ಉಡುಪಿ: ಇಲ್ಲಿನ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹಿಂದುರಾಷ್ಟ್ರ ಎಂಬ ಶೀರ್ಷಿಕೆಯೊಂದಿಗೆ ವಿ.ಡಿ. ಸಾವರ್ಕರ್ ಮತ್ತು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಚಿತ್ರಗಳನ್ನು ಒಳಗೊಂಡಿರುವ ಬ್ಯಾನರ್ ಹಾಕಿರುವುದನ್ನು ಕಾಂಗ್ರೆಸ್ ಮತ್ತು ಎಸ್‌ಡಿಪಿಐಗಳು ಆಕ್ಷೇಪಿಸಿದ್ದಕ್ಕೆ ಬಿಜೆಪಿ ತೀವ್ರವಾಗಿ ಆಕ್ರೋಶಗೊಂಡಿದೆ.
ಬ್ಯಾನರ್‌ಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ನಾಯಕರ ವಿರುದ್ಧ ವಾಕ್‌ಪ್ರಹಾರ ನಡೆಸಿದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಬುಧವಾರ ದೊಡ್ಡ ಮೆರವಣಿಗೆಯೊಂದಿಗೆ ಸಾಗಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಬ್ರಹ್ಮಗಿರಿ ಸರ್ಕಲ್‌ನಲ್ಲಿ ಹಾಕಿದ ಸಾವರ್ಕರ್ ಬ್ಯಾನರ್‌ಗೆ ಬಿಜೆಪಿ ನಾಯಕ ಯಶಪಾಲ್ ಸುವರ್ಣ ಅವರ ನೇತೃತ್ವದಲ್ಲಿ ಹೂವಿನ ಹಾರ ಹಾಕಿ, ಪುಷ್ಪಾರ್ಚನೆ ನಡೆಸಿದ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಬಳಿಕ ಕಾಂಗ್ರೆಸ್ ಕಚೇರಿಯತ್ತ ದೌಡಾಯಿಸಿದರು.
ನಾಯರ್ ಕೆರೆ ಸಮೀಪ ಇರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಕಾರ್ಯಕರ್ತರು ಮೆರವಣಿಗೆ ಮೂಲಕ ವಸ್ತುಶಃ ಓಡಿಕೊಂಡೇ ಹೋಗಿದ್ದರು. ಈ ವೇಳೆ ಪೊಲೀಸರು ತಕ್ಷಣವೇ ಧಾವಿಸಿ ಕಾರ್ಯಕರ್ತರು ಒಳಗೆ ನುಗ್ಗುವುದನ್ನು ತಡೆದರು.
ಜಿಲ್ಲೆಯ ಪ್ರತಿ ಊರಿನಲ್ಲಿ ಸಾವರ್ಕರ್ ಭಾವಚಿತ್ರ
ಪೊಲೀಸರು ತಡೆಯುತ್ತಿದ್ದಂತೆಯೇ ಸ್ಥಳದಲ್ಲಿ ಮಾತನಾಡಿದ ಬಿಜೆಪಿ ಮತ್ತು ಹಿಂದು ಸಂಘಟನೆಗಳ ಮುಖಂಡರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮುಗಿಬಿದ್ದರು. ಶಿವಮೊಗ್ಗ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಿದ್ದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವುದಕ್ಕೆ ಮುಸ್ಲಿಂ ಏರಿಯಾ ಎಂಬುದಲ್ಲಿ. ಇದು ಹಿಂದು ರಾಷ್ಟ್ರ. ಎಲ್ಲಿ ಬೇಕಾದರೂ ಫ್ಲೆಕ್ಸ್ ಹಾಕುತ್ತೇವೆ ಎಂದರು.
ಈ ನಡುವೆ, ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿಕೊಳ್ಳುವುದಕ್ಕಾಗಿ ಉಡುಪಿ ಜಿಲ್ಲೆಯ ಪ್ರತಿ ಊರಿನಲ್ಲೂ ಸಾವರ್ಕರ್ ಭಾವಚಿತ್ರ ಹಾಕಲಾಗುವುದು ಎಂದು ಹೇಳಿದರು.
ಇದನ್ನೂ ಓದಿ| ಉಡುಪಿ ಸರ್ಕಲ್‌ನಲ್ಲಿ ಸಾವರ್ಕರ್ ಬ್ಯಾನರ್ ಮಾತ್ರ ಅಲ್ಲ, ಪುತ್ಥಳಿನೇ ಸ್ಥಾಪನೆ ಮಾಡ್ತೇನೆ: ಹಿಂದು ಮುಖಂಡರ ಸವಾಲು