ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಖಜಾಂಚಿ ಅನಿಲ್ ಶೆಟ್ಟಿ (Anil Shetty) ಅವರ ಕೋರಮಂಗಲ 4ನೇ ಬ್ಲಾಕ್‌ನ ನಿವಾಸ ಹಾಗೂ ಕಚೇರಿ ಮೇಲೆ ಸೋಮವಾರ ರಾತ್ರಿ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸರ್ಚ್ ವಾರಂಟ್ ತೋರಿಸದ ಹೊರತು ಅಧಿಕಾರಿಗಳನ್ನು ಒಳಗೆ ಬಿಡುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು.
ಕೋರಮಂಗಲದ ಅನಿಲ್ ಶೆಟ್ಟಿ ನಿವಾಸ ಮತ್ತು ಕಚೇರಿಗೆ ಅಧಿಕಾರಿಗಳ ಆಗಮಿಸಿದ ವಿಷಯ ತಿಳಿದು, ಬಿಜೆಪಿ ನಾಯಕರಾದ ಶ್ರೀಧರ ರೆಡ್ಡಿ, ಬೆಂಗಳೂರು ದಕ್ಷಿಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಬಿಟಿಎಂ ಲೇಔಟ್ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಂದ್ರ ರೆಡ್ಡಿ ಸೇರಿ ನೂರಾರು ಮಂದಿ ಜಮಾಯಿಸಿದ್ದಾರೆ. ಈ ವೇಳೆ ಮನೆಯ ಬೀಗ ತೆಗೆದು ಪರಿಶೀಲನೆ ಮಾಡಲು ಸಹಕಾರ ನೀಡಬೇಕು ಎಂದು ವಾಣಿಜ್ಯ ಇಲಾಖೆ ಅಧಿಕಾರಿಗಳು ಕೇಳಿದ್ದಕ್ಕೆ ಕಾರ್ಯಕರ್ತರು ಹಾಗೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ಸರ್ಚ್ ವಾರಂಟ್ ತೋರಿಸುವಂತೆ ಪಟ್ಟು ಹಿಡಿದರು.
ನಿವಾಸದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ ಬಗ್ಗೆ ಬಿಜೆಪಿ ಯುವ ಮೋರ್ಚಾ ಖಜಾಂಚಿ ಅನಿಲ್ ಶೆಟ್ಟಿ ಪ್ರತಿಕ್ರಿಯಿಸಿ, ನಾನು ದೆಹಲಿಗೆ ಹೋದ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಾಸಕ ರಾಮಲಿಂಗಾರೆಡ್ಡಿ ಅವರು ಕ್ಷೇತ್ರದಲ್ಲಿ ಕಳಪೆ ಕುಕ್ಕರ್ ನೀಡಿದ್ದಾರೆ. ಅವರ ಮನೆ ಮೇಲೆ ದಾಳಿ ಮಾಡದೆ, ನಾನಿಲ್ಲದಿರುವಾಗ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂದು ಆರೋಪಿಸಿದರು.
ಇದನ್ನೂ ಓದಿ | Car Accident: ಅಪಘಾತವಾದ ಕಾರಿನಲ್ಲಿ ಸಿ.ಟಿ ರವಿ ಚಿತ್ರವಿರುವ ಕ್ಯಾಲೆಂಡರ್, ಮದ್ಯ, ಲಾಂಗ್ ಪತ್ತೆ!
ಕ್ಷೇತ್ರದಲ್ಲಿ ರಾಮಲಿಂಗಾರೆಡ್ಡಿ ನೀಡಿರುವ ಕಳಪೆ ಕುಕ್ಕರ್‌ಗಳನ್ನು ಜನರು ನನಗೆ ನೀಡಿದ್ದಾರೆ. ಹೀಗಾಗಿ ಅವರ ಮೇಲೆ ಎಫ್‌ಐಆರ್ ಆಗುತ್ತದೆ ಎಂದು ನನ್ನ ಮನೆ ಮೇಲೆ ರೈಡ್ ಮಾಡಿಸಿದ್ದಾರೆ. ನಾವೆಲ್ಲರೂ ಕಾರ್ಯಕರ್ತರು ಒಗ್ಗಟ್ಟಾಗಿ ಹೋರಾಡುತ್ತೇವೆ, ಅವರ ಅಧಿಕಾರ ಇಂದಿಗೆ ಕೊನೆಯಾಗಬೇಕು ಎಂದು ಶಾಸಕ ರಾಮಲಿಂಗಾರೆಡ್ಡಿ ವಿರುದ್ಧ ಕಿಡಿಕಾರಿದರು.
ಅಧಿಕಾರಿಗಳು ಬಂದು ನಮ್ಮವರನ್ನು ತಳ್ಳಿ ಸರ್ಚ್ ಮಾಡಲು ಮುಂದಾಗಿದ್ದಾರೆ. ನಮ್ಮವರಿಗೆ ಧಮ್ಕಿ ಹಾಕಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಮನೆಯಲ್ಲಿ ಏನೂ ಸಿಗುವುದಿಲ್ಲ. ಸರ್ಚ್ ವಾರೆಂಟ್ ತೋರಿಸದ ಹೊರತು ನನ್ನ ಮನೆಯನ್ನು ಪರಿಶೀಲನೆ ಮಾಡಲು ನಾನು ಅನುಮತಿ ನೀಡಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ 27. 34 ಲಕ್ಷ ವಶಕ್ಕೆ
ಬೆಳಗಾವಿ: ಮಹಾರಾಷ್ಟ್ರದ ಸರ್ಕಾರಿ ಬಸ್‌ನಲ್ಲಿ ಸಾಗಿಸುತ್ತಿದ್ದ 27. 34 ಲಕ್ಷ ರೂ.ಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ಜಪ್ತಿ ಮಾಡಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಚಾಚಿ ಚೆಕ್‌ಪೋಸ್ಟ್‌ನಲ್ಲಿ ಹಣ ಜಪ್ತಿ ಮಾಡಲಾಗಿದೆ.
ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪಾಂಡುರಂಗ ಎಂಬುವವರು ಬ್ಯಾಗ್‌ನಲ್ಲಿ 27.34 ಲಕ್ಷ ರೂ.ಗಳನ್ನು ಇಟ್ಟುಕೊಂಡು ಹೋಗುತ್ತಿದ್ದರು. ತಪಾಸಣೆ ವೇಳೆ ಬ್ಯಾಗ್‌ನಲ್ಲಿ ಹಣ ಪತ್ತೆಯಾಗಿದ್ದು, ಅವರನ್ನು ವಶಕ್ಕೆ ಪಡೆದು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಖಲೆಯಿಲ್ಲದ 12 ಸಾವಿರ ಸೀರೆ ಜಪ್ತಿ
ಧಾರವಾಡ: ದಾಖಲೆಯಿಲ್ಲದೇ ಸಾಗಾಟ ಮಾಡುತ್ತಿದ್ದ 25 ಲಕ್ಷ ರೂ. ಮೌಲ್ಯದ 12 ಸಾವಿರ ಸೀರೆಗಳನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಗ್ರಾಮದ ಬಳಿ ಇತ್ತೀಚೆಗೆ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ಸ್ಥಳದಲ್ಲೇ ಇಬ್ಬರು ಬೈಕ್ ಸವಾರು ಸಾವನ್ನಪ್ಪಿದ್ದರು. ಈ ವೇಳೆ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದಾಗ ಸಾವಿರಾರು ಸೀರೆಗಳು ಪತ್ತೆಯಾಗಿವೆ. ಸೀರೆಗಳು ರಾಮದುರ್ಗದಿಂದ ಬೆಂಗಳೂರಿಗೆ ರವಾನೆಯಗುತ್ತಿದ್ದವು ಎನ್ನಲಾಗಿದ್ದು, 20 ಮಹಿಳೆಯರ ಹೆಸರಲ್ಲಿ ಬಿಲ್ ಕಂಡುಬಂದಿದೆ. ಎಲ್ಲ ಬಿಲ್‌ಗಳು ನಕಲಿ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಸೀರೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.