ಬೆಂಗಳೂರು: ಯುವತಿಯೊಬ್ಬಳು ವಾಟ್ಸ್‌ಆ್ಯಪ್‌ನಲ್ಲಿ ಬೆತ್ತಲೆ ವಿಡಿಯೊ ಕಾಲ್ ಮಾಡಿ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರೊಬ್ಬರಿಗೆ ಬ್ಲ್ಯಾಕ್‌ಮೇಲ್ (Blackmail Case) ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಕರೆ ಮಾಡಿದ ಬಳಿಕ ವಿಡಿಯೊ ಚಿತ್ರೀಕರಿಸಿಕೊಂಡ ಯುವತಿ, ತಾನು ಕೇಳಿದಷ್ಟು ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಡುವುದಾಗಿ ಬೆದರಿಕೆ ಒಡ್ಡಿದ್ದಾಳೆ. ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋರಮಂಗಲ ನಿವಾಸಿಯಾದ 58 ವರ್ಷದ ವೈದ್ಯರಿಗೆ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ವೈದ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ವೈದ್ಯ ಆಗಸ್ಟ್ 22ರಂದು ರಾತ್ರಿ ಆಸ್ಪತ್ರೆಯಲ್ಲಿದ್ದರು. ಆಗ ಅವರ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ಗೆ ವಿಡಿಯೊ ಕಾಲ್ ಬಂದಿತ್ತು. ಕರೆ ಸ್ವೀಕರಿಸಿದಾಗ ಯುವತಿಯೊಬ್ಬಳು ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಳು. ಇದರಿಂದ ಹೆದರಿ ವೈದ್ಯ ಕರೆ ಕಡಿತಗೊಳಿಸಿದ್ದರು.
ನಂತರ ಕೊಲ ಹೊತ್ತಿನ ಬಳಿಕ ಅದೇ ನಂಬರ್‌ನಿಂದ ಪುನಃ ಕರೆ ಬಂದಿದೆ. ಆದರೆ, ವೈದ್ಯ ಕರೆ ಸ್ವೀಕರಿಸಿರಲಿಲ್ಲ. ಇದಾದ ಕೆಲ ನಿಮಿಷಗಳ ನಂತರ ವಾಟ್ಸ್‌ಆ್ಯಪ್‌ಗೆ ವಿಡಿಯೊವೊಂದು ಬಂದಿತ್ತು. ಅದು ಬೆತ್ತಲೆಯಾಗಿದ್ದ ಯುವತಿಯೊಂದಿಗೆ ವೈದ್ಯ ಮಾತನಾಡಿದ್ದ ವಿಡಿಯೊವಾಗಿತ್ತು. ಅಪರಿಚಿತ ಯುವತಿ 21 ಸೆಕೆಂಡ್‌ಗಳ ಬೆತ್ತಲೆ ವಿಡಿಯೊವನ್ನು ವೈದ್ಯನಿಗೆ ಕಳುಹಿಸಿ, ತಾನು ಕೇಳಿದಷ್ಟು ಹಣ ನೀಡದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಾಳೆ.
ಇದನ್ನೂ ಓದಿ | Gadag News: ಸೂರ್ಯಕಾಂತಿ ಕಟಾವು ಮಾಡಿದ ಹೊಲದಲ್ಲಿ ಮೇಯ್ದು 200 ಕುರಿಗಳ ಸಾವು
ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ವೈದ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ತಂಡವೊಂದು ವ್ಯವಸ್ಥಿತವಾಗಿ ತಂತ್ರ ರೂಪಿಸಿ ವೈದ್ಯನಿಗೆ ಬ್ಲ್ಯಾಕ್‌ಮೇಲ್ ಮಾಡಿದೆ ಎಂಬುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ.
ಕುಕ್ಕರ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ ಪ್ರೇಮಿ!
ಬೆಂಗಳೂರು: ಬೇಗೂರಿನ (Begur Police) ನ್ಯೂ ಮೈಕೋ ಲೇಔಟ್‌ನಲ್ಲಿ ತಡರಾತ್ರಿ ಪ್ರೇಮಿಯೊಬ್ಬ ಸಿಟ್ಟಿಗೆದ್ದು ಪ್ರಿಯತಮೆಯನ್ನು ಹತ್ಯೆ (Lover Murder) ಮಾಡಿದ್ದಾನೆ. ತಲೆಗೆ ಕುಕ್ಕರ್‌ನಿಂದ ಹೊಡೆದು ಹತ್ಯೆ (Murder case) ಮಾಡಿದ್ದಾನೆ. ದೇವಾ (24 ) ಹತ್ಯೆಯಾದವಳು. ವೈಷ್ಣವ್ (24) ಆರೋಪಿ.
ಕೇರಳ ಮೂಲದ ದೇವಾ, ವೈಷ್ಣವ್ ಇಬ್ಬರು ಲಿವಿಂಗ್ ಟುಗೆದರ್‌ನಲ್ಲಿದ್ದರು. ಕಾಲೇಜು ದಿನಗಳಿಂದ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದ ಇವರು, ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು.
ಇದನ್ನೂ ಓದಿ | ಕಾರು ಡಿಕ್ಕಿ ಪೌರಕಾರ್ಮಿಕನ ಕಾಲು ಕಟ್!; ಕುರಿಗಾಹಿಗೆ ಡಿಕ್ಕಿ ಹೊಡೆದ ಮಾಜಿ ಶಾಸಕನ ಅಳಿಯನ ಕಾರು!
ತಡರಾತ್ರಿ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ವೈಷ್ಣವ್ ಸಿಟ್ಟಿನಿಂದ ದೇವಾ ತಲೆಗೆ ಕುಕ್ಕರ್‌ನಿಂದ ಹೊಡೆದಿದ್ದಾನೆ. ತಲೆಗೆ ಗಂಭೀರ ಗಾಯಗೊಂಡು ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಸದ್ಯ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ವೈಷ್ಣವ್‌ನನ್ನು ಬಂಧಿಸಿದ್ದು, ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ.