ಕಲಬುರಗಿ: ನನಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದೂ ಗೊತ್ತು, ಅಧಿಕಾರದಿಂದ ಕೆಳಗೆ ಇಳಿಸುವುದೂ ಗೊತ್ತು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಗುಡುಗಿದ್ದ ಹಿರಿಯ ಕಾಂಗ್ರೆಸ್ಸಿಗ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (MLC BK Hariprasad) ಈಗ ಮತ್ತೊಮ್ಮೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಣ್ಣ ಸಣ್ಣ ಸಮುದಾಯಗಳಿಗೂ ರಾಜಕೀಯದಲ್ಲಿ ಅವಕಾಶ ಸಿಗಬೇಕು. ಅದಕ್ಕಾಗಿ ನಾನು ರೋಡಿಗಿಳಿದಾದರೂ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು (Devaraj Urs) ಹಾಗೂ ಎಸ್. ಬಂಗಾರಪ್ಪ (S Bangarappa) ಅವರು ಮಾತ್ರವೇ ಹಿಂದುಳಿದವರ ಪ್ರಬಲ ನಾಯಕರು ಎಂದು ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸದೇ ಮಾತನಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರನ್ನು ಕಡೆಗಣಿಸುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ ಬಿ.ಕೆ. ಹರಿಪ್ರಸಾದ್, ಹಿಂದುಳಿದ ವರ್ಗ, ಹಿಂದುಳಿದ ಜಾತಿ ನಡುವೆ ಬಹಳ ವ್ಯತ್ಯಾಸ ಇದೆ. ಹಿಂದುಳಿದ ವರ್ಗದ ಬಗ್ಗೆ ಜಾಗೃತಿ ಮೂಡಿಸಿದವರು ದೇವರಾಜ್ ಅರಸು ಅವರು. ಇವರಿಗೆ ಏನಾದರೂ ಮಾಡಿದವರು ಅಂದರೆ ದೇವರಾಜ ಅರಸು, ಬಂಗಾರಪ್ಪನವರು ಮಾತ್ರ ಎಂದು ಹೇಳಿದರು.
ಇದನ್ನೂ ಓದಿ: Operation Hasta : 1 ತಿಂಗಳು ಟೈಂ ಕೊಡುವೆ 45 ಅಲ್ಲ 4 ಶಾಸಕರ ಸೆಳೆಯಿರಿ: ಬಿ.ಎಲ್. ಸಂತೋಷ್‌ಗೆ ಪ್ರಿಯಾಂಕ್ ಖರ್ಗೆ ಸವಾಲು
ನಾನು ಸಿದ್ದರಾಮಯ್ಯ ಅವರ ವಕ್ತಾರ ಅಲ್ಲ
ನಾನು ಸಿದ್ದರಾಮಯ್ಯ ಅವರ ವಕ್ತಾರ ಅಲ್ಲ. ನಾನು ಪಕ್ಕಾ ಕಾಂಗ್ರೆಸ್‌ನವನು. ಒಂದೇ ಒಂದು ದಿನ ಬೇರೆ ಪಕ್ಷದ ಕಡೆ ನಾನು ನೋಡಿದವನೂ ಅಲ್ಲ. ಮಂತ್ರಿ ಆಗೋದು ನನಗೇನು ದೊಡ್ಡ ವಿಚಾರ ಅಲ್ಲ. ಮಂತ್ರಿ ಆಗೋದು ನನಗೆ ಮುಖ್ಯ ಅಲ್ಲ. ಸಣ್ಣ ಸಣ್ಣ ಸಮುದಾಯಗಳಿಗೂ ರಾಜಕೀಯದಲ್ಲಿ ಅವಕಾಶ ಸಿಗಬೇಕು. ಅದಕ್ಕಾಗಿ ನಾನು ರೋಡಿಗಿಳಿದು ಬೇಕಿದ್ದರೂ ಹೋರಾಟ ಮಾಡುತ್ತೇನೆ. ಇದನ್ನೆಲ್ಲ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರಿಂದ ಕಲಿಯಬೇಕು ಎಂದು ಬಿ.ಕೆ. ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
40-45 ಜನ ಸಂಪರ್ಕದಲ್ಲಿದ್ದಾರೆ ಒಂದೇ ದಿನದಲ್ಲಿ ಬೇಕಾದರೆ ಸರ್ಕಾರವನ್ನು ಬೀಳಿಸುತ್ತೇವೆ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ಕೆ. ಹರಿಪ್ರಸಾದ್, ಆಪರೇಷನ್ ಕಮಲದ ಡಾಕ್ಟರೇಟ್ ಪಡೆದವರು ಬಿ.ಎಲ್. ಸಂತೋಷ್ ಅವರಾಗಿದ್ದಾರೆ. ಬಿಜೆಪಿಯವರು ಸರ್ಕಾರವನ್ನು ಬೀಳಿಸುವುದಾಗಿ ಹೇಳುತ್ತಿದ್ದಾರೆ. ಏನಾಗುತ್ತದೆ ಎಂದು ನೋಡೋಣ ಎಂದು ಹೇಳಿದರು.
ಬಿಜೆಪಿಯವರು ಒನ್ ನೇಷನ್ ಒನ್ ಲೀಡರ್ ಅಂದುಬಿಡುತ್ತಾರೆ!
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಘೋಷಣೆಗಳಿಗೆ ಏನೂ ಕಮ್ಮಿ ಇಲ್ಲ. ಒನ್ ನೇಷನ್ ಒನ್ ರೇಷನ್, ಒನ್ ನೇಷನ್ ಒನ್ ಎಜುಕೇಷನ್ ಹೀಗೆ ಘೋಷಣೆಗಳಿಗೆ ಏನೂ ಕಮ್ಮಿ ಇಲ್ಲ. ಕೊನೆಗೆ ಒನ್ ನೇಷನ್ ಒನ್ ಲೀಡರ್ ಅಂದುಬಿಡುತ್ತಾರೆ. ಇನ್ನು ಒನ್ ನೇಷನ್ ಒನ್ ಎಲೆಕ್ಷನ್ ಎಂಬುದು ಈ ದೇಶದಲ್ಲಿ ನಡೆಯುವುದಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ಬಿ.ಕೆ. ಹರಿಪ್ರಸಾದ್ ಹೇಳಿದ ಮಾತುಗಳು ಏನು? ಇಲ್ಲಿದೆ ವಿಡಿಯೊ
ಇದನ್ನೂ ಓದಿ: Lok Sabha Election 2024 : ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪುತ್ರನಿಗೆ ಟಿಕೆಟ್ ಬೇಡಿಕೆ ಇಟ್ಟ ಸತೀಶ್ ಜಾರಕಿಹೊಳಿ!
ಇಸ್ರೋಗೆ ಜಾಗ ಕೊಟ್ಟಿದ್ದು ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಪಕ್ಷ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಂಬಿಕೆ ಇಟ್ಟುಕೊಂಡಿದೆ. ಮಲ್ಲಿಕಾರ್ಜುನ ಖರ್ಗೆ ಅವರು 1981ರಲ್ಲಿ ಕಂದಾಯ ಸಚಿವರಾಗಿದ್ದಾಗ ಪೀಣ್ಯದಲ್ಲಿ ಇಸ್ರೋಗೆ ಜಾಗ ಕೊಟ್ಟಿದ್ದರು. ಅದನ್ನು ನಾವ್ಯಾರೂ ಮರೆಯಲು ಸಾಧ್ಯವಿಲ್ಲ. ನಾವು ಪ್ರಚಾರ ತೆಗೆದುಕೊಂಡಿರಲಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.