Site icon Vistara News

10 ಜನ್ಮ ಎತ್ತಿಬಂದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ, ಚನ್ನಪಟ್ಟಣದಲ್ಲೇ ನನ್ನ ಸ್ಪರ್ಧೆ: ಎಚ್‌ಡಿಕೆ

HDK

ಚನ್ನಪಟ್ಟಣ: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ಸೇರಿ ಹಲವು ರಣತಂತ್ರ ರೂಪಿಸುತ್ತಿದ್ದಾರೆ. ಚುನಾವಣೆಯ ಭಾಗವಾಗಿ ಚನ್ನಪಟ್ಟಣದಲ್ಲಿ ನಡೆದ ಅಲ್ಪಸಂಖ್ಯಾತರ ಸಭೆಯಲ್ಲಿ ಭಾಗವಹಿಸಿದ ಅವರು, “ರಾಜ್ಯದಲ್ಲಿ ಇನ್ನೂ ಹತ್ತು ಜನ್ಮ ಎತ್ತಿಬಂದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ” ಎಂಬ ಭವಿಷ್ಯ ನುಡಿದಿದ್ದಾರೆ.

“ಸರ್ಕಾರದ ಅವಧಿ ಮುಗಿಯಲು ಕೇವಲ ಐದು ತಿಂಗಳು ಬಾಕಿ ಇದೆ. ದಿನಗಳು ಓಡುತ್ತವೆ, ಕಾಲಚಕ್ರ ತಿರುಗುತ್ತಿರುತ್ತದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ನಾನು ಪಕ್ಷ ಸಂಘಟನೆ ಮಾಡುತ್ತೇನೆ. ಅವರು 150 ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ರಾಜ್ಯದಲ್ಲಿ ಏನು ಕಿತ್ತು ಗುಡ್ಡೆ ಹಾಕಿದ್ದಾರೆ ಅಂತ ಜನ ಅವರನ್ನು ಗೆಲ್ಲಿಸುತ್ತಾರೆ” ಎಂದು ಪ್ರಶ್ನಿಸಿದರು.

“ಮಳೆಯಿಂದಾಗಿ ಬಡವರ ಮನೆಗಳು ಬಿದ್ದಿವೆ. ಅವರ ತಲೆಗೊಂದು ಸೂರಿನ ವ್ಯವಸ್ಥೆ ಮಾಡುವ ಯೋಗ್ಯತೆ ಇಲ್ಲ. ಕೋವಿಡ್‌ನಿಂದಾಗಿ ಮೃತಪಟ್ಟವರ ಕುಟುಂಬಸ್ಥರಿಗೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿದರು. ಆದರೆ, ಅವರ ಯೋಗ್ಯತೆಗೆ ಎಷ್ಟು ಜನರಿಗೆ ಪರಿಹಾರ ನೀಡಿದ್ದಾರೆ? ಇಂತಹ ಯೋಗ್ಯತೆ ಇರುವ ನಿಮ್ಮನ್ನು ರಾಜ್ಯದ ಜನ ಗೆಲ್ಲಿಸಿಬಿಡ್ತಾರಾ? ದೇವೇಗೌಡರ ಮಕ್ಕಳು ಇದ್ದೇವೆ. ನಾವೂ ನೋಡುತ್ತೇವೆ” ಎಂದರು.

ಪ್ರೀತಿ-ವಿಶ್ವಾಸಕ್ಕೆ ಮಾತ್ರ ಶರಣು

“ನಾವು ಪ್ರೀತಿ-ವಿಶ್ವಾಸಕ್ಕೆ ತಲೆಬಾಗುತ್ತೇವೆಯೇ ಹೊರತು, ದೌಲತ್ತು, ಹಣಕ್ಕೆ ಅಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಈ ಸರ್ಕಾರಕ್ಕೆ ಹೇಳುತ್ತೇನೆ. ಇವರು ಯಾವ ರೀತಿ ಕಿರುಕುಳ ಕೊಟ್ಟಿದ್ದಾರೆ, ಈಗಲೂ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಕಾಲವೇ ಇವರಿಗೆ ತಕ್ಕ ಪಾಠ ಕಲಿಸಲಿದೆ” ಎಂದು ಹೇಳಿದರು.

ಚನ್ನಪಟ್ಟಣದಲ್ಲೇ ಸ್ಪರ್ಧೆ ಎಂದ ಎಚ್‌ಡಿಕೆ

ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣದಿಂದಲೇ ಸ್ಪರ್ಧಿಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. “ಕುತಂತ್ರ ರಾಜಕಾರಣಕ್ಕೆ ನಾನು ಹೆದರಿ ಓಡುವವನಲ್ಲ. ನಾನು ದೇವೇಗೌಡರ ಕುಟುಂಬದಿಂದ ಬಂದವನು. ಎಲ್ಲವನ್ನೂ ಎದುರಿಸುವ ಛಲವನ್ನು ದೇವೇಗೌಡರು ಬೆಳೆಸಿದ್ದಾರೆ. ಚನ್ನಪಟ್ಟಣದಲ್ಲಿಯೇ ಸ್ಪರ್ಧಿಸುತ್ತೇನೆ. ನನಗೆ ಹಾಲು ಕೊಡುತ್ತೀರೋ? ವಿಷ ಕೊಡುತ್ತೀರೋ ಎಂಬುದು ನಿಮಗೆ ಬಿಟ್ಟಿದ್ದು” ಎಂದು ಭಾವುಕರಾದರು.

“ದೇಶದಲ್ಲಿ ಒಂದು ಮಾದರಿಯ ಸರ್ಕಾರ ತರಬೇಕು ಅಂತ ಸವಾಲು ಸ್ವೀಕಾರ ಮಾಡಿ ಹೊರಟಿದ್ದೇನೆ. ಇಡೀ ರಾಜ್ಯದಲ್ಲಿ 120 ರಿಂದ 124 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ. ನಾನು ನಿಮ್ಮನ್ನ ನಂಬಿದ್ದೇನೆ, ಪಲಾಯನ ಮಾಡುವ ವ್ಯಕ್ತಿಯಲ್ಲ. ನಿಮಗೋಸ್ಕರ ಎಂತಹ ಕಷ್ಟ ಬೇಕಾದರೂ ಸಹಿಸಿಕೊಳ್ಳಲು ಸಿದ್ಧನಿದ್ದೇನೆ” ಎಂದು ಭರವಸೆ ನೀಡಿದರು.

ಯೋಗೇಶ್ವರ್‌ ವಿರುದ್ಧ ನಿಖಿಲ್‌ ವಾಗ್ದಾಳಿ

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. “ಮಾಜಿ ಶಾಸಕರು ಮಾಜಿಯಾಗಿಯೇ ಉಳಿಯುತ್ತಾರೆ. ನಾನೇ ಪ್ರತಿ ಹಳ್ಳಿಗೂ ಭೇಟಿ ನೀಡುತ್ತೇನೆ. ನಗರದ ಪ್ರತಿ ವಾರ್ಡ್‌ಗಳಿಗೆ ಭೇಟಿ ಕೊಡುತ್ತೇನೆ. ಇಲ್ಲಿನ ಮಾಜಿ ಶಾಸಕರ ಹೆಸರು ಹೇಳಲು ಬಯಸುವುದಿಲ್ಲ. ಆದರೆ, ಅವರು ಮುಂದೆ ಮಾಜಿ ಶಾಸಕರಾಗಿಯೇ ಉಳಿಯುತ್ತಾರೆ. ಚನ್ನಪಟ್ಟಣದಲ್ಲಿ ಕುಮಾರಣ್ಣ ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ. ಮಾಜಿ ಶಾಸಕರು ಅದ್ಯಾವುದೋ ಕಲಾವಿದರ ಕೋಟಾದಲ್ಲಿ ಎಂಎಲ್‌ಸಿ ಆಗಿ 50 ಕೋಟಿ ರೂ. ತಂದಿದ್ದಾರೆ. ಹಣ ತಂದು ನಮ್ಮ ಭಾಗದ ಎಲ್ಲ ನಾಯಕರನ್ನು ಕೊಂಡುಕೊಳ್ಳುತ್ತೇನೆ ಎಂಬ ಅಹಂಕಾರದಲ್ಲಿದ್ದಾರೆ. ಆದರೆ, ದುಡ್ಡಿಗೋಸ್ಕರ ಮಾರಾಟವಾಗುವ ಪಕ್ಷ ನಮ್ಮದಲ್ಲ” ಎಂದು ಹೇಳಿದರು.

ಇದನ್ನೂ ಓದಿ | Election 2023 | ಮುಂದಿನ ಚುನಾವಣೆಯಲ್ಲಿ 40 ಸೀಟು ಬಂದರೆ ನಾನು ಸಿಎಂ ಆಗಲ್ಲ: ಎಚ್‌.ಡಿ. ಕುಮಾರಸ್ವಾಮಿ

Exit mobile version