ಬೆಂಗಳೂರು: ಕರ್ನಾಟಕದಲ್ಲಿ ದಿನೇದಿನೆ ಬೇಸಿಗೆಯ ಬಿಸಿಲಿಗಿಂತ ವಿಧಾನಸಭೆ ಚುನಾವಣೆಯ (Karnataka Election 2023) ಕಾವೇ ಜಾಸ್ತಿಯಾಗುತ್ತಿದೆ. ಟಿಕೆಟ್ ಸಿಕ್ಕವರು ಚುನಾವಣೆಗೆ ತಯಾರಾಗುತ್ತಿದ್ದರೆ, ಟಿಕೆಟ್ ಸಿಗದವರು ಮತ್ತೊಂದು ಪಕ್ಷಕ್ಕೆ ಜಿಗಿದು, ಟಿಕೆಟ್ ಪಡೆಯುತ್ತಿದ್ದಾರೆ. ಚುನಾವಣೆ ಪ್ರಚಾರವು ಇನ್ನಿಲ್ಲದ ಕಾವು ಪಡೆದುಕೊಳ್ಳುತ್ತಿದೆ. ಅದರಲ್ಲೂ, ಆಡಳಿತಾರೂಢ ಬಿಜೆಪಿಯು ಹಲವು ಬದಲಾವಣೆ, ತಂತ್ರಗಾರಿಕೆಯಿಂದ ಜನರ ಮನ ಸೆಳೆಯಲು ಯತ್ನಿಸುತ್ತಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯ ವಿಧಾನಸಭೆ ಚುನಾವಣೆಯನ್ನು ಮತ್ತಷ್ಟು ರಂಗೇರಿಸಲಿದ್ದಾರೆ.
ನರೇಂದ್ರ ಮೋದಿ ಅವರು ಮೇ 4ರಂದು ಉಡುಪಿಗೆ ಆಗಮಿಸಲಿದ್ದು, ಬೃಹತ್ ಸಮಾವೇಶ ನಡೆಸಲಿದ್ದಾರೆ. ಇವರ ಜತೆಗೆ ಯೋಗಿ ಆದಿತ್ಯನಾಥ್ ಅವರೂ ಆಗಮಿಸುತ್ತಿದ್ದು, ಇಬ್ಬರೂ ಉಡುಪಿಯಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಈಗಾಗಲೇ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಹಾಗೆಯೇ, ರಾಜ್ಯದಲ್ಲೂ ಯೋಗಿ ಆದಿತ್ಯನಾಥ್ ಅವರಿಗೆ ಅಭಿಮಾನಿಗಳಿದ್ದಾರೆ. ಈ ಇಬ್ಬರೂ ನಾಯಕರು ಜತೆಗೂಡಿ ಪ್ರಚಾರ ಕೈಗೊಳ್ಳುವ ಮೂಲಕ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಎಂಟಕ್ಕೆ ಎಂಟೂ ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಬಿಜೆಪಿ ಕಾರ್ಯತಂತ್ರವಾಗಿದೆ. ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
15-20 ರ‍್ಯಾಲಿ ನಡೆಸಲಿರುವ ಮೋದಿ
ಮೇ 10ರಂದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ 15-20 ಬೃಹತ್ ರ‍್ಯಾಲಿಗಳಲ್ಲಿ ಭಾಗವಹಿಸಿ ಮೋದಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಆದರೆ, ರಾಜ್ಯದ ಯಾವ ಪ್ರದೇಶಗಳಲ್ಲಿ ಮೋದಿ ಅವರು ರ‍್ಯಾಲಿ ನಡೆಸಲಿದ್ದಾರೆ ಎಂಬುದು ಕೆಲವೇ ದಿನಗಳಲ್ಲಿ ಫೈನಲ್ ಆಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಲಿವೆ. ಆದರೆ, ಮೇ 4ರಂದು ಮಾತ್ರ ಮೋದಿ ಹಾಗೂ ಯೋಗಿ ಅವರು ಜಂಟಿಯಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಮೇ 4ಕ್ಕೂ ಮೊದಲೇ ಮೋದಿ ಅವರು ಕೆಲವು ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಟಿಕೆಟ್ ಹಂಚಿಕೆಯ ವೇಳೆ ಬಿಜೆಪಿಯು ಹಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇದರಿಂದ ಭಿನ್ನಮತ ಸೃಷ್ಟಿಯಾಗಿದೆ. ಪ್ರಮುಖ ನಾಯಕರು ಬಿಜೆಪಿಯನ್ನು ತೊರೆದಿದ್ದಾರೆ. ಹೊಸಬರಿಗೆ ಟಿಕೆಟ್ ನೀಡಿದ ಕಾರಣ ಅವರ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ, ಮೋದಿ ಅವರ ವರ್ಚಸ್ಸು ಹಾಗೂ ಯೋಗಿ ಆದಿತ್ಯನಾಥ್ ಅವರ ಖ್ಯಾತಿಯನ್ನು ಗಳಿಸಿ ಹಿಂದುಗಳ ಮತಗಳನ್ನು ಕ್ರೋಡೀಕರಿಸುವುದು ಬಿಜೆಪಿ ಕಾರ್ಯತಂತ್ರವಾಗಿದೆ ಎಂದು ತಿಳಿದುಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಹಲವು ಬಾರಿ ಕರ್ನಾಟಕದಲ್ಲಿ ಪ್ರಚಾರ ಕೈಗೊಂಡಿದ್ದರು.
ಇದನ್ನೂ ಓದಿ: Karnataka Elections : ಹತ್ತನೇ ವಿಧಾನಸಭಾ ಚುನಾವಣೆ ಎದುರಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ರೆಡಿ, ಏ. 18ರಂದು ನಾಮಪತ್ರ