ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಆಧಿಪತ್ಯವನ್ನು ಪ್ರಶ್ನಿಸಿದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಈಗ ಬಿಜೆಪಿ ಕಣ್ಣಲ್ಲೂ ಹೀರೊ ಎನಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ ನಡುವೆ ಅಧಿಕಾರದ ಕಾಳಗ ನಡೆಯಲಿದೆ ಎಂದು ಕಾಯುತ್ತಿದ್ದ ಬಿಜೆಪಿಗೆ ಬಳಿಕ ಭ್ರಮನಿರಸನವಾಗಿತ್ತು. ಈ ಹೊತ್ತಿನಲ್ಲಿ ಬಿ.ಕೆ. ಹರಿಪ್ರಸಾದ್ ಬಹಿರಂಗವಾಗಿ ಧ್ವನಿ ಎತ್ತಿರುವುದು ಬಿಜೆಪಿ ಪಾಳಯದಲ್ಲೂ ಸಂಭ್ರಮಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಅಧಿಕಾರದ ಮೇಲಾಟ ನಡೆಯಲಿದ್ದು, ಬಿ.ಕೆ. ಹರಿಪ್ರಸಾದ್ ಅವರು ಸಾರಥಿಯಾಗಲಿದ್ದಾರೆ. ರಾಜಸ್ಥಾನ ಕಾಂಗ್ರೆಸ್‌ನಂತೆ ಇಲ್ಲೂ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿ ರಾಜ್ಯ ಬಿಜೆಪಿ ಇದ್ದಂತೆ ಕಾಣುತ್ತಿದೆ.
ಸಂಪುಟ ಸಚಿವ (Karnataka Cabinet) ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಭಾರೀ ಅಸಮಾಧಾನಗೊಂಡಿರುವ ಹರಿಪ್ರಸಾದ್, ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮುದಾಯದ ಸಭೆಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದ ಅವರು ಸಿದ್ದರಾಮಯ್ಯ ವಿರುದ್ಧ ಸಮುದಾಯದ ಅಸ್ತ್ರ ಪ್ರಯೋಗ ಮಾಡಿದ್ದರು. ಅವರಿಗೆ ಈಡಿಗ ಸಮುದಾಯದ ಗುರುಗಳಾದ ಪ್ರಣವಾನಂದ ಸ್ವಾಮೀಜಿ ಬೆಂಬಲ ನೀಡಿದ್ದರು.
ʼʼಕರ್ನಾಟಕದಲ್ಲಿ ರಾಜಕೀಯವಾಗಿ ಈಡಿಗ, ಬಿಲ್ಲವ, ದೀವರ ಸಮುದಾಯದವರು ಮುಂದೆ ಬರುತ್ತಿಲ್ಲ. ಏನೇ ಪ್ರಯತ್ನ ಮಾಡಿದರೂ ಆಗುತ್ತಿಲ್ಲ. ಅವಕಾಶ ವಂಚಿರಾಗುತ್ತಿರುವುದು ನೋಡಿದರೆ ಯಾರದ್ದೋ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಅನಿಸುತ್ತದೆ. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಎಲ್ಲರು ಒಟ್ಟಿಗೆ ಸೇರಬೇಕು ಎಂದು ನಾವು 2013ರಲ್ಲಿ ಬೆಂಬಲ ಕೊಟ್ಟಿದ್ದೆವು. ಬೆಂಬಲ ಕೊಟ್ಟ ಬಳಿಕ ನಾವು ಕಾಂಗ್ರೆಸ್ ಆಗಲಿ, ಸಿಎಂ, ಮಂತ್ರಿಗಳಾಗಲಿ ಯಾರ ಬಳಿಯೂ ಕೈ ಚಾಚುವುದಿಲ್ಲ. ಹಿಂದುಳಿದ ವರ್ಗಕ್ಕೆ ಯಾವ ರೀತಿ ಅನುಕೂಲ ಮಾಡಬೇಕು ಎಂದು ಯೋಚನೆ ಮಾಡುತ್ತೇವೆ. ಸ್ವಾರ್ಥಕ್ಕೆ ಯಾವುದನ್ನೂ ಕೇಳುವುದಿಲ್ಲʼʼ ಎಂದು ಹರಿಪ್ರಸಾದ್ ಹೇಳಿದ್ದರು.
ಬಿಜೆಪಿಯಿಂದ ಹರಿಪ್ರಸಾದ್ ಸಮರ್ಥನೆ
ಬಿ.ಕೆ. ಹರಿಪ್ರಸಾದ್ ಅವರ ಬಂಡಾಯದ ಮೂಲಕ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆಗಬಹುದಾದ ಬದಲಾವಣೆಗಳ ಸ್ಪಷ್ಟ ಸೂಚನೆ ಸಿಕ್ಕಿದೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಸತ್ ಚುನಾವಣೆ ಆಗುವವರೆಗೆ ಮಾತ್ರ ಸಿದ್ದರಾಮಯ್ಯರವರು ಸಿಎಂ ಆಗಿರಲಿದ್ದಾರೆ ಎಂದಿತ್ತು. ಅದನ್ನು ತಪ್ಪಿಸಲು 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ತಿಳಿಸಲು ಅವರು ಇತರರನ್ನು ಛೂ ಬಿಡುತ್ತಿದ್ದರು. ಈಗ ಹರಿಪ್ರಸಾದ್ ಅವರು ಅವರ ಬಣ್ಣ ಬಯಲು ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್‍ನ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಯ ಮೂಲಕ ಕಾಂಗ್ರೆಸ್ ಕಡೆಯಿಂದ ನಮಗೊಂದು ಸಂದೇಶ ಲಭಿಸಿದೆ. ಅವರ ಹೇಳಿಕೆಯಿಂದ ವಿಷಯ ನಮಗೂ ಅರ್ಥ ಆಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರ ಜೊತೆ ನಿಮ್ಮ ಸಂಪರ್ಕ ಆಗಿದೆಯೇ ಎಂಬ ಪ್ರಶ್ನೆಗೆ, ‘ಅವರೇ ಕೀ ಪರ್ಸನ್ ಅಲ್ಲವೇ? ಶೀಘ್ರವೇ ಅವರನ್ನು ಸಂಪರ್ಕಿಸುತ್ತೇನೆ’ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‍ನವರು ದಲಿತರಿಗೆ ತೊಂದರೆ ಕೊಡುತ್ತ ಬಂದಿದ್ದರೂ ದಲಿತಪರ ಎನ್ನುತ್ತ ಬಂದಿದ್ದಾರೆ. ಇವರು ಸಂಪೂರ್ಣವಾಗಿ ದಲಿತವಿರೋಧಿಗಳು ಎಂದು ಟೀಕಿಸಿದರು.
ʻʻಈಗಲೂ ಕಾಲ ಮಿಂಚಿಲ್ಲ. ಸಿದ್ದರಾಮಯ್ಯನವರು ನಾಳೆ ರಾಜೀನಾಮೆ ಕೊಟ್ಟು ಪರಮೇಶ್ವರ್ ಅಥವಾ ಕೆ.ಎಚ್.ಮುನಿಯಪ್ಪನವರಿಗೆ ಸಿಎಂ ಸ್ಥಾನ ಕೊಡಬೇಕು. ಈ ಮೂಲಕ ಉತ್ತಮ ಹೆಸರು ಪಡೆಯಲಿ. ಇಲ್ಲವಾದರೆ, ಅವರಂಥ ಕಪಟ ರಾಜಕಾರಣಿ ಬೇರೊಬ್ಬರಿಲ್ಲ. ಸಿದ್ದರಾಮಯ್ಯರು ವಂಚನೆ, ಮೋಸಕ್ಕೆ ಇನ್ನೊಂದು ಹೆಸರು ಎಂದು ಜನ ಸಾರಿ ಸಾರಿ ಹೇಳುತ್ತಾರೆʼʼ ಎಂದು ನುಡಿದರು.
ಹರಿಪ್ರಸಾದ್ ಸಾಮಾನ್ಯ ವ್ಯಕ್ತಿಯಲ್ಲ ಎಂದ ರವಿಕುಮಾರ್
ಕಾಂಗ್ರೆಸ್‌ನವರು ಬಿ.ಕೆ. ಹರಿಪ್ರಸಾದ್ ಅವರನ್ನು ಸಾಮಾನ್ಯ ವ್ಯಕ್ತಿಯಂತೆ ಕಾಣುತ್ತಿದ್ದಾರೆ. ಆದರೆ, ಅವರು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಆಗಿ ಕೆಲಸ ಮಾಡಿದವರು. ಪರಿಷತ್‌ನಲ್ಲಿ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ನಮಗೆ ಸಿಎಂ ಆಗೋಕೆ ಅವಕಾಶ ಇಲ್ವೆ ಅಂತ ಕಾಂಗ್ರೆಸ್‌ನ ಅನೇಕ ನಾಯಕರು ಕೇಳುತ್ತಿದ್ದಾರೆ. ಹಿಂದುಳಿದ ನಾಯಕ ಅಂದ್ರೆ ಸಿದ್ದರಾಮಯ್ಯ ಒಬ್ಬರೇನಾ.? ನಾನೂ ಕೇಳ್ತೇನೆ. ಸಿದ್ದರಾಮಯ್ಯ ಅವರಿಂದ ಪಾರ್ಟಿಗೆ ಏನು ಕೊಡುಗೆ ಸಿಕ್ಕಿದೆ ಎಂದು ಪ್ರಶ್ನಿಸಿರುವ ರವಿ ಕುಮಾರ್, ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಬಂದ ಮೇಲೆ ಅನೇಕರಿಗೆ ಸಚಿವ ಸ್ಥಾನ ಮಿಸ್ ಆಯ್ತು ಎಂದರು.
ಸಿಂಗಪುರಕ್ಕೆ ಹೋಗಿರುವ ಎಚ್.ಡಿ ಕುಮಾರಸ್ವಾಮಿ ಅವರು ಅಲ್ಲಿಂದಲೇ ಸರ್ಕಾರ ಉರುಳಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಡಿ.ಕೆ. ಹೇಳಿಕೆಗೆ ಪ್ರತಿಕ್ರಿಯಿಸಿರುವ ರವಿಕುಮಾರ್, ʻʻಕುಮಾರಸ್ವಾಮಿ ಅಲ್ಲಿ ಹೋಗಿ ಸರ್ಕಾರ ಬೀಳಿಸ್ತಾರೆ ಅಂದ್ರೆ ನಾನು ನಂಬೋದಿಲ್ಲ. ಇದೆಲ್ಲ ಇವರದೇ ಸೃಷ್ಟಿ ಮೊದಲು ಸಿದ್ದರಾಮಯ್ಯ ಅವರು ಬಿ.ಕೆ. ಹರಿಪ್ರಸಾದ್‌ಗೆ ಮಂತ್ರಿ ಭಾಗ್ಯ ಕೊಡುತ್ತಾರಾ ಎನ್ನುವುದನ್ನು ಸ್ಪಷ್ಟಪಡಿಸಲಿ. ಮೊದಲು ಬಿ.ಕೆ ಹರಿಪ್ರಸಾದ್ ಗೆ ಆದಂತಹ ಸಮಸ್ಯೆ ಬಗೆಹರಿಸಲಿʼʼ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಗಾಳಿಯಲ್ಲಿ ಗುಂಡು
ಸಿಂಗಪುರದಿಂದ ಆಪರೇಷನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಬಿಜೆಪಿ ನಾಯಕ, ಮಾಜಿ ಎಂಎಲ್‌ಸಿ ಅಶ್ವತ್ಥ ನಾರಾಯಣ ಅವರು, ಇವತ್ತು ಡಿಕೆಶಿ ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ ಅಷ್ಟೆ. ಬಿ.ಕೆ. ಹರಿಪ್ರಸಾದ್ ಅವರು ಯಾವ ಸಿಂಗಪುರಕ್ಕೂ ಹೋಗಿರಲಿಲ್ಲ. ತಮ್ಮ ಅಸಮಾಧಾನವನ್ನು ನೇರವಾಗಿ ವ್ಯಕ್ತಪಡಿಸಿಲ್ವಾ ಎಂದು ಕೇಳಿದ್ದಾರೆ.
ʻʻಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರನ್ನು ಹೇಗೆ ಸೈಡ್‌ಲೈನ್ ಮಾಡಿದ್ದಾರೆ ಎಂದು ಹರಿಪ್ರಸಾದ್ ಹೇಳಿದ್ದಾರೆ. ಮೊದಲು ಡಿಕೆಶಿ ಅವರು ಇದರ ಬಗ್ಗೆ ಸ್ಪಷ್ಟನೆ ನೀಡಲಿʼʼ ಎಂದರು.
ಇದನ್ನೂ ಓದಿ : BK Hariprasad : ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಬಿ.ಕೆ. ಹರಿಪ್ರಸಾದ್ ಗುಡುಗು
ರಾಷ್ಟ್ರ ಮಟ್ಟದಲ್ಲೂ ಬಿಜೆಪಿ ಕೈಗೆ ಅಸ್ತ್ರ
ಬಿ.ಕೆ. ಹರಿಪ್ರಸಾದ್ ಎಂಬ ಅಸ್ತ್ರವನ್ನು ಬಿಜೆಪಿ ರಾಷ್ಟ್ರ ಮಟ್ಟದ ನಾಯಕರೂ ಹಿಡಿದುಕೊಂಡಿದ್ದಾರೆ. ಹರಿಪ್ರಸಾದ್ ಹೇಳಿಕೆ ಕುರಿತು ಎರಡು ಟ್ವೀಟ್ ಮಾಡಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು, ʻʻಸಚಿವ ಸ್ಥಾನ ಸಿಗದ ಕಾರಣಕ್ಕೆ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೊಟ್- ಸಚಿನ್ ಪೈಲಟ್ ಗದ್ದಲದಿಂದ ಐದು ಅಮೂಲ್ಯ ವರ್ಷಗಳು ಹಾಳಾದವು, ಛತ್ತೀಸ್‌ಗಢದಲ್ಲಿ ಭೂಪೇಶ್ ಸಿಂಹ್ ಬಾಘೆಲ್- ಟಿ.ಎಸ್.ಸಿಂಗ್ ನಡುವೆ ಹಗ್ಗಜಗ್ಗಾಟ ನಡೆಯಿತು. ಕರ್ನಾಟಕದಲ್ಲಿ ಐದು ಗ್ಯಾರಂಟಿಗಳೇ ಜಾರಿಯಾಗಿಲ್ಲ. ಈ ನಡುವೆ ನಾಯಕರ ನಡುವೆ ಕಚ್ಚಾಟ ನಡೆದಿದೆ. ಆಡಳಿತ ಹಾಗೂ ಅಭಿವೃದ್ಧಿ ಬೇಕೆಂದರೆ ಕಾಂಗ್ರೆಸ್‌ಗೆ ಎಂದೂ ವೋಟ್ ಮಾಡಬೇಡಿ. ಈ ಗುಂಪುಗಳ ನಡುವೆ ಸರ್ಕಾರ ಎಷ್ಟು ದಿನ ಇರಲಿದೆ ಗೊತ್ತಿಲ್ಲʼʼ ಎಂದಿದ್ದಾರೆ.