Site icon Vistara News

BK Hariprasad : ಗೋಧ್ರಾ ಮಾದರಿ ಗಲಭೆ; ಹರಿಪ್ರಸಾದ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಸರ್ಕಾರ

BK Hariprasad G Parameshwara

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Rama Mandir) ಲೋಕಾರ್ಪಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಗೋಧ್ರಾ ಮಾದರಿ ಗಲಭೆ (Godhra type riots) ಸಂಭವಿಸಬಹುದು ಎಂಬ ಕಾಂಗ್ರೆಸ್‌ನ ಹಿರಿಯ ನಾಯಕ, ಮೇಲ್ಮನೆ ಸದಸ್ಯ ಬಿ.ಕೆ. ಹರಿಪ್ರಸಾದ್‌ (BK Hariprasad) ಅವರ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ (Congress keeps distance from BKH Statement). ಕಾಂಗ್ರೆಸ್‌ನ ಕೆಲವು ನಾಯಕರು ಈ ಬಗ್ಗೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರೂ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಅವರು ಮಾತ್ರ ರಾಜ್ಯ ಪೊಲೀಸ್‌ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಸರ್ಕಾರಕ್ಕೂ ಬಿ.ಕೆ ಹರಿಪ್ರಸಾದ್‌ ಹೇಳಿಕೆಗೂ ಸಂಬಂಧವಿಲ್ಲ ಎಂದು ನಿರೂಪಿಸಿದ್ದಾರೆ.

ಹರಿಪ್ರಸಾದ್ ಹೇಳಿಕೆ‌ ವಿಚಾರದಲ್ಲಿ ನಮಗೆ ಯಾವುದೇ ಮಾಹಿತಿ ಇಲ್ಲ. ಒಂದೊಮ್ಮೆ ಮಾಹಿತಿ ಬಂದರೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಗೃಹ ಇಲಾಖೆ ಸಮರ್ಥವಾಗಿದೆ ಎಂದು ಜಿ. ಪರಮೇಶ್ವರ್‌ ಹೇಳಿದ್ದಾರೆ.

ಬಿ.ಕೆ ಹರಿಪ್ರಸಾದ್‌ ಅವರು ಹಿರಿಯ ನಾಯಕರಿದ್ದಾರೆ. ಅವರಿಗೆ ಮಾಹಿತಿ ಇರಬಹುದು. ಹೇಳಿಕೆ ಕೊಟ್ಟವರಿಗೆಲ್ಲ ನೋಟೀಸ್ ಕೊಡಲು ಆಗುವುದಿಲ್ಲ. ನಮ್ಮ ಗುಪ್ತಚರ ಇಲಾಖೆ ಎಲ್ಲವನ್ನೂ ಗಮನಿಸುತ್ತಿರುತ್ತದೆ. ಆ ರೀತಿಯ ಬೆಳವಣಿಗೆ ಇದ್ರೆ ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಯಾವ ಕಾರಣಕ್ಕೂ ಅಹಿತಕರ ಘಟನೆಗೆ ಅವಕಾಶ ಕೊಡುವುದಿಲ್ಲ. ಸಂದರ್ಭ ಬಂದಾಗ ಹರಿಪ್ರಸಾದ್ ಅವರನ್ನೂ ಕೇಳೋಣ. ಇಲಾಖೆಯಾಗಿ ಯಾವುದೇ ಪರಿಸ್ಥಿತಿಯನ್ನು ಹೇಗೆ ನಿರ್ವಹಣೆ ಮಾಡಬೇಕು ಅನ್ನೋದು ಗೊತ್ತಿದೆ. ಹಾಗಂತ ಅವರಿಗೆ ನೋಟಿಸ್ ಕೊಡುವ ಅಗತ್ಯ ಇಲ್ಲ. ಈ ಹೇಳಿಕೆ ನೀಡಿದವರಿಗೆಲ್ಲ ನೋಟಿಸ್ ಕೊಡುತ್ತಾ ಹೋದರೆ ಎಷ್ಟು ಜನರಿಗೆ ಕೊಡುತ್ತೀರಾ? ಯಾವ ಪಕ್ಷದವರೇ ಆಗಿರಲಿ ಸೂಕ್ಷ್ಮ ವಿಚಾರ ಆಗಿರುವುದನ್ನು ನಾವು ಅದನ್ನು ಗ್ರಹಿಸುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದರು.

ಯತೀಂದ್ರ ಹೇಳಿಕೆಗೆ ಉತ್ತರ ಕೊಡೊಲ್ಲ ಎಂದ ಪರಮೇಶ್ವರ್‌

ಹಿಂದೂ ರಾಷ್ಟ್ರ ಮಾಡಲು ಹೋದರೆ ಭಾರತ ಪಾಕಿಸ್ತಾನ, ಆಫ್ಘಾನಿಸ್ತಾನ ಆಗುತ್ತದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಜಿ. ಪರಮೇಶ್ವರ್‌ ನಿರಾಕರಿಸಿದರು. ಪ್ರತಿದಿನ ಯಾರೋ ಏನೋ ಒಂದು ಹೇಳುತ್ತಿರುತ್ತಾರೆ ಅದಕ್ಕೆಲ್ಲದಲ್ಲದಕ್ಕೂ ಉತ್ತರ ಕೊಡಲು ಆಗಲ್ಲ ಎಂದು ಹೇಳಿದರು ಪರಮೇಶ್ವರ್.‌

ಸಮಯ ಒಂದು ಬಿಟ್ಟರೆ ಶ್ರೀಕಾಂತ್‌ ಬಂಧನದಲ್ಲಿ ಯಾವುದೇ ತಪ್ಪಿಲ್ಲ

1992ರ ಡಿಸೆಂಬರ್‌ 7ರಂದು ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ತನಿಖೆಯನ್ನು ಮತ್ತೆ ಆರಂಭಿಸಿದ್ದರ ಬಗ್ಗೆ ಹುಟ್ಟಿಕೊಂಡ ವಿವಾದ ಮತ್ತು ಬಂಧಿತ ಶ್ರೀಕಾಂತ್ ಪೂಜಾರಿ ಬಿಡುಗಡೆಗೆ ಬಿಜೆಪಿ ಡೆಡ್‌ಲೈನ್ ನೀಡಿದ ವಿಚಾರಕ್ಕೆ ಜಿ. ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದರು.

ʻʻಈ ದೇಶದಲ್ಲಿ ಕಾನೂನು ಇರಬಾರದು ಅನ್ನೋದಿದ್ರೆ ಬಿಜೆಪಿಯವರು ಹೋರಾಟ ಮಾಡಲಿ. ಈ ರಾಜ್ಯದಲ್ಲಿ ಕಾನೂನು ಕಾಪಾಡುವುದು ನಮ್ಮ ಕರ್ತವ್ಯ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು, ಪೊಲೀಸರು ತೆಗೆದುಕೊಂಡಿದ್ದಾರೆ. ನಾನು ನಿನ್ನೆ ಕೂಡಾ ಹೇಳಿದ್ದೇನೆ, ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಮಾಡಿದ್ದಾರೆ ಅನ್ನೋದು ಬಿಟ್ಟರೆ ಪೊಲೀಸರು ಕಾನೂನು ವಿರುದ್ಧವಾಗಿ ಕೆಲಸ ಮಾಡಿಲ್ಲ. ಬಿಜೆಪಿ ಅನವಶ್ಯಕವಾಗಿ ದೊಡ್ಡ ಪ್ರಮಾಣದ ರಾಜಕೀಯವನ್ನು ಮಾಡುತ್ತಿದೆ. ಬಿಜೆಪಿಯವರ ಈ ರಾಜಕಾರಣವನ್ನು ನಾವು ಹೇಗೆ ಸಹಿಸಬೇಕುʼʼ ಎಂದು ಪರಮೇಶ್ವರ್‌ ಪ್ರಶ್ನಿಸಿದರು.

ಶ್ರೀಕಾಂತ್‌ ಪೂಜಾರಿ ಅವರನ್ನು ಬಂಧಿಸಿದ ಪೊಲೀಸರನ್ನು ಸಸ್ಪೆಂಡ್‌ ಮಾಡಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ʻʻ ಯಾವ ಕಾರಣಕ್ಕಾಗಿ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು? ಅವರೇನು ತಪ್ಪು ಮಾಡಿದ್ದಾರೆ? ಅವರ ಕೆಲಸ ಅವರು ಮಾಡಿದ್ದಾರೆ? ಬಿಜೆಪಿಯವರಿಗೆ ಇಷ್ಟ ಆಗಿಲ್ಲ ಅಂತ ಹೇಳಿ ಸಸ್ಪೆಂಡ್ ಮಾಡೋಕೆ ಆಗುತ್ತಾ?ʼʼ ಎಂದು ಕೇಳಿದರು.

ʻʻಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿಲ್ಲ. ಅವರು ಎರಡು ದಿನ ರಜೆ ಹಾಕಿದ್ದಾರೆ, ಬಳಿಕ ವಾಪಸ್ ಬರ್ತಾರೆʼ ಎಂದು ಪರಮೇಶ್ವರ್‌ ಹೇಳಿದರು.

Exit mobile version