ಹುಬ್ಬಳ್ಳಿ: ನನ್ನ ವಿರುದ್ಧ ಬಿಜೆಪಿಯಲ್ಲಿ ಕುತಂತ್ರ, ಷಡ್ಯಂತ್ರ ನಡೆದಿತ್ತು. ನಾನು ನೇರವಾಗಿ ಟೀಕಿಸಿದ್ದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರ ಮೇಲಾಗಿತ್ತು. ಆದರೆ, ಅದಕ್ಕೆ ಸಂತೋಷ ಉತ್ತರಿಸಲಿಲ್ಲ. ಬದಲಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವ ಕೆಲಸವನ್ನು ಮಾಡಿದ್ದಾರೆ. ಅವರು ಏನೇ ಮಾಡಿದರೂ ಈ ಚುನಾವಣೆಯಲ್ಲಿ (Karnataka Election 2023) ಗೆಲುವು ನನ್ನದೇ ಎಂದು ಮಾಜಿ ಮುಖ್ಯಮಂತ್ರಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಕಿಡಿಕಾರಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯ ಬಿ.ಎಲ್. ಸಂತೋಷ್ ಮೇಲೆ ಪುನಃ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆರೋಪಗಳಿಗೆ ಏನೂ ಉತ್ತರ ನೀಡದೆ, ಈಗ ಯಡಿಯೂರಪ್ಪ ಮೂಲಕ ತಮ್ಮ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಹೀಗೆ ಎಲ್ಲರೂ ಸೇರಿ ನನ್ನನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಅಭಿಯಾನವನ್ನು ಬಿಜೆಪಿ ನಡೆಸುತ್ತಿದೆ. ನನ್ನಂತಹ ಬಡಪಾಯಿ ಮೇಲೆ ಯಾಕೆ ಮುಗಿಬೀಳುತ್ತಿದ್ದಾರೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Election 2023: ಮೈಲಾರಿ ಹೋಟೆಲ್‌ನಲ್ಲಿ ದೋಸೆ ಎರೆದ ಪ್ರಿಯಾಂಕಾ ಗಾಂಧಿ; ಛೆ, ಸ್ವಲ್ಪ ಸೀದು ಹೋಯ್ತು!
ನನ್ನ ಮೇಲೆ ಇವರೆಲ್ಲರೂ ಎಷ್ಟು ವಾಗ್ದಾಳಿ ನಡೆಸುತ್ತಾರೋ, ಟೀಕೆ ಮಾಡುತ್ತಾರೋ, ಅಷ್ಟೂ ನನಗೆ ಲಾಭವಾಗಲಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಶೆಟ್ಟರ್ ಹೇಳಿದರು.
ಕೆಜೆಪಿ ಕಟ್ಟುವಾಗ ಐಡಿಯಲಾಜಿ ಎಲ್ಲಿ ಹೋಗಿತ್ತು?
ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ವಿಧಾನ ಪರಿಷತ್ ಸದಸ್ಯರಾಗಿದ್ದ ಆಯನೂರು ಮಂಜುನಾಥ, ಅರಸೀಕೆರೆ ಟಿಕೆಟ್ ಆಕಾಂಕ್ಷಿ ಎನ್.ಆರ್. ಸಂತೋಷ ಸೇರಿದಂತೆ ಎಲ್ಲರೂ ಪಕ್ಷ ತೊರೆದಿದ್ದಾರೆ. ಆದರೆ, ನಾನು ಪಕ್ಷ ತೊರೆದಿದ್ದಕ್ಕೆ ದೊಡ್ಡ ಅಪರಾಧ ಮಾಡಿದವನಂತೆ ನನ್ನ ವಿರುದ್ಧ ಮುಗಿಬಿದ್ದಿದ್ದಾರೆ. ಯಡಿಯೂರಪ್ಪ ಕೆಜೆಪಿ ಕಟ್ಟುವಾಗ ಐಡಿಯಲಾಜಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ ಶೆಟ್ಟರ್, ಬಿಜೆಪಿ ಪಕ್ಷ ದ್ರೋಹದ ಕೆಲಸ ಮಾಡಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಪಕ್ಷದಲ್ಲಿ ನನ್ನ ವಿರುದ್ಧ ಕುತಂತ್ರ, ಷಡ್ಯಂತ್ರ ನಡೆದಿದೆ ಎಂದು ಗುಡುಗಿದರು.
ಇದನ್ನೂ ಓದಿ: Priyanka Gandhi: ಅಜ್ಜಿ ಇಂದಿರಾ ಗಾಂಧಿ ಭೇಟಿ ನೀಡಿ 45 ವರ್ಷಗಳ ಬಳಿಕ ಶೃಂಗೇರಿಗೆ ಬಂದ ಪ್ರಿಯಾಂಕಾ ಗಾಂಧಿ
ಬಿಎಸ್‌ವೈ ಟೀಕೆ ನನಗೆ ಆಶೀರ್ವಾದ
ಯಡಿಯೂರಪ್ಪನವರ ಟೀಕೆಯನ್ನು ಆಶೀರ್ವಾದ ಎಂದು ತೆಗೆದುಕೊಂಡಿದ್ದೇನೆ. ನನಗೆ ಟಿಕೆಟ್ ಕೊಡಿಸುವುದಾಗಿ ಹೇಳಿದ್ದ ಯಡಿಯೂರಪ್ಪ ಈಗ ಅಸಹಾಯಕರಾಗಿದ್ದಾರೆ. ಕೆಜೆಪಿ ಕಟ್ಟಿ ಶಿಗ್ಗಾಂವಿಗೆ ಪ್ರಚಾರಕ್ಕೆ ಬಂದಿದ್ದ ಅವರು ಆಗ ಇದೇ ಬಸವರಾಜ ಬೊಮ್ಮಾಯಿ ಅವರನ್ನು ಬಾಯಿಗೆ ಬಂದಂತೆ ಬೈದಿದ್ದರು. ಆದರೆ, ಬೊಮ್ಮಾಯಿ ಬಿಜೆಪಿಯಿಂದ ಗೆದ್ದು ಬಂದಿದ್ದರು ಎಂದು ಹೇಳಿದರು.