ಬೆಂಗಳೂರು: ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೈರದೇವನಹಳ್ಳಿಯ ಎಲ್ಎಲ್‌ಸಿ ಕಾಲುವೆ ದುರಸ್ತಿ ಸಂಬಂಧ ಸರ್ಕಾರಿ ಆಡಳಿತ ಯಂತ್ರದ ನಿಧಾನಗತಿ ಕೆಲಸವನ್ನು ವಿರೋಧಿಸಿ ಮಂಗಳವಾರ (ನ.೧) ರಾತ್ರಿ ಸ್ಥಳದಲ್ಲೇ ವಾಸ್ತವ್ಯ ಹೂಡಿದ್ದ ಸಚಿವ ಶ್ರೀರಾಮುಲು ಈಗ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. “ನಿಮ್ಮೀ ಪ್ರತಿಭಟನೆ ಸಿಎಂ, ಪಿಎಂ ವಿರುದ್ಧವಾ” ಎಂದು ಪ್ರಶ್ನೆ ಮಾಡಿದ್ದ ರಾಜ್ಯ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಶ್ರೀರಾಮುಲು, “ನನ್ನದು ಯಾರ ವಿರುದ್ಧದ ಪ್ರತಿಭಟನೆಯಲ್ಲ, ನಿಮ್ಮ ಪಕ್ಷದ ಶಾಸಕರು ಮಾಡುವ ಕೆಲಸವನ್ನು ನಾನು ಶ್ರದ್ಧೆಯಿಂದ ಮಾಡಿದ್ದೇನೆ” ಎಂದು ಟ್ವೀಟ್ (BJP vs Congress) ಮೂಲಕವೇ ಪ್ರತ್ಯುತ್ತರ ಕೊಟ್ಟಿದ್ದಾರೆ.
ಶ್ರೀರಾಮು ಸರಣಿ ಟ್ವೀಟ್‌ನಲ್ಲೇನಿದೆ?
೧. ನಾನು ಯಾರ ವಿರುದ್ಧವೂ ಪ್ರತಿಭಟನೆ ಅಥವಾ ಧರಣಿ ನಡೆಸಿಲ್ಲ. ಈ ಭಾಗದ ರೈತರು ತಮ್ಮ ಬೆಳೆಗಳಿಗೆ ಸಮಸ್ಯೆಯಾಗುತ್ತಿದೆ ಎಂದು ನನ್ನ ಬಳಿ ಮನವಿ ಮಾಡಿಕೊಂಡ ಕಾರಣಕ್ಕಾಗಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ.
೨. ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗದ್ದೆ ಹಾಗೂ ಹೊಲಗಳಿಗೆ ಕಳೆದ 20 ದಿನಗಳಿಂದ ನೀರು ಹರಿಸದ ಕಾರಣ ಭತ್ತ ಹಾಗೂ ಮೆಣಸಿನಕಾಯಿ ಸೇರಿದಂತೆ ಮತ್ತಿತರರ ಬೆಳೆಗಳು ಒಣಗಿಹೋಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
೩. ಇದು ಮಾನವೀಯತೆ ದೃಷ್ಟಿಯಿಂದ ಮಾಡಿದ ಕೆಲಸವೇ ಹೊರತು, ರಾಜಕೀಯ ಲಾಭಕ್ಕಾಗಿ ಅಲ್ಲ. ಸ್ಥಳದಲ್ಲೇ ಮೊಕ್ಕಾಂ ಹೂಡಿ, ಕಾಲುವೆಯ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು ಹಾಗೂ ರೈತರಿಗೆ ನೈತಿಕ ಬೆಂಬಲ ಕೊಟ್ಟಿದ್ದೇನೆ. ಇದು ರೈತರ ಬೇಡಿಕೆಯೂ ಆಗಿತ್ತು. ನೀವು ಸ್ಥಳದಲ್ಲೇ ಇದ್ದರೆ ಕಾಮಗಾರಿ ಬೇಗನೆ ಮುಗಿಯುತ್ತದೆ ಎಂದು ನೊಂದ ರೈತರು ಮನವಿ ಮಾಡಿದ್ದರು.
ಇದನ್ನೂ ಓದಿ | ಪೆದ್ದ ನಾನಲ್ಲ, ಸಿದ್ದರಾಮಯ್ಯನೇ ಪೆದ್ದ: ದುಷ್ಟ ರಾಜಕಾರಣಿ, ಶಕುನಿ, ಸ್ವಾರ್ಥಿ ಎಂದೆಲ್ಲ ಬೈದ ಶ್ರೀರಾಮುಲು
೪. ಚುನಾವಣೆ ಸಮಯ ಬಂದಾಗ ರಾಜಕಾರಣ ಮಾಡೋಣ. ನನಗೆ ರಾಜಕೀಯ ಜನ್ಮ ನೀಡಿದ ನನ್ನ ರೈತರು ಸಂಕಷ್ಟದಲ್ಲಿದ್ದಾಗ ಅವರ ನೋವಿಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆಯೇ ಹೊರೆತು ಇದರಲ್ಲಿ ರಾಜಕಾರಣದ ಪ್ರಶ್ನೆ ಎಲ್ಲಿಂದ ಬರುತ್ತದೆ?
೫. ರಾಜ್ಯ ಇಲ್ಲವೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದೇನೆ ಎಂದರೆ @INCKarnataka ನಾಯಕರ ಸಣ್ಣತನಕ್ಕೆ ಹಿಡಿದ ಕೈಗನ್ನಡಿ. ನಾನು ಜನರಿಂದ ಬೆಳೆದು ಬಂದ ವ್ಯಕ್ತಿ. ಇಂತಹ ಚಿಲ್ಲರೆ ರಾಜಕಾರಣ ಮಾಡಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕಾದ ದರ್ದು ನನಗಿಲ್ಲ.
೬. ಚುನಾವಣೆ ಬಂದಾಗ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಇರುತ್ತದೆ. ಅಷ್ಟಕ್ಕೂ ಕಳೆದ 20 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಈ ಭಾಗದ ಶಾಸಕರು ಎಷ್ಟು ಭಾರಿ ರೈತರ ಜತೆ ಸಭೆ ನಡೆಸಿದ್ದಾರೆ?
೭. ಅಧಿಕಾರಿಗಳಿಗೆ ಕಾಮಗಾರಿ ಮುಗಿಸುವಂತೆ ಏಕೆ ಸೂಚನೆ ಕೊಟ್ಟಿಲ್ಲ. ನಿಮ್ಮ ಕೈಯಲ್ಲಿ ಆಗದಿದ್ದನ್ನು ನಾನು ಅತ್ಯಂತ ಶ್ರದ್ಧೆಯಿಂದ ಮಾಡಿದ್ದೇನೆ. ಒಬ್ಬರು ಮಾಡಿದ ಕೆಲಸವನ್ನು ಸಹಿಸಿಕೊಳ್ಳುವ ಸಹನೆ ಇಲ್ಲದಿದ್ದರೆ ಬರಲಿರುವ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ.
ಇದನ್ನೂ ಓದಿ | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇಬ್ಬರೂ ನರಿಗಳು; ಕುರಿಗಳ ಥರ ವೇಷ ಹಾಕ್ಕೊಂಡು ಬರ್ತಾರೆ ಅಷ್ಟೆ ಎಂದ ಶ್ರೀರಾಮುಲು
ಈ ಮೂಲಕ ಕಾಂಗ್ರೆಸ್ ಶಾಸಕ ನಾಗೇಂದ್ರ ಅವರು ರೈತರ ಮನವಿಗೆ ಸ್ಪಂದಿಸಿಲ್ಲ ಎಂದು ಸಚಿವ ಶ್ರೀರಾಮುಲು ಆರೋಪ ಮಾಡಿದ್ದಾರೆ.
ಇನ್ನು ವೇದಾವತಿ ನದಿಯಲ್ಲಿ ಸ್ನಾನ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, “ಪ್ರತಿದಿನ ನಾನು ನನ್ನ ದಿನನಿತ್ಯದ ಚಟುವಟಿಕೆಯನ್ನು ಆರಂಭಸುವ ಮುನ್ನ ಪೂಜಾ ವಿಧಾನಗಳನ್ನು ನೇರವೇರಿಸುವ ರೂಢಿಯನ್ನು ಇಟ್ಟುಕೊಂಡಿದ್ದೇನೆ. ಆ ಬಳಿಕವೇ ಇತರ ಕೆಲಸ ಕಾರ್ಯಗಳಿಗೆ ಗಮನ ಕೊಡುತ್ತೇನೆ. ಅದರಂತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅರ್ಚಕರ ಜತೆ ಪೂಜೆ ನೆರವೇರಿಸಿ ರೈತರ ಕಲ್ಯಾಣಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದೆನು ಎಂದು ರಾಮುಲು ಹೇಳಿದ್ದಾರೆ.
ಪ್ರತಿಭಟನೆ ಯಾರ ವಿರುದ್ಧ ಎಂದು ಕೇಳಿದ್ದ ಕಾಂಗ್ರೆಸ್
ಸಚಿವ ಶ್ರೀರಾಮುಲು ಧರಣಿ ನಡೆಸುತ್ತಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ಟೀಕೆ ಮಾಡಿದ್ದು, ಇದು ಯಾರ ವಿರುದ್ಧ ಎಂದು ಪ್ರಶ್ನೆ ಮಾಡಿದೆ. ಈ ಕುರಿತು ಬುಧವಾರ (ಅ.೨) ಬೆಳಗ್ಗೆ ಟ್ವೀಟ್ ಮಾಡಿದ್ದ ಕೆಪಿಸಿಸಿ, ಸಚಿವ ಶ್ರೀರಾಮುಲು ಅವರೇ ತಾವು ಧರಣಿ ನಡೆಸಿದ್ದು ಯಾರ ವಿರುದ್ಧ? ನಿಮ್ಮದೇ ಸರ್ಕಾರದ ವಿರುದ್ಧವೇ? ನಿಮ್ಮದೇ ಸಿಎಂ ವಿರುದ್ಧವೇ? ನಿಮ್ಮದೇ ಪ್ರಧಾನಿ ವಿರುದ್ಧವೇ? ಎಂದು ವ್ಯಂಗ್ಯ ಮಾಡಿತ್ತು.
ಕ್ಯಾಬಿನೆಟ್ ಸಚಿವರು ತಮ್ಮದೇ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ಥಿತಿ ಒದಗಿದ್ದೇಕೆ? ತಮ್ಮ ಮಾತನ್ನು ಯಾರೂ ಕೇಳುತ್ತಿಲ್ಲವೇ? ಅಥವಾ ಇದು ಕೇವಲ ತಳ್ಳುವ ಸರ್ಕಾರವೇ? ಎಂದೂ ಸಹ ಕಾಂಗ್ರೆಸ್ ಪ್ರಶ್ನೆ ಮಾಡುವ ಮೂಲಕ ಸರ್ಕಾರದ ಕಾರ್ಯವೈಖರಿಯನ್ನು ಕಾಲೆಳೆದಿತ್ತು. ಈಗ ಇದಕ್ಕೆ ಟ್ವೀಟ್ ಮೂಲಕವೇ ಉತ್ತರ ಕೊಟ್ಟಿರುವ ಶ್ರೀರಾಮುಲು, ಕಾಂಗ್ರೆಸ್ ಶಾಸಕರ ಮೇಲೆಯೇ ಆರೋಪ ಮಾಡಿದ್ದಾರೆ.
ಇದನ್ನೂ ಓದಿ | Minister Protest | ನೀರು ಬಿಡೋವರೆಗೂ ಕದಲಲ್ಲ ಎಂದ ಶ್ರೀರಾಮುಲು; ಸಿಎಂ, ಪಿಎಂ ವಿರುದ್ಧದ ಧರಣಿಯೇ ಎಂದ ಕಾಂಗ್ರೆಸ್!