ಮೈಸೂರು: ಜ್ಞಾನ ದೇಗುಲಕ್ಕೂ ವಾಮಾಚಾರದ ಬಿಸಿ ತಟ್ಟಿದೆ. ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ವಾಮಾಚಾರ (Black Magic) ನಡೆದಿದ್ದು, ಕೋಳಿಯೊಂದರ ತಲೆ, ಕಾಲು ಕತ್ತರಿಸಿಟ್ಟಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ.
ಕೆಎಸ್‌ಒಯು ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ ನಡೆದಿದೆ. ಕೋಳಿ ಅಂಗಾಂಗಳ ಜತೆಗೆ ಕುಂಕುಮ, ಕೂದಲು, ಬಳೆ ಚೂರು ಹಾಗೂ ಹಿಂದಿನ ಎಚ್‌ಒಡಿಯೊಬ್ಬರ ಫೋಟೊವೊಂದನ್ನು ಸಹ ಕತ್ತರಿಸಿ ವಿಕೃತಿ ಮೆರೆಯಲಾಗಿದೆ.
ಕೆಎಸ್‌ಒಯು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ಕೊಠಡಿ ಇದಾಗಿದ್ದು, ಈ ಹಿಂದೆ ವಿಭಾಗದ ಎಚ್ಒಡಿ ಆಗಿದ್ದ ತೇಜಸ್ವಿ ನವಿಲೂರು ಅವರಿಗೆ ವಾಮಾಚಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆರು ತಿಂಗಳ ಹಿಂದೆ ತೇಜಸ್ವಿ ಎಚ್‌ಒಡಿ ಸ್ಥಾನದಿಂದ ಬದಲಾಗಿದ್ದರು. ಹೊಸ ಎಚ್ಒಡಿ ಸುಪರ್ದಿಯಲ್ಲಿ ಕೊಠಡಿ ಇತ್ತು.
ಪೊಲೀಸರಿಗೆ ದೂರು
ಕೆಎಸ್‌ಒಯು ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಎಚ್‌ಒಡಿ ಕೊಠಡಿಯಲ್ಲಿ ತಮ್ಮ ಫೋಟೊವನ್ನು ಹರಿದು ವಾಮಾಚಾರ ಮಾಡಲಾಗಿದೆ. ನಾನು ಆರು ತಿಂಗಳ ಹಿಂದೆಯೇ ಕೊಠಡಿ ಕೀ ನೀಡಿದ್ದೇನೆ. ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ದೂರು ನೀಡಿದ್ದಾರೆ.
ಇದನ್ನೂ ಓದಿ | ಮೈಸೂರು ದಸರಾ ಉದ್ಘಾಟನೆಗೆ ಬರ್ತಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ