ ಕ್ಷೇತ್ರಕ್ಕೆ ಇನ್ನೂ ಟಿಕೆಟ್ ಘೋಷಣೆ ಮಾಡದೆ ಇರುವುದರಿಂದ ಮುನಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರ ಜತೆ ವರಿಷ್ಠರು ಮಾತನಾಡಿದ್ದಾರೆ. ಅವರಿಗೆ ಟಿಕೆಟ್ ನೀಡುವ ಬಗ್ಗೆ ವರಿಷ್ಠರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಇನ್ನೆರಡು ದಿನಗಳಲ್ಲಿ ಬಾಕಿ ಕ್ಷೇತ್ರಗಳಿಗೆ ಘೋಷಣೆ ಮಾಡಲಾಗುವುದು. ಮೂರನೇ ಪಟ್ಟಿಯಲ್ಲೂ ಅಚ್ಚರಿಗಳಿವೆ. ಉತ್ತಮ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಾಗಿದೆ. ಎಲ್ಲ ವರ್ಗದವರಿಗೆ ಅವಕಾಶ ಕೊಡಲಾಗಿದೆ. ಅಲ್ಲದೆ, ಜಗದೀಶ್ ಶೆಟ್ಟರ್ ಅವರು ಟಿಕೆಟ್‌ಗಾಗಿ ದೆಹಲಿಗೆ ಹೋಗಿಲ್ಲ. ವರಿಷ್ಠರ ಜತೆ ಅವರು ಮಾತನಾಡಿದ್ದಾರೆ ಎಂದು ತಿಳಿಸಿದರು.
ಎರಡನೇ ಪಟ್ಟಿಯಲ್ಲೂ ಅಸಮಾಧಾನ ಸ್ಫೋಟಗೊಂಡ ಬಗ್ಗೆ ಮಾತನಾಡಿದ ಅವರು, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ಹಾವೇರಿ ಮೀಸಲು ಕ್ಷೇತ್ರದ ಶಾಸಕ ನೆಹರೂ ಓಲೇಕಾರ್ ಜತೆ ಮಾತನಾಡಲಾಗುವುದು, ಎಲ್ಲ ಸರಿ ಹೋಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: CM Basavaraj Bommai: ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಬೊಮ್ಮಾಯಿ ದಂಪತಿ; ಸಿಎಂ ಜತೆ ಕಾಣಿಸಿಕೊಂಡ ರಿಷಬ್ ಶೆಟ್ಟಿ
ಕನಕಪುರ ಮತ್ತು ವರುಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಂದು ಸ್ಪರ್ಧಿಸಲಿ ಎಂಬ ಕಾಂಗ್ರೆಸ್ ಸವಾಲು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕಟೀಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಂದು ನಮ್ಮ ಕಡೆ ಸ್ಪರ್ಧಿಸಲಿ ನೋಡೋಣ. ಅವರನ್ನು ಕರೆತಂದು ಇಲ್ಲಿ ಸ್ಪರ್ಧೆ ಮಾಡಿಸಲಿ, ಹಾಗೆ ಮಾಡಿಸುತ್ತಾರಾ? ಕಾಂಗ್ರೆಸ್‌ನಲ್ಲಿ ಸಿಎಂ ಕಚ್ಚಾಟವೇ ಮುಗಿಯುತ್ತಿಲ್ಲ. ಮಲ್ಲಿಕಾರ್ಜುನ್ ಖರ್ಗೆ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆದ್ದು ತೋರಿಸಲಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಕ್ಷೇತ್ರ ಬಿಟ್ಟು ಕೊಡಲಿ ನೋಡೋಣ. ಹೇಗೋ ಅವರು ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕೂಡ ಮುಖ್ಯಮಂತ್ರಿ ಆಗಬೇಕಾಗಿರೋರು ಅಲ್ವಾ? ಅವರು ಒಂದು ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಕನಕಪುರದಲ್ಲಿ ಗೆದ್ದೇ ಗೆಲ್ಲುವೆ ಎಂದ ಆರ್. ಅಶೋಕ್
ಬೆಂಗಳೂರು: ಕನಕಪುರ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಬೇಕು ಎನ್ನುವುದು ಬಿಜೆಪಿ ನಿರ್ಧಾರವಾಗಿದ್ದು, ಅಲ್ಲಿಂದ ಗೆದ್ದೇ ಗೆಲ್ಲುವೆ ಎಂಬ ವಿಶ್ವಾಸವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಾನು ಒಬ್ಬ ಸಮಾನ್ಯ ಕಾರ್ಯಕರ್ತನಿಂದ ಪಕ್ಷ ಈ ಮಟ್ಟಕ್ಕೆ ಬೆಳೆಸಿದೆ. ಏರ್ಮೆಜೆನ್ಸಿ ಸಮಯದಿಂದಲೂ ಹೋರಾಟ ಮಾಡ್ತಿದ್ದೇನೆ. ಪಕ್ಷ ಏನು ಹೇಳುತ್ತೋ ಅದನ್ನು ಮಾಡುತ್ತೇನೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ. ಪಕ್ಷ ಕೊಟ್ಟ ಟಾಸ್ಕ್ ನಿರ್ವಹಿಸುವುದು ನನ್ನ ಜವಾಬ್ದಾರಿ. ಅಮಿತ್ ಶಾ ಚುನಾವಣಾ ಚಾಣಕ್ಯ. ಅವರು ಹೋದ ಕಡೆ ಗೆಲುವು ಸಾಧಿಸಿದ್ದಾರೆ. ಅವರು ಕೊಟ್ಟ ಟಾಸ್ಕ್ ನಿರ್ವಹಿಸುವುದು ನನ್ನ ಜವಾಬ್ದಾರಿ. ದೊಡ್ಡ ಅಂತರದಲ್ಲಿ ಗೆದ್ದು ಕೊಂಡು ಬರುತ್ತೇನೆ. ಇದು ಒಕ್ಕಲಿಗ ನಾಯಕರ ನಡುವಿನ ಫೈಟ್. ಡಬಲ್ ಇಂಜಿನ್ ಸರ್ಕಾರ ಬೇಕು ಅಂತ ಬಯಸುತ್ತಿದ್ದಾರೆ. ಕನಕಪುರ ಜನರಿಗೆ ಅಭಿವೃದ್ಧಿ ಬೇಕಾಗಿದೆ ಎಂದರು.
ಪದ್ಮನಾಭನಗರಕ್ಕೆ ಸಂಸದ ಡಿ.ಕೆ. ಸುರೇಶ್ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಚುನಾವಣಾ ತಂತ್ರ ಅವರು ಮಾಡ್ತಾರೆ. ನಮ್ಮ ಚುನಾವಣೆ ತಂತ್ರ ನಾವು ಮಾಡುತ್ತೇವೆ ಎಂದರು.
ವರುಣದಲ್ಲಿ ಸೋಮಣ್ಣ ಗೆಲ್ಲುತ್ತಾರೆಯೇ ಎಂಬ ಪ್ರಶ್ನೆಗೆ, ಆ ಬಗ್ಗೆ ಸೋಮಣ್ಣ ಬಳಿ ಕೇಳಿ. ಅಮಿತ್ ಶಾ ರಣತಂತ್ರ ಮಾಡಿದರೆ ಗೆಲುವು ಖಚಿತ. ನಾವು ಗೆದ್ದೇ ಗೆಲ್ಲುತ್ತೇವೆ ಎಂದರು.