Site icon Vistara News

BK Hariprasad : ಸಿಎಂ ಮಾಡೋದು ಇಳಿಸೋದು ಹರಿಪ್ರಸಾದ್‌ ಕೈಲಿ ಇಲ್ಲ ; ಜಮೀರ್‌ ಅಹಮದ್‌ ತಿರುಗೇಟು

siddaramaiah Hariprasad zamir ahmad khan

ಮಂಡ್ಯ: ನನಗೆ ಸಿಎಂ ಮಾಡೋದೂ ಗೊತ್ತು, ಇಳಿಸೋದೂ ಗೊತ್ತು ಎಂಬ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ (BK Hariprasad) ಅವರ ಮಾತು ಕಾಂಗ್ರೆಸ್‌ನಲ್ಲಿ ಭಾರಿ ತಲ್ಲಣದ ಅಲೆಗಳನ್ನು ಸೃಷ್ಟಿಸಿದೆ. ತಮಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ಸಿಟ್ಟಿನಲ್ಲಿರುವ ಬಿ.ಕೆ ಹರಿಪ್ರಸಾದ್‌ ಅವರು ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಮಾತನಾಡುತ್ತಾ ಸಿದ್ದರಾಮಯ್ಯ (CM Siddaramaiah) ಮೇಲಿನ ತಮ್ಮ ಆಕ್ರೋಶವನ್ನು ಹೊರಗೆಡಹಿದ್ದರು. ಇದಕ್ಕೆ ಕೆಲವು ಕಾಂಗ್ರೆಸ್‌ ನಾಯಕರು ಖಾರವಾಗಿ ಪ್ರತಿಕ್ರಿಯಿಸಿದ್ದು, ಏರಿಸೋದು, ಇಳಿಸೋದು ಯಾರ ಕೈಯಲ್ಲೂ ಇಲ್ಲ ಎಂದಿದ್ದಾರೆ. ಮುಖ್ಯವಾಗಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zamir Ahmad Khan) ಅವರು ಜೋರಾಗಿ ಮಾತನಾಡಿದ್ದಾರೆ.

ಶನಿವಾರ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಜಮೀರ್‌ ಅಹಮದ್‌ ಖಾನ್‌ ಅವರು, ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದರು. ʻʻಸಿಎಂ ಮಾಡೋದೂ ಗೊತ್ತು ಇಳಿಸೋದೂ ಗೊತ್ತುʼ ಎಂಬ ಬಿಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಸಿಎಂ ಮಾಡೋದು ಬಿಡೋದು ಹರಿಪ್ರಸಾದ್ ಕೈಲೂ ಇಲ್ಲಾ, ನನ್ನ ಕೈಲು ಇಲ್ಲಾ. ನಮ್ಮದು ಹೈಕಮಾಂಡ್ ಪಕ್ಷ. ಆ ನಿರ್ಧಾರವನ್ನು ನಮ್ಮ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾಡ್ತಾರೆʼʼ ಎಂದರು. ಬಿಜೆಪಿ, ಜೆಡಿಎಸ್ ಹೊಂದಾಣಿಕೆ ರಾಜಕೀಯದ ವಿಚಾರವಾಗಿ ಮಾತನಾಡಲ್ಲ ಅಂದರು.

4 ಬಾರಿ ಗೆದ್ದರೂ ಮಂತ್ರಿಯಲ್ಲ, ನಾನೇನ್ಮಾಡ್ಲಿ ಎಂದು ಕೇಳಿದ ಪುಟ್ಟರಂಗಶೆಟ್ಟಿ

ಬಿ.ಕೆ. ಹರಿಪ್ರಸಾದ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟಿ ಅವರು, ʻʻನಾನು ನಾಲ್ಕು ಬಾರಿ ಗೆದ್ದಿದ್ದೇನೆ, ನನ್ನ ಪರಿಸ್ಥಿತಿ ಏನು? ನನಗೂ ಸಚಿವ ಸ್ಥಾನ ಸಿಕ್ಕಿಲ್ಲʼʼ ಎಂದರು.

ʻʻಮಂತ್ರಿ ಸ್ಥಾನ ಸಿಕ್ಕಿಲ್ಲ ಅಂದ ಮಾತ್ರಕ್ಕೆ ಅಸಮಾಧಾನದ ಪ್ರಶ್ನೆ ಬರುವುದಿಲ್ಲ. ಪಕ್ಷ ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿಪಡಿಸುತ್ತದೆ. ನಾವು 136 ಜನ ಇದೀವಿ, ಸೀನಿಯರ್‌ಗಳೇ 70-80 ಜನ ಇದೀವಿ. 34 ಸ್ಥಾನಗಳನ್ನು ಎಲ್ಲರಿಗೂ ಹೇಗೆ ಕೋಡೋಕೆ ಆಗುತ್ತೆ. ಅವರು (ಬಿ.ಕೆ. ಹರಿಪ್ರಸಾದ್) ದೊಡ್ಡವರು ನಮಗಿಂತ ಹಿರಿಯರು. ಅವರ ಬಗ್ಗೆ ನಾನು ಮಾತಾಡೋಲ್ಲʼʼ ಎಂದರು.

ʻʻಪಕ್ಷ ಅಂದಮೇಲೆ ಒಂದು ಮನೆ ಇದ್ದ ಹಾಗೆ. ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕುʼʼ ಎಂದು ಹೇಳಿದರು.

ಹರಿಪ್ರಸಾದ್‌ ಹೇಳಿದ್ದೇನು ಅಂತ ಗೊತ್ತಿಲ್ಲ ಎಂದ ಉಗ್ರಪ್ಪ

ʻʻಬಿ.ಕೆ. ಹರಿಪ್ರಸಾದ್‌ ಅವರು ಸಿಎಂ ಸ್ಥಾನದ ಬಗ್ಗೆ ಹೇಳಿರುವುದು ನನ್ನ ಗಮನಕ್ಕೆ ಬಂದಿಲ್ಲ. ಯಾವ ಕಾಂಟೆಸ್ಟ್‌ನಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲʼʼ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ.

ʻʻಯಾವುದೇ ವ್ಯಕ್ತಿಗೆ ಅಧಿಕಾರ ಕೊಡುವ ನಿರ್ಧಾರ ಹೈಕಮಾಂಡ್ ಬಿಟ್ಟಿದ್ದು. ರಾಜ್ಯದ ನಾಯಕತ್ವದ ಬಗ್ಗೆ ಹೈಕಮಾಂಡ್​​ಗೆ ತೃಪ್ತಿ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲವೇ ಇಲ್ಲ. ಬದಲಾಗಿ ವಿರೋಧ ಪಕ್ಷವಾದ ಬಿಜೆಪಿಯಲ್ಲಿ ಗೊಂದಲಗಳಿವೆ. ಬಿಜೆಪಿಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲʼʼ ಎಂದು ಹೇಳಿದರು.

ಇದನ್ನೂ ಓದಿ: BK Hariprasad: ಈಡಿಗ- ಬಿಲ್ಲವರ ಕಡೆಗಣನೆ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಸ್ವಾಮೀಜಿ ಆಕ್ರೋಶ, ಹರಿಪ್ರಸಾದ್‌ ಪರ ಬ್ಯಾಟಿಂಗ್

Exit mobile version