ಕೊಪ್ಪಳ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನ (Modi Birthday) ಹಾಗೂ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಹಾಗೂ ಮಹಾತ್ಮಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿಯಿಂದ ಸೇವಾ ಸಂಕಲ್ಪ ಕಾರ್ಯಕ್ರಮಗಳು ನಡೆಯಲಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಸೇವಾ ಚಟುವಟಿಕೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸೆ. 17ರಿಂದ ಅಕ್ಟೋಬರ್ 02 ವರೆಗೆ ಸೇವಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಮೋದಿ ಜನ್ಮದಿನವನ್ನು ಸಾಂಕೇತಿಕವಾಗಿ ಆಚರಿಸದೆ, ಜನರ ಬಳಿಗೆ ಹೋಗಿ ಸೇವೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.
ಸೇವಾ ಪಾಕ್ಷಿಕದಲ್ಲಿ ಸೆ. 17 ರಂದು ರಕ್ತದಾನ ಶಿಬಿರ ನಡೆಯಲಿದೆ. ಬಳಿಕ ಒಂದೊಂದು ದಿನ ಒಂದೊಂದು ಸೇವಾ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಆರೋಗ್ಯ ಮೇಳ, ಜೀವರಕ್ಷಕ ಲಸಿಕಾ ಅಭಿಯಾನ, ಆರೋಗ್ಯ ತಪಾಸಣಾ ಶಿಬಿರಗಳು, ಅರಳಿ ಸಸಿ ನೆಡುವುದು, ಫಲಾನುಭವಿಗಳನ್ನು ಸೇರಿಸಿ ಕಾರ್ಯಕ್ರಮ, ಅಂಗನವಾಡಿ ಸೇವಾ ದಿವಸ್, ಎಲ್ಲ ಪರಿಶಿಷ್ಟ ಪಂಗಡದ ಇಲಾಖೆಯಿಂದ ಶಾಲೆಯ ಎಲ್ಲ ಮಕ್ಕಳಿಗೆ ಬ್ಯಾಗ್ ವಿತರಣೆ, ಕ್ಷಯರೋಗ ನಿರ್ಮೂಲನಾ ಅಭಿಯಾನ ಹೀಗೆ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ | PSI scam | ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ವಿರುದ್ಧ ಕ್ರಮದ ಸುಳಿವು ನೀಡಿದ ಸಿಎಂ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಸಂಗಣ್ಣ ಕರಡಿ, ನರೇಂದ್ರ ಮೋದಿ ಅಧಿಕಾರಾವಧಿಯ 8 ವರ್ಷದ ಸಾಧನೆಗಳು ಕುರಿತ ಮಾಹಿತಿ ನೀಡಿದ ಸಂಸದ ಸಂಗಣ್ಣ ಕರಡಿ, ಪ್ರಧಾನಿ ಮೋದಿ ಆರ್ಟಿಕಲ್ 370 ರದ್ದುಪಡಿಸುವುದು ಸೇರಿದಂತೆ ಅನೇಕ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದು ದೇಶದ ಜನರು ಹೆಮ್ಮೆಪಡುವ ವಿಷಯ. ಪೌರತ್ವ ತಿದ್ದುಪಡಿ ಕಾಯ್ದೆ, ಕಾನೂನು ಅಡೆತಡೆ ನಿವಾರಿಸಿ ರಾಮಮಂದಿರ ನಿರ್ಮಾಣ, ಕರ್ತಾರಪುರ ಕಾರಿಡಾರ್ ನಿರ್ಮಾಣ, ತ್ರಿವಳಿ ತಲಾಖ್ ಕಾಯ್ದೆ ಹೀಗೆ ಅನೇಕ ದಿಟ್ಟ ನಿರ್ಧಾರ ಕೈಗೊಂಡು ದೇಶವನ್ನು ಬಲಿಷ್ಠವಾಗಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದಾರೆ ಎಂದರು.
ಇನ್ನು ಖಾಸಗಿಯವರ ಅಸಹಕಾರದಿಂದ ಕೊಪ್ಪಳ ಜಿಲ್ಲೆಯಲ್ಲಿ ಉಡಾನ್ ಆರಂಭವಾಗಲಿಲ್ಲ. ಹೀಗಾಗಿ ಕೊಪ್ಪಳ ಜಿಲ್ಲೆಯಲ್ಲಿಯೇ ಏರ್ಪೋರ್ಟ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಕೊಪ್ಪಳ ಏತ ನೀರಾವರಿ ಯೋಜನೆ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಸಿಂಗಟಾಲೂರು ಏತ ನೀರಾವರಿ ಯೋಜನೆಯೂ ಸಹ ಮಧ್ಯಪ್ರದೇಶದ ಮಾದರಿಯಲ್ಲಿ ಕಾರ್ಯಾರಂಭವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ವಿವರಿಸಿದರು. ಬಿಜೆಪಿ ಜಿಲ್ಲಾ ಉಸ್ತುವಾರಿ ಸಿದ್ದೇಶ ಯಾದವ್ ಭಾಗಿಯಾಗಿದ್ದರು.
ಇದನ್ನೂ ಓದಿ | CM Bommai | ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ 10 ಲಕ್ಷ ರೂ. ಸ್ಕೀಮ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ