ಬಾಗಲಕೋಟೆ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election) ದಿನಗಣನೆ ಆರಂಭವಾಗಿದೆ. ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳೂ ಜೋರಾಗಿಯೇ ನಡೆಯುತ್ತಿದೆ. ಇನ್ನು ಜೆಡಿಎಸ್ ಪಕ್ಷವು ಕಾಂಗ್ರೆಸ್‌ನ ಬಿ ಟೀಮ್ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದ್ದಾರೆ. “ನಾನು ನಾಡಿನ ಜನತೆಯ ಟೀಮ್. ರಾಜ್ಯದ ಕನ್ನಡಿಗರ ಬಿ ಟೀಮ್. ಅವರು ತಲೆಯಲ್ಲಿ ಏನೇನೋ ಇದ್ದರೆ ನಾನು ಏನೂ ಮಾಡುವುದಕ್ಕೆ ಆಗುವುದಿಲ್ಲ. ಬಿಜೆಪಿಯಲ್ಲಿ ಬ್ರಾಹ್ಮಣ ಮುಖ್ಯಮಂತ್ರಿ ಬಗ್ಗೆ ಈ ಮೊದಲು ನಾನು ಪ್ರಸ್ತಾಪ ಮಾಡಿದ್ದೆ. ಈಗ ನಡೆಯುತ್ತಿರೋದು ಅದೇ ಅಲ್ವಾ? ರಾಜ್ಯದಲ್ಲಿ ಬಿಜೆಪಿಯವರು ಲಿಂಗಾಯತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದಾರೆ.
ಬಾದಾಮಿ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಎಚ್.ಡಿ. ಕುಮಾರಸ್ವಾಮಿ, “ಕಾಂಗ್ರೆಸ್ ಬಿ ಟೀಮ್ ಜೆಡಿಎಸ್ ಎಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಗರು ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್‌ನವರು ಬಿಜೆಪಿಯ ಬಿ ಟೀಮ್ ಜೆಡಿಎಸ್ ಅಂತಾರೆ. ನಾನು ಯಾವ ಟೀಮ್ ಅಂತ ಹೇಳಲಿ? ಆದರೆ, ನಾನು ಜನತೆ ಟೀಮ್, ಕನ್ನಡಿಗರ ಬಿ ಟೀಮ್ ಎಂದಷ್ಟೇ ಹೇಳಬಲ್ಲೆ” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:BJP Manifesto : ಬಿಜೆಪಿಯು ಪ್ರಣಾಳಿಕೆಯಲ್ಲಿ ನೀಡಿರುವ ಪ್ರಮುಖ 16 ಭರವಸೆಗಳೇನು?
ಲಿಂಗಾಯತರು ಸಿಎಂ ಆಗಲ್ಲ
ಈಗ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಜನರೇ ಗಮನಿಸುತ್ತಿದ್ದಾರೆ. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯಾವುದೇ ಕಾರಣಕ್ಕೂ ಲಿಂಗಾಯತರು ಸಿಎಂ ಆಗಲು ಸಾಧ್ಯವೇ ಇಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಪುನರುಚ್ಚರಿಸಿದರು.
ಜನರ ಒಳಿತಿಗಾಗಿ ನಾನು ಸರ್ಪ ಆಗಲೂ ಸಿದ್ಧ
ಜನರ ಒಳಿತಿಗಾಗಿ ನಾನು ಸರ್ಪ ಆಗಲೂ ಸಿದ್ಧ. ಸರ್ಪ ಆಗೋದಾದರೆ ನನಗೆ ಯಾವುದೇ ಅಡ್ಡಿ ಇಲ್ಲ. ಸರ್ಪ ಯಾವಾಗಲೂ ಡೇಂಜರ್ ಎಂಬುದು ಗೊತ್ತಲ್ಲ. ಯಾರಿಗಾದರೂ ಅದು ಅಪಾಯವೇ ಆಗಿದೆ. ಆದರೆ, ನಾನು ಸರ್ಪ, ವಿಷಕನ್ಯೆ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಈ ವಿಷಯಗಳೆಲ್ಲ ಇವತ್ತಿನ ರಾಜಕಾರಣದಲ್ಲಿ ಅವಶ್ಯಕತೆ ಇರಲಿಲ್ಲ. ರಾಜ್ಯದಲ್ಲಿ ಹಲವಾರು ಕಡೆ ಅಕಾಲಿಕ ಮಳೆ ಆಗಿದೆ. ರೈತರ ಬೆಳೆ ನಾಶವಾಗಿದೆ. ಆ ಬಗ್ಗೆ ಚರ್ಚೆ ಆಗಬೇಕು. ನೀರಾವರಿ ಸೌಲಭ್ಯ ಏನಾಗಿದೆ ನಮ್ಮ ರಾಜ್ಯದಲ್ಲಿ ಎಂಬುದರ ಬಗ್ಗೆ ಚರ್ಚೆ ಮಾಡಬೇಕು. ನಮ್ಮ ರಾಜ್ಯದ ನೀರನ್ನು ನಾವು ಬಳಕೆ ಮಾಡಿಕೊಳ್ಳುವಲ್ಲಿ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಯಾವ ರೀತಿ ಗೌರವಿಸಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಆ ಬಗ್ಗೆ ಚರ್ಚೆ ಮಾಡದೆ ಯಾವುದೋ ವಿಷ ಕನ್ಯೆ, ವಿಷ ಸರ್ಪದ ಬಗ್ಗೆ ಚರ್ಚೆ ಮಾಡಿದರೆ ಏನು? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ನರೇಂದ್ರ ಮೋದಿ ಭಾಷಣ ಎಂದರೆ ಅದು ಸಂತೆ
ರಾಷ್ಟ್ರೀಯ ಪಕ್ಷದವರು ಜನರ ಬದುಕನ್ನು ಸರಿಪಡಿಸಿಕೊಡುತ್ತಾರಾ? ಆಮೇಲೆ ಎಂಥದೋ ಪರಿವಾರ, ಪರಿವಾರ ಅಂತಾರೆ. ಇನ್ನು ಯಾವ ಎಟಿಎಂ? ಯಾವ ಡಬಲ್ ಎಂಜಿನ್? ಬಿಜೆಪಿಯವರು ಲೂಟಿ ಹೊಡೆದುಕೊಂಡು ಕೂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಬಂದು ಚರ್ಚೆ ಮಾಡುತ್ತಾರಷ್ಟೇ. ನರೇಂದ್ರ ಮೋದಿ ಭಾಷಣ ಎಂದರೆ ಅದು ಸಂತೆ ಭಾಷಣವಾಗಿದೆ. ಅವರಿಗೆ ಇಂಪ್ಲಿಮೆಂಟ್ ಮಾಡೋದು ಗೊತ್ತಿಲ್ಲ. ಬರಿ ಬುರುಡೆ ಭಾಷಣ ಮಾಡಿ ಹೋಗ್ತಾರೆ. ಡಬಲ್ ಇಂಜಿನ್ ಸರ್ಕಾರವೇ ಲೂಟಿ ಹೊಡೆಯೋದು ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಬಿಜೆಪಿಯವರಿಗೆ, ನರೇಂದ್ರ ಮೋದಿಯವರಿಗೆ ಅಭಿವೃದ್ಧಿ ಅಂದರೆ ಯಾರು ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಾರಲ್ಲಾ ಅವರೇ ಆಗಿದ್ದಾರೆ. ಅದು ಡಬಲ್ ಎಂಜಿನ್ ಇದ್ದರೆ ಮಾತ್ರ ಸಾಧ್ಯ ಎಂಬುದು ಅವರ ಮಾತಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನಾನು ಚುನಾವಣೆ ಮಾಡೋದು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಷ್ಟೇ
ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಮಣಿಸುವ ವಿಚಾರವಾಗಿ ಜೆಡಿಎಸ್ ಕಾರ್ಯತಂತ್ರ ರೂಪಿಸುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ನಾನು ಚುನಾವಣೆ ಮಾಡೋದು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಷ್ಟೇ. ಇನ್ನೊಬ್ಬರನ್ನು ಸೋಲಿಸಬೇಕು ಎಂದು ಅಲ್ಲ ಎಂದು ಹೇಳಿದರು.
ಈಗ ಮೋದಿ ಟಾಟಾ ಮಾಡಿ ಹೋದರೆ ಮತ್ತೆ ಬರೋದು ಲೋಕಸಭೆ ಚುನಾವಣೆಗೆ
ಬಿಜೆಪಿ ರಾಷ್ಟ್ರ ನಾಯಕರು ರಾಜ್ಯದಲ್ಲಿ ಟಿಕಾಣಿ ಹೂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯ ಕೇಂದ್ರ ನಾಯಕರು ಒಂಭತ್ತನೇ ತಾರೀಖಿನವರೆಗೂ ಇರುತ್ತಾರೆ. ಆಮೇಲೆ ಕರ್ನಾಟಕ ಏನಾಗಿದೆ ಅಂತ ಕೇಳೋದಕ್ಕೆ ಬರ್ತಾರಾ? ನರೇಂದ್ರ ಮೋದಿ ಕರ್ನಾಟಕಕ್ಕೆ ಟಾಟಾ ಮಾಡಿ ಹೋದರೆ, ಮತ್ತೆ ಬರೋದು ಲೋಕಸಭೆ ಚುನಾವಣೆಗೆ ಮಾತ್ರ ಎಂದು ಕುಟುಕಿದರು.
ಇದನ್ನೂ ಓದಿ: Kichcha Sudeepa: ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ಕಿಚ್ಚ ಸುದೀಪ್
ಎಚ್.ಡಿ. ಕುಮಾರಸ್ವಾಮಿ ರೋಡ್ ಶೋ
ಬಾದಾಮಿ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಪರ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಚಾರಕ್ಕಾಗಿ ಆಗಮಿಸಿದ್ದು, ರೋಡ್ ಶೋ ನಡೆಸಿದರು. ಅಂಬೇಡ್ಕರ್ ವೃತ್ತದಿಂದ ಎಚ್.ಡಿ. ಕುಮಾರಸ್ವಾಮಿ ಅವರು ರೋಡ್ ಶೋ ನಡೆಸಿದರು.