Site icon Vistara News

Karnataka politics : ಕೈ ಹೈಕಮಾಂಡ್‌ಗೆ ಸರ್ಕಾರದ ವರ್ಗಾವಣೆ ದಂಧೆ ರಿಪೋರ್ಟ್‌ ಕೊಟ್ಟ ಬಿ.ಕೆ. ಹರಿಪ್ರಸಾದ್!

Mallikarjuna Kharge CM Siddaramaiah and BK Hariprasad

ಬೆಂಗಳೂರು: ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ. ಕೇವಲ ಎರಡು ತಿಂಗಳು ಕಳೆಯುವಷ್ಟರಲ್ಲಿಯೇ ಆಂತರಿಕ ಭಿನ್ನಮತ ಸ್ಫೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು (Karnataka politics) ನಡೆದಿದ್ದವು. ಮನೆಯೊಂದು ಹತ್ತಾರು ಬಾಗಿಲುಗಳು ಎಂಬಂತೆ ಆಗಿದೆ. ಈ ಮಧ್ಯೆ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ (BK Hariprasad) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಬಗ್ಗೆ ಮಾತನಾಡಿದ್ದರು. ಇದಾದ ಬಳಿಕ ಸಚಿವರ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ವರ್ಗಾವಣೆ ದಂಧೆ ಬಗ್ಗೆ ಆಕ್ರೋಶವನ್ನು ಹೊರಹಾಕಿದ್ದರು. ಕೊನೆಗೆ ಸಿಎಂ ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದರು. ಆದರೆ, ಈ ವಿಷಯವನ್ನು ಬಿ.ಕೆ. ಹರಿಪ್ರಸಾದ್ ಅಷ್ಟಕ್ಕೇ ಬಿಟ್ಟಿಲ್ಲ. ಬುಧವಾರ (ಆಗಸ್ಟ್‌ 2)ರಂದು ನವ ದೆಹಲಿಯಲ್ಲಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಎರಡು ದಿನ ಮುಂಚೆಯೇ ಭೇಟಿ ನೀಡಿ ಹೈಕಮಾಂಡ್‌ಗೆ “ವರ್ಗಾವಣೆ ದಂಧೆ”ಯ (Transfer racket) ಸಂಪೂರ್ಣ ರಿಪೋರ್ಟ್‌ ಕೊಟ್ಟಿದ್ದಾರೆ.

ಹೌದು, ಬುಧವಾರ ಸಭೆ ಇರುವುದರಿಂದ ಸೋಮವಾರವೇ ನವ ದೆಹಲಿಗೆ ತೆರಳಿದ್ದ ಬಿ.ಕೆ. ಹರಿಪ್ರಸಾದ್ ಅವರು ದೆಹಲಿ ಪಾಲಿಟಿಕ್ಸ್ (Delhi Politics) ಶುರು ಮಾಡಿದ್ದಾರೆ. ಹಿರಿಯ ರಾಜಕಾರಣಿಯಾಗಿರುವ ಅವರಿಗೆ ದೆಹಲಿಯಲ್ಲಿ ತಮ್ಮದೇ ಆದ ಹಿಡಿತ ಹಾಗೂ ಹೈಕಮಾಂಡ್‌ ಜತೆ ಬಾಂಧವ್ಯ ಇದೆ. ಈ ನಿಟ್ಟಿನಲ್ಲಿ ಎರಡು ದಿನಗಳ ಮೊದಲೇ ದೆಹಲಿಗೆ ಬಂದಿರುವ ಅವರು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ವರದಿ ಒಪ್ಪಿಸಿದ್ದಾರೆ.

ಇದನ್ನೂ ಓದಿ: Karnataka Politics : ಬೊಮ್ಮಾಯಿಗಿಲ್ಲ ವಿಪಕ್ಷ ನಾಯಕ ಸ್ಥಾನ? ಒಂಟಿ ಮಾಡಿದ ಜಂಟಿ ಪ್ರೆಸ್‌ಮೀಟ್‌!

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್‌ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದ ಬಿ.ಕೆ. ಹರಿಪ್ರಸಾದ್‌, ರಾಜ್ಯ ರಾಜಕಾರಣದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಬಿಕೆ ಹರಿಪ್ರಸಾದ್‌ ಮುನಿಸಿಗೆ ಕಾರಣವೇನು?

ಬಿ.ಕೆ. ಹರಿಪ್ರಸಾದ್‌ ಅವರು ಹಿಂದುಳಿದ ವರ್ಗಗಳ ನಾಯಕರಾಗಿದ್ದಾರೆ. ಈ ಸರ್ಕಾರದಲ್ಲಿ ಸಚಿವಾಕಾಂಕ್ಷಿಯಾಗಿದ್ದ ಅವರಿಗೆ ನಿರಾಸೆ ಮೂಡಿತ್ತು. ಇದರಿಂದ ಒಳಗೊಳಗೇ ಅಸಮಾಧಾನಗೊಂಡಿದ್ದ ಅವರು ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಗೆ ಹಾಕಿದ್ದರು. ಸಿದ್ದರಾಮಯ್ಯ ಅವರು ಕೇವಲ ಅವರ ಸಮುದಾಯದವರ ಓಲೈಕೆಯನ್ನು ಮಾತ್ರವೇ ಮಾಡುತ್ತಿದ್ದಾರೆ. ಇತರ ಹಿಂದುಳಿದ ವರ್ಗಗಳಿಗೆ ಅವರು ಬೆಂಬಲವಾಗಿ ನಿಂತಿಲ್ಲ. ಈಡಿಗ, ಬಿಲ್ಲವ, ದೀವರ ಸಮುದಾಯದವರು ಮುಂದೆ ಬರಲು ಸಾಧ್ಯವಾಗುತ್ತಲೇ ಇಲ್ಲ. ನನಗೆ ಸಿಎಂ ಆಯ್ಕೆ ಮಾಡುವುದೂ ಗೊತ್ತು, ಸಿಎಂ ಅನ್ನು ಹುದ್ದೆಯಿಂದ ಇಳಿಸುವುದೂ ಗೊತ್ತು ಎಂದು ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಡಿ.ಕೆ. ಶಿವಕುಮಾರ್‌, ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಸಮಾಧಾನ ಮಾಡಿದ್ದರು. ಆದರೆ, ಆಗ ಪ್ರತಿಕ್ರಿಯೆ ನೀಡಿದ್ದ ಬಿ.ಕೆ. ಹರಿಪ್ರಸಾದ್‌, ನಾನು ದೆಹಲಿ ನಾಯಕರಿಗೆ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದರು. ಅದರ ಭಾಗವಾಗಿ ಈಗ ಎರಡು ದಿನ ಮೊದಲೇ ಅಲ್ಲಿಗೆ ಹೋಗಿ ವರದಿ ಒಪ್ಪಿಸಿದ್ದಾರೆ.

ಏನೆಲ್ಲ ಹೇಳಿದ್ದಾರೆ?

ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರುವ ಬಿ.ಕೆ. ಹರಿಪ್ರಸಾದ್‌, ರಾಜ್ಯ ಕಾಂಗ್ರೆಸ್‌ನಲ್ಲಿ ಮೂಲ ಹಾಗೂ ವಲಸಿಗ ಕಾಂಗ್ರೆಸ್ಸಿಗರ ನಡುವಿನ ತಿಕ್ಕಾಟ. ವಲಸಿಗರಿಂದ ಮೂಲ ಕಾಂಗ್ರೆಸ್ಸಿಗರ ಕಡೆಗಣನೆ, ಹಿರಿಯ ಶಾಸಕರನ್ನು ಸಚಿವರು ನಡೆಸಿಕೊಳ್ಳುತ್ತಿರುವ ರೀತಿ, ಸರ್ಕಾರದಲ್ಲಿ ಕೆಲವರ ನಡವಳಿಕೆ, ಸರ್ಕಾರದ ವರ್ಗಾವಣೆ ದಂಧೆ ಬಗ್ಗೆ ಸಂಪೂರ್ಣ ರಿಪೋರ್ಟ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಚುನಾವಣೆ ದೃಷ್ಟಿಯಿಂದ ಸಭೆ- ಡಿ.ಕೆ. ಶಿವಕುಮಾರ್

ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಂದು ದೆಹಲಿಗೆ ಹೋಗುತ್ತಿದ್ದೇನೆ. ಪಕ್ಷದ ಕೆಲಸ ಇದೆ, ಸರ್ಕಾರದ ಕೆಲಸ ಇದೆ. ಲೋಕಸಭೆ, ಪಕ್ಷದ ಹಿತದೃಷ್ಟಿಯಿಂದ ಹೋಗುತ್ತಿದ್ದೇವೆ. ಚುನಾವಣೆ ದೃಷ್ಟಿಯಿಂದಲೇ ಸಭೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Gruha Jyothi Scheme : 1.43 ಕೋಟಿ ಜನರಿಗೆ ಮಾತ್ರ ಈ ಬಾರಿ ಫ್ರೀ ವಿದ್ಯುತ್;‌ ಉಳಿದವರಿಗಿಲ್ಲ!

ಮೂರು ಹಂತದಲ್ಲಿ ಚರ್ಚೆ

ದೆಹಲಿ ಸಭೆಗೆ ಹಿರಿಯ ನಾಯಕರು, ಎಂಎಲ್‌ಎ, ಎಂಪಿಗಳನ್ನೂ ಕರೆದಿದ್ದೇವೆ. ಮೂರು ಹಂತದಲ್ಲಿ ಚರ್ಚೆಯಾಗಲಿದೆ. ಸಭೆಯಲ್ಲಿ ಎಲ್ಲವೂ ನಿರ್ಧಾರವಾಗಲಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Exit mobile version