ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಮಾರಕಾಸ್ತ್ರ ಹಿಡಿದು ದುಷ್ಕರ್ಮಿಗಳು ಸುಲಿಗೆಗೆ (Blackmail Case) ಇಳಿದ್ದಾರೆ. ಗಂಗಾ ನಗರ ಮುಖ್ಯ ರಸ್ತೆ 5ನೇ ಕ್ರಾಸ್ ಸಮೀಪದ ತರಕಾರಿ ಅಂಗಡಿಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಈ ಪ್ರಕರಣದ ಸಿಸಿ ಟಿವಿ ವಿಡಿಯೋ ಸಖತ್ ವೈರಲ್ ಆಗಿದೆ.
ಕ್ಷಣಾರ್ಧದಲ್ಲಿ ಶಾಪ್ ಮಾಲೀಕನ ಗಮನ ಬೇರೆಡೆ ಸೆಳೆದು ಮಾಂಗಲ್ಯ ಸರ ಎಗರಿಸಲು ಸ್ಕೆಚ್ ಹಾಕಿದ್ದ ಖತರ್ನಾಕ್ ಸುಲಿಗೆಕೋರನೊಬ್ಬ ಅದು ತಪ್ಪಿದ್ದರಿಂದ ಏಕಾಏಕಿ ಅಂಗಡಿ ಗಲ್ಲಾ ಪೆಟ್ಟಿಗೆಗೆ ಕೈಹಾಕಿ ಹಣ ಎಗರಿಸಿದ್ದಾನೆ. ಈ ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಇದನ್ನು ಗಮನಿಸಿ ಹಿಡಿಯಲು ಹೋದ ಸಂದರ್ಭದಲ್ಲಿ ಅವರ ಮೇಲೆ ಲಾಂಗ್ ಬೀಸಿ ತಪ್ಪಿಸಿಕೊಂಡಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಅಪರಾಧ ಪ್ರಕರಣಗಳ ಹಿನ್ನೆಲೆಯುಳ್ಳ ಸುಮಾರು ೨೩ ವರ್ಷದ ಆಸುಪಾಸಿನ ತಬ್ರೇಜ್ ಎಂಬ ದುಷ್ಕರ್ಮಿ ಈ ಕೃತ್ಯ ಎಸೆಗಿದ್ದಾನೆ. ಗಂಗಾ ನಗರದ ಮುಖ್ಯ ರಸ್ತೆಯಲ್ಲಿ (ಆ.17) ಬೆಳಗ್ಗೆ 9.10ರ ವೇಳೆಗೆ ಈತ ತರಕಾರಿ ಅಂಗಡಿ ಮಾಲೀಕ ಶಿವರಾಜ್ ಎಂಬುವವರ ಗಮನ ಬೇರೆಡೆಗೆ ಸೆಳೆದು ಅಂಗಡಿಯ ಗಲ್ಲಾ ಪೆಟ್ಟಿಗೆಯಿಂದ ಹಣ ದೋಚಿ ತಪ್ಪಿಸಿಕೊಳ್ಳಲು ನೋಡಿದ್ದಾನೆ. ಆಗ ಅವನನ್ನು ತಡೆಯಲು ಪತ್ನಿ ಮುಂದಾಗುತ್ತಿದ್ದಂತೆ ಅವರ ಮಾಂಗಲ್ಯವನ್ನು ಎಗರಿಸಲು ಹೋಗಿದ್ದಾನೆ. ಅವರು ಅದರಿಂದ ತಪ್ಪಿಸಿಕೊಂಡಿದ್ದಾರೆ.
ಇದನ್ನೂ ಓದಿ | Mobile robbery | ರಾತ್ರಿ ದರೋಡೆ ಮಾಡುತ್ತಿದ್ದ ಐವರ ಗ್ಯಾಂಗ್ ಸೆರೆ, ಹೈದ್ರಾಬಾದ್, ಚೆನ್ನೈಗೆ ಮೊಬೈಲ್ ರವಾನೆ
ದುಡ್ಡು ದೋಚಿ ಪಾರಾರಿಯಾಗುತ್ತಿದ್ದವನನ್ನು ಹಿಡಿದುಕೊಳ್ಳಲು ಮಾಲೀಕ ಶಿವರಾಜ್ ಮುಂದಾಗಿದ್ದಾರೆ. ಆತನ ಹಿಂದೆಯೇ ಓಡಿದ್ದಾರೆ. ಇನ್ನೇನು ಸಿಕ್ಕಿಬಿಟ್ಟ ಎನ್ನುವಷ್ಟರಲ್ಲಿ ಆತ ಇವರ ಮೇಲೆ ಮಾರಕಾಸ್ತ್ರವನ್ನು ಬೀಸಿದ್ದಾನೆ. ಇದರಿಂದ ಶಿವರಾಜ್ ತಪ್ಪಿಸಿಕೊಂಡರು. ಆದರೂ ಪಟ್ಟುಬಿಡದೆ ಶಿವರಾಜ್ ಲಾಕ್ ಮತ್ತೆ ಹಿಂಬಾಲಿಸಿದ್ದು, ಸ್ಥಳೀಯರು ಸಹ ಸಾಥ್ ನೀಡಿದ್ದರಿಂದ ಕೊನೆಗೂ ಆತ ಸಿಕ್ಕಿಬಿದ್ದಿದ್ದಾನೆ. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಶಿವರಾಜ್ ದೂರಿನ ಅನ್ವಯ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Honey trap | ಕ್ರೈಂ ಪೊಲೀಸರೆಂದು ₹ 14 ಲಕ್ಷ ಸುಲಿಗೆ ಮಾಡಿದ ದುಷ್ಕರ್ಮಿಗಳು