Site icon Vistara News

BKS Varma Death News : ದೇವರನ್ನೇ ಧರೆಗಿಳಿಸಿದ ದೈವದತ್ತ ಪ್ರತಿಭೆ ಬಿ.ಕೆ.ಎಸ್‌ ವರ್ಮಾ; ವರ್ಮ ಸರ್‌ನೇಮ್‌ ಬಂದಿದ್ದು ಹೇಗೆ?

BKS Varma

#image_title

ಬೆಂಗಳೂರು: ಅವರು ಕುಂಚ ಹಿಡಿದರೆಂದರೆ ದೇವರೇ ಧರೆಗಿಳಿಯುತ್ತಾರೆ. ಭಕ್ತರ ಮುಂದೆ ದರ್ಶನ ಕೊಡುತ್ತಾರೆ! ಹೌದು, ನಾವು ಕಣ್ಮುಚ್ಚಿ ದೇವರನ್ನು ನೆನಪಿಸಿಕೊಂಡರೆ ಕಾಣಿಸುವ ಹಲವಾರು ದೇವರುಗಳು ಇವರದೇ ಸೃಷ್ಟಿ. ರಾಘವೇಂದ್ರ ಯತಿಗಳಿರಬಹುದು, ಗಣಪತಿ ಇರಬಹುದು ನಾವು ಕಲ್ಪಿಸಿಕೊಳ್ಳುವ ಚಿತ್ರಗಳು ಇವರೇ ಚಿತ್ರಿಸಿದ್ದು. ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ ಎಂಬ ಮೂಲ ಹೆಸರಿನ ಸಾಮಾನ್ಯ ವ್ಯಕ್ತಿಯೊಬ್ಬರು ಬಿ.ಕೆ.ಎಸ್‌. ವರ್ಮಾ (BKS Varma Death News) ಎಂಬ ಮಹಾ ಕಲಾವಿದನೇ ಈ ರೀತಿ ದೇವರನ್ನು ಜನರ ಬಳಿಗೆ ಕರೆತಂದವರು. ಅವರು ಚಿತ್ರಿಸಿದ ತಾಯಿ ಭುವನೇಶ್ವರಿ ಚಿತ್ರವೇ ಇವತ್ತಿನ ಅಧಿಕೃತ ಭುವನೇಶ್ವರಿ ಕಲಾಕೃತಿಯಾಗಿದೆ.

ಸೋಮವಾರ ನಿಧನರಾದ ಅಪ್ರತಿಮ ಕಲಾವಿದ ಬಿ.ಕೆ.ಎಸ್‌ ವರ್ಮಾ ಅವರು ಹುಟ್ಟಿದ್ದು ಬೆಂಗಳೂರು ಹೊರವಲಯದ ಅತ್ತಿಬೆಲೆ ತಾಲೂಕಿನ ಕರ್ನೂರಿನಲ್ಲಿ. 1949ರ ಸೆಪ್ಟೆಂಬರ್‌ ೫ರಂದು. ಅವರ ತಾಯಿ ಜಯಲಕ್ಷ್ಮಿ ಅವರು ಚಿತ್ರ ಕಲಾವಿದೆ. ತಂದೆ ಕೃಷ್ಣಮಾಚಾರ್ಯ ಅವರು ಸಂಗೀತಗಾರರು. ಅಮ್ಮ ಬರೆಯುವ ಚಿತ್ರಗಳನ್ನು ನೋಡುತ್ತಲೇ ಆರನೇ ವಯಸ್ಸಿಗೇ ಕುಂಚ ಹಿಡಿದಿತ್ತು ಕೃಷ್ಣಯ್ಯ ಎಂಬ ಮಗು. ಮುಂದೆ ೧೯೬೨ರಿಂದ ೬೮ರವರೆಗೆ ಬೆಂಗಳೂರಿನ ಕಲಾಮಂದಿರದ ಎ.ಎನ್‌. ಸುಬ್ಬರಾವ್‌ ಅವರಿಂದ ಚಿತ್ರಕಲೆ ಮತ್ತು ದೇವನಹಳ್ಳಿ ಖ್ಯಾತ ಶಿಲ್ಪಿ ಎ.ಸಿ.ಎಚ್‌. ಆಚಾರ್ಯ ಅವರಿಂದ ಶಿಲ್ಪ ಕಲೆಯನ್ನು ಕಲಿತರು.

ವರ್ಮ ಆಗಿದ್ದು ಹೇಗೆ?
ಚಿತ್ರಕಲಾವಿದರಾಗಿ ಸಣ್ಣ ವಯಸ್ಸಿನಲ್ಲೇ ಗಮನ ಸೆಳೆದಿದ್ದ ಕೃಷ್ಣಯ್ಯ ಅವರು ಒಮ್ಮೆ ‘ಮೈಸೂರಿನ ಜಗನ್ಮೋಹನ ಅರಮನೆ’ಯಲ್ಲಿ ರಾಜಾ ರವಿವರ್ಮ ಅವರ ಚಿತ್ರಗಳನ್ನು ನೋಡುತ್ತಿದ್ದಾಗ ಅದೇ ರೀತಿಯ ಚಿತ್ರಗಳನ್ನು ತಾನೂ ಬಿಡಿಸಬೇಕು ಎಂಬ ನಿರ್ಧಾರಕ್ಕೆ ಬಂದರಂತೆ. ಮಾತ್ರವಲ್ಲ ವರ್ಮ ಎಂಬ ಸರ್‌ನೇಮನ್ನೂ ಜೋಡಿಸಿಕೊಂಡರು. ಈ ರೀತಿ ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ ಅವರು ಬಿ.ಕೆ.ಎಸ್‌. ವರ್ಮ ಆದ ಬಳಿಕ ಚಿತ್ರ ಕಲಾ ಜೀವನವೇ ಬದಲಾಸಿತಂತೆ.

ನೃತ್ಯ ಗಾನ ಕುಂಚ ವೈಭವದ ಸೃಷ್ಟಿಕರ್ತ
ಬಿಕೆಎಸ್‌ ವರ್ಮ ಅವರು ಅತ್ಯದ್ಭುತ ಚಿತ್ರಗಳನ್ನು ಬರೆದಿರುವ ಮಹಾಸಾಧಕ ಎನ್ನುವುದು ಒಂದು ಕಡೆ, ಅದೇ ಹೊತ್ತಿಗೆ ಅವರು ಕೇವಲ ಎರಡೇ ನಿಮಿಷಗಳಲ್ಲಿ ಚಿತ್ರಗಳನ್ನು ಬರೆಯಬಲ್ಲ ಅತಿವೇಗದ ಚಿತ್ರ ಕಲಾವಿದರು ಅವರು. ಈಗ ತಾಂತ್ರಿಕತೆಯನ್ನು ಬಳಸಿಕೊಂಡು ವೇಗದ ಚಿತ್ರಗಳನ್ನು ಮಾಡುತ್ತಿದ್ದರೆ ಹಲವು ದಶಕಗಳಷ್ಟು ಹಿಂದೆಯೇ ವೇಗದ ಚಿತ್ರಕ್ಕೆ ಹೆಸರಾಗಿದ್ದರು ವರ್ಮ. ನೃತ್ಯ ಗಾನ ಕುಂಚ ಅಂದರೆ ಹಾಡು ಹೇಳುವಾಗ, ಒಬ್ಬರು ಒಂದು ಕಡೆ ನೃತ್ಯ ಮಾಡುವುದು, ಇನ್ನೊಬ್ಬರು ಚಿತ್ರ ಬಿಡಿಸುವ ಅತಿ ವಿಶಿಷ್ಟ ಪರಿಕಲ್ಪನೆಯನ್ನು ಹಲವು ದಶಕಗಳ ಹಿಂದೆಯೇ ಸೃಷ್ಟಿ ಮಾಡಿದವರು ವರ್ಮ. ಕೆಲವೇ ನಿಮಿಷಗಳ ಅವಧಿಯಲ್ಲಿ ಅದ್ಭುತ ಕಲಾಕೃತಿಯೊಂದು ವರ್ಮ ಕುಂಚದಲ್ಲಿ ಸೃಷ್ಟಿಯಾಗುತ್ತಿತ್ತು. ಶತಾವಧಾನಿ ಆರ್‌. ಗಣೇಶ್‌ ಶ್ರೀ ಶತಾವಧಾನಿ ಗಣೇಶ್ ಅವರೊಂದಿಗೆ ಸೇರಿ ಸಾವಿರಕ್ಕೂ ಹೆಚ್ಚು ಕಾವ್ಯ-ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆರ್‌. ಗಣೇಶ್‌ ಜತೆ ಸೇರಿ ಸತತ ೨೪ ಗಂಟೆಗಳ ಕಾಲ ಕಾವ್ಯ ಚಿತ್ರ ಮಾಲಿಕೆಯನ್ನು ಕಟ್ಟಿದ್ದು ಅವರ ಇನ್ನೊಂದು ವಿಶೇಷ.

ಕಲಾವಿದರ ಭೇಟಿಗಾಗಿಯೇ ದೇಶ ಸುತ್ತಿದರು!
ಕಲಾಮಂದಿರದಲ್ಲಿ ವಿದ್ಯಾರ್ಥಿಯಾಗಿದ್ದಾಗ ಬಿ.ಕೆ.ಎಸ್‌ ವರ್ಮ ಅವರು ಇಡೀ ದೇಶವನ್ನು ಎರಡು ಬಾರಿ ಸುತ್ತಿದ್ದರು. ಅವರ ಉದ್ದೇಶ ಗಣ್ಯ ವ್ಯಕ್ತಿಗಳು, ಮಹಾ ಕಲಾವಿದರು, ಅದ್ಭುತ ತಾಣಗಳನ್ನು ಭೇಟಿಯಾಗುವುದಾಗಿತ್ತು. ಆ ತಿರುಗಾಟದಲ್ಲಿ ಅವರು ಮಾಜಿ ರಾಷ್ಟ್ರಪತಿ ಡಾ. ಸರ್ವೇಪಲ್ಲಿ ರಾಧಾಕೃಷ್ಣ, ಕಲಾವಿದರಾದ ದೇವಿಪ್ರಸಾದ್‌ ರಾಯ್‌ ಚೌಧರಿ, ಜೆಮಿನಿ ರಾಯ್‌, ನಂದಾಲ್‌ ಬೋಸ್‌, ಕೆ.ಕೆ. ಹೆಬ್ಬಾರ್‌, ಎಂ.ಎಫ್‌ ಹುಸೇನ್‌, ಪಣಿಕ್ಕರ್‌, ಸಾಹಿತಿಗಳಾದ ಕುವೆಂಪು, ಶಿವರಾಮ ಕಾರಂತ ಸೇರಿದಂತೆ ಹಲವರನ್ನು ಭೇಟಿಯಾದರು. ಅವರು ಅಜಂತಾಕ್ಕೆ ಹೋದರು, ಎಲ್ಲೋರಾಕ್ಕೆ ಹೋದರು, ದೇಶದ ನಾನಾ ಚಿತ್ರಕಲಾ ಗ್ಯಾಲರಿಗಳಿಗೆ ಭೇಟಿ ನೀಡಿದರು. ಅಲ್ಲಿ ಅವರಿಗೆ ಸಾಕಷ್ಟು ಅನುಭವ ಮತ್ತು ಜ್ಞಾನ ದೊರಕಿತು.

ರಜನೀಕಾಂತ್‌ ಬರೆಸಿದ ಚಿತ್ರ

ಚಿತ್ರ ಕಲಾವಿದರು ಮಾತ್ರವಲ್ಲ..

ಬಿ.ಕೆ.ಎಸ್‌. ವರ್ಮ ಅವರು ಕೇವಲ ಚಿತ್ರ ಕಲಾವಿದರು ಮಾತ್ರವಲ್ಲ, ಬ್ಲೇಡಿನಿಂದ, ಉಗುರಿನಿಂದ ಚಿತ್ರ ಬಿಡಿಸುತ್ತಿದ್ದರು. ಎಂಬಾಸಿಂಗ್, ಥ್ರೆಡ್‌ ಪೇಂಟಿಂಗ್ ಮೂಲಕ ಚಿತ್ರಗಳನ್ನು ಬಿಡಿಸಿ ಸಾಕಷ್ಟು ಜನಪ್ರಿಯರಾಗಿದ್ದರು. ತಮ್ಮ ಎರಡೂ ಕೈಗಳ ಬೆರೆಳುಗಳನ್ನೆ ಉಪಯೋಗಿಸಿ ಸುಂದರವಾದ ಚಿತ್ತಾರಗಳನ್ನು ಮೂಡಿಸುವ ಪರಿಯೇ ಅನನ್ಯ.

ಬಿ.ಕೆ.ಎಸ್‌. ವರ್ಮ ಅವರು ಬರೆದ ಚಿತ್ರಗಳನ್ನು ಕಂಡು ಖುಷಿಪಟ್ಟವರಲ್ಲಿ ಸೂಪರ್‌ ಸ್ಟಾರ್‌ ರಜನೀಕಾಂತ್‌, ಡಾ. ರಾಜ್‌ ಕುಮಾರ್‌, ಅಂತಾರಾಷ್ಟ್ರೀಯ ಕಲಾವಿದರಾದ ಡಾ. ರೋರಿಕ್‌ ಮತ್ತು ದೇವಿಕಾ ರಾಣಿ ದಂಪತಿ ಕೂಡಾ ಸೇರಿದ್ದಾರೆ. ರಜನೀಕಾಂತ್‌ ಅವರಂತೂ ತಮ್ಮ ಆರಾಧ್ಯ ದೈವ ರಾಘವೇಂದ್ರ ಯತಿಗಳ ಚಿತ್ರವನ್ನು ವರ್ಮಾ ಅವರ ಕೈಯಿಂದಲೇ ಬರೆಸಿಕೊಂಡಿದ್ದರು. ಬೆಂಗಳೂರಿನ ರಾಮಾಂಜನೇಯ ಗುಡ್ಡದ ಸೃಷ್ಟಿಯ ಹಿಂದೆ ವರ್ಮಾ ಅವರ ಕಲ್ಪನಾಶಕ್ತಿ ಇದೆ.

ವಿಶಿಷ್ಟ ಸಿದ್ಧಾಂತಗಳ ಮಹಾಸಾಧಕ
ಪ್ರಕೃತಿಯ ಆರಾಧಕರಾದ ವರ್ಮಾ ಅವರು ಪ್ರಕೃತಿ ಚಿತ್ರಗಳಿಗೂ ಪ್ರಸಿದ್ಧರು. ಅವರು ರೀಚ್‌ ಮತ್ತು ರಿಚ್‌ ಎನ್ನುವ ಪದಗಳನ್ನು ಹೆಣೆದು ತಮ್ಮ ಸಿದ್ಧಾಂತವನ್ನು ಮಂಡಿಸುತ್ತಿದ್ದ ರೀತಿಯೇ ವಿಶಿಷ್ಟ. ನಾನು ದುಡ್ಡಿನಿಂದ ರಿಚ್‌ ಆಗಬೇಕು ಎಂದು ಬಯಸಿಲ್ಲ. ಯಾವಾಗ ಅತಿ ಸಾಮಾನ್ಯರನ್ನೂ ರೀಚ್‌ ಆಗುತ್ತೀನೋ, ಆಗಲೇ ನಾನು ರಿಚ್‌ ಅಂದುಕೊಳ್ಳುತ್ತೇನೆ ಅನ್ನುತ್ತಿದ್ದರು. ʻʻಇದ್ದದ್ದು ಇದ್ದಹಾಗೆ ಬರೆಯೋದು Chart, ಅನುಭವಿಸಿ ಬರೆಯೋದು Artʼʼ ಎನ್ನುವುದು ಅವರ ಇನ್ನೊಂದು ನುಡಿಮುತ್ತು.

ಮಕ್ಕಳ ಮುಂದೆ ಮನದಣಿಯೆ ಕುಣಿಯುವ ಕವಿ!
ಚಿತ್ರಕಲೆಯ ಜತೆಗೆ ಕಾವ್ಯ ಶಕ್ತಿಯೂ ಅವರಿಗೆ ಒಲಿದಿದೆ. ತಮ್ಮ ಚಿತ್ತಾರಗಳ ಸೃಷ್ಟಿಲೋಕದಿಂದ ಸ್ವಲ್ಪಹೊರಗೆ ಬಂದಾಗ, ಅವರು ವಿಹರಿಸುವುದು, ಒಬ್ಬ ಕವಿಯಾಗಿ. ಮಕ್ಕಳ ಮುಂದೆ ಮನದಣಿಯೆ ಹಾಡುವುದು, ಕುಣಿಯುವುದು ಅವರ ಹವ್ಯಾಸವಾಗಿತ್ತು.

ಸಿನಿಮಾ ಲೋಕದಲ್ಲೂ ಸಾಧನೆ

ಮಲಯಾಳಿ ಭಾಷೆಯ ಚೆಮ್ಮೀನ್‌ ಎಂಬ ಸಿನಿಮಾವನ್ನು ೩೦ಕ್ಕೂ ಹೆಚ್ಚು ಬಾರಿ ವೀಕ್ಷಿಸಿದ್ದರಂತೆ ಬಿ.ಕೆ.ಎಸ್.‌ ವರ್ಮಾ. ಅವರು ೧೯೬೭ರಲ್ಲಿ ಬಾಲಿವುಡ್‌ ಸಿನಿಮಾ ಆದ್ಮಿಗೆ ಸಹಾಯಕ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕನ್ನಡ ಚಿತ್ರಗಳಾದ ಬಂಗಾರದ ಜಿಂಕೆ, ನಿನಗಾಗಿ ನಾನು, ರಾಜೇಶ್ವರಿ ಮತ್ತು ಚದುರಿದ ಚಿತ್ರಗಳು ಸಿನಿಮಾಗಳ ಕಲಾ ನಿರ್ದೇಶಕರಾಗಿದ್ದರು.

ಪ್ರಕೃತಿಯ ಆರಾಧಕ

ಅವರಿಗೆ ಪ್ರಕೃತಿಯಲ್ಲಿ ಓಡಾಡುವುದು ತುಂಬ ಖುಷಿಯಂತೆ. ಅದರಲ್ಲೂ ಹಿಮವದ್‌ ಗೋಪಾಲಸ್ವಾಮಿಬೆಟ್ಟ, ಮಲೆನಾಡು ಇಷ್ಟದ ಜಾಗಗಳು. ಪತ್ನಿ ತಯಾರಿಸಿ ಬಡಿಸುವ ‘ಬಿಸಿಬೇಳೆ ಭಾತ್’ ಇಷ್ಟದ ಅಡುಗೆ, ಸದಾ ಡ್ರೈ ಫ್ರುಟ್ಸ್‌ ತಿನ್ನುವ ಆಸೆ ಅವರದು. ಬಸವನಗುಡಿಯ ‘ದೊಡ್ಡ ಗಣೇಶನ ದೇವಾಲಯ’ ಅವರಿಗೆ ಪ್ರಿಯವಾದ ಜಾಗವಂತೆ. ಇಂಥ ಸಾಧಕನಿಗೆ ಹಲವು ಪ್ರಶಸ್ತಿಗಳು ಒಲಿದಿವೆ. ಅವರ ಚಿತ್ರಗಳು ರಷ್ಯಾ ಉತ್ಸವದಲ್ಲಿ ಪ್ರದರ್ಶನ ಕಂಡಿವೆ. ಬೆಹರಿನ್‌, ಲಂಡನ್‌, ಅಮೆರಿಕ ಸೇರಿದಂತೆ ಹತ್ತಾರು ದೇಶ ಸುತ್ತಿದ ಅವರ ಕೈಗಳಲ್ಲಿ ಕುಂಚವಿದ್ದರೆ ಕಾಲಿನಲ್ಲಿ ಚಕ್ರವಿತ್ತು.

ಇದನ್ನೂ ಓದಿ : BKS Varma Death: ವರ್ಮಾ ಅವರದೇ ಒಂದು ವಿಶಿಷ್ಟ ಲೋಕ: ಸಹ ಕಲಾವಿದ ಪ.ಸ. ಕುಮಾರ್‌ ಮನದಾಳದ ಮಾತು

Exit mobile version