ಬೆಂಗಳೂರು: ಒಂದು ಕಡೆ ಕಾಂಗ್ರೆಸ್ ಬಿಜೆಪಿ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಾ ಮುಗಿಬೀಳುತ್ತಿದ್ದರೆ ಬಿಜೆಪಿ ಕೂಡಾ ತಿರುಗೇಟು ನೀಡುತ್ತಿದೆ. ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜನಸ್ಪಂದನ ಕಾರ್ಯಕ್ರಮದಲ್ಲಿ ಆಡಿದ ʻದಮ್ಮಿದ್ದರೆ.. ತಾಕತ್ತಿದ್ದರೆʼ ಎಂಬ ಶಬ್ದಗಳನ್ನು ಲೇವಡಿ ಮಾಡುತ್ತಿರುವ ಕಾಂಗ್ರೆಸ್‌ಗೆ ಅದೇ ಶಬ್ದಗಳನ್ನು ಬಳಸಿ ಕೌಂಟರ್ ನೀಡಲಾಗುತ್ತಿದೆ.
ಕರ್ನಾಟಕ ಬಿಜೆಪಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವೈಯಕ್ತಿಕ ಖಾತೆಗಳಿಂದ ಟ್ವೀಟ್ ಮೂಲಕ ಕಾಂಗ್ರೆಸ್ ಮೇಲೆ ದಾಳಿ ನಡೆಸಲಾಗಿದೆ. ಭ್ರಷ್ಟ ಕಾಂಗ್ರೆಸ್ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಅಟ್ಯಾಕ್ ನಡೆದಿದೆ.
ತನಿಖಾ ಸಂಸ್ಥೆ ಮುಚ್ಚುವಾಗ ಎಲ್ಲಿತ್ತು ಧಮ್?
ʻʻತಾಕತ್ತಿದ್ದರೆ ನಮ್ಮ ಹಗರಣಗಳನ್ನು ಬಯಲಿಗೆಳೆಯಿರಿ ಎನ್ನುವ #ಭ್ರಷ್ಟರಾಮಯ್ಯ ಅವರೇ, ಹಗರಣ ಮಾಡಿ, ತನಿಖೆಗೆ ಹೆದರಿ ತನಿಖಾ ಸಂಸ್ಥೆಗಳನ್ನು ಮುಚ್ಚುವಾಗ ನಿಮ್ಮ ಧಮ್ ಎಲ್ಲಿ ಹೋಗಿತ್ತು? ಶಿಕ್ಷಕರ ನೇಮಕಾತಿ ಹಗರಣ, ಅರ್ಕಾವತಿ ರೀಡೂ ಹಗರಣ, ಇಂಧನ ಇಲಾಖೆ ಹಗರಣ ಒಂದೇ ಎರಡೇ, ಕಾಂಗ್ರೆಸ್ ಮಾಡಿದ್ದೆಲ್ಲವೂ ಹಗರಣವೇʼʼ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.
ʻʻಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅರ್ಜಿಯೇ ಹಾಕದೆ ಸರ್ಕಾರಿ ಉದ್ಯೋಗಿಯಾಗಬಹುದಿತ್ತು. #ಭ್ರಷ್ಟರಾಮಯ್ಯ ಸಿಎಂ ಆಗಿದ್ದಾಗ 14 ಜನರು ಅಕ್ರಮವಾಗಿ ಶಿಕ್ಷಕರಾಗಿ ನೇಮಕಾತಿಯಾಗಿದ್ದರು. ಈ ಅಕ್ರಮ ನೇಮಕಾತಿಗೆ ಕಾಂಗ್ರೆಸ್ ಫಿಕ್ಸ್ ಮಾಡಿದ ಕಮಿಷನ್ ಪರ್ಸಂಟೇಜ್ ಎಷ್ಟು?ʼʼ ಎಂದು ಪ್ರಶ್ನಿಸಿದೆ.
ನಳಿನ್ ಕುಮಾರ್ ಹೇಳಿದ್ದೇನು?
ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಆಡಳಿತದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನೆಲ್ಲಾ ತನಿಖೆ ನಡೆಸಿ, ಬಯಲಿಗೆ ಎಳೆಯುತ್ತೇವೆ. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅರ್ಕಾವತಿ ಬಡಾವಣೆ, ಹಾಸ್ಟೆಲ್‌ಗಳಿಗೆ ಪೂರೈಸಲೆಂದು ಹಾಸಿಗೆ, ದಿಂಬು ಖರೀದಿಯಲ್ಲಿ ಹಗರಣ ನಡೆದಿದೆ. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರ್‌ವೆಲ್ ಹಗರಣ ನಡೆದಿದೆ. ಇಂಧನ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿತ್ತು. ಇದೆಲ್ಲವನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮುಚ್ಚಿ ಹಾಕಿದ್ದಾರೆ. ಇದನ್ನೆಲ್ಲ ಹೊರತೆಗೆಯುವ ಕೆಲಸವನ್ನು ಮಾಡುತ್ತೇವೆ ಎಂದು ನಳಿನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | 40% ಕಮಿಷನ್ | ಬಿಜೆಪಿ ಸರಕಾರದ ಮೇಲೆ 15,00,00,00,00,000 ರೂ. ಲೂಟಿ ಆರೋಪ, ಕಾಂಗ್ರೆಸ್‌ನಿಂದ ಲಂಚದ ಮೆನು!