ಮಂಡ್ಯ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳ ನಿಮಿತ್ತ ಕೆ.ಆರ್. ಪೇಟೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಸಿದ್ಧವಾಗಿದೆ. 1700 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆ.ಆರ್.ಪೇಟೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ಈ ಮೂಲಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ತವರೂರು ಹಾಗೂ ಸಚಿವ ಕೆ.ಸಿ.ನಾರಾಯಣಗೌಡ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಆದರೆ ಇಡೀ ಕಾರ್ಯಕ್ರಮದ ಕೇಂದ್ರಬಿಂದು ಬಿ.ವೈ. ವಿಜಯೇಂದ್ರ ಎಂಬಂತೆ ಭಾಸವಾಗುತ್ತಿದೆ.
ಬೃಹತ್ ಸಮಾವೇಶದಲ್ಲಿ ಭಾಗಿಯಾಗಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವರಾದ ಸಚಿವರಾದ ಕೆ.ಸಿ.ನಾರಾಯಣಗೌಡ, ಕೆ.ಗೋಪಾಲಯ್ಯ, ಬಿಜೆಪಿ ನಾಯಕರು ಆಗಮಿಸಿದರು.
ಬಿಜೆಪಿಗೆ ನೆಲೆಯೇ ಇಲ್ಲದಿದ್ದ ಮಂಡ್ಯ ಜಿಲ್ಲೆಯಲ್ಲಿ ಕಳೆದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯೊಬ್ಬರು ಜಯಗಳಿಸಿದ್ದರು. ಈ ಗೆಲುವಿಗೆ ಮುಖ್ಯವಾಗಿ ಬಿ.ವೈ. ವಿಜಯೇಂದ್ರ ಕಾರಣ ಎಂದು ರಾಜ್ಯ ಬಿಜೆಪಿ ಹಾಗೂ ಸ್ಥಳೀಯ ಬಿಜೆಪಿ ನಾಯಕರು ನಂಬಿದ್ದಾರೆ.
ಉಪಚುನಾವಣೆ ಘೋಷಣೆ ಆದಕೂಡಲೆ ಕ್ಷೇತ್ರದಲ್ಲಿ ಬೀಡುಬಿಟ್ಟು ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡುಬಂದರು ಎಂದು ಸ್ಥಳೀಯ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ. ಆಗಮಿಸುತ್ತಿದ್ದಂತೆಯೇ ವಿಜಯೇಂದ್ರ ಕುರಿತು ಸ್ಥಳೀಯ ಕಾರ್ಯಕರ್ತರು ಸಂತಸಗೊಂಡು, ಘೋಷಣೆ ಕೂಗಿ ಸ್ವಾಗತಿಸಿದರು. ವಿಜಯೇಂದ್ರ ಅವರನ್ನು ಕೇಂದ್ರವಾಗಿಸಿಕೊಂಡು ಮಂಡ್ಯ ಜಿಲ್ಲೆಯಲ್ಲಿ 2-3 ಸ್ಥಾನಗಳಲ್ಲಿ ಜಯಿಸಲು ಬಿಜೆಪಿ ಯೋಜನೆ ರೂಪಿಸಿದೆ.
ಮಂಡ್ಯಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ,
ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಯೋ ಹಾಗೆ ಕಾಂಗ್ರೆಸ್‌ನವರು ಮಾತನಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿ, ನೀನು ಮುಖ್ಯಮಂತ್ರಿ ಎಂದು ಬಡಿದಾಡಿಕೊಳ್ಳುತ್ತಿದ್ದಾರೆ. ಯಾವ ಕಾರಣಕ್ಕೂ ಅವರು ಸಿಎಂ ಆಗಲು ಬಿಡುವುದಿಲ್ಲ. ಬಿಜೆಪಿಯವರೇ ಮುಖ್ಯಮಂತ್ರಿ ಆಗುತ್ತಾರೆ. ಮುಂದಿನ ಚುನಾವಣೆ ನಂತರ ನೂರಕ್ಕೆ ನೂರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
ಕೆ.ಆರ್. ಪೇಟೆಗೆ ಆಗಮಿಸಿದ ಕೂಡಲೆ ಸುದ್ದಿಗಾರರ ಜತೆಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಯಾರು ಮುಖ್ಯಮಂತ್ರಿ ಅಗಬೇಕು ಎಂದು ಕಾಂಗ್ರೆಸ್‌ನಲ್ಲಿ ಚರ್ಚೆ ಆಗುತ್ತಿರುವುದು ಅವರ ಆಂತರಿಕ ವಿಚಾರ. ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಅಂತಿಮವಾಗಿ ಜನರು ತೀರ್ಮಾನ ಮಾಡುತ್ತಾರೆ. ಈಗಾಗಲೆ ಈ ವಿಚಾರದಲ್ಲಿ ಅನೇಕ ಬಾರಿ ಪ್ರತಿಕ್ರಿಯೆ ನೀಡಿದ್ದೇನೆ, ಪದೇಪದೆ ಮಾತನಾಡಲು ಇಷ್ಟಪಡುವುದಿಲ್ಲ ಎಂದರು.
ಇದನ್ನೂ ಓದಿ | ಕಬಿನಿ, ಕೆಆರ್‌ಎಸ್ ಜಲಾಶಯಗಳಿಗೆ ಬಾಗಿನ ಅರ್ಪಿಸಿದ ಸಿಎಂ ಬೊಮ್ಮಾಯಿ ದಂಪತಿ