ದಾಬಸ್‌ಪೇಟೆ: ಮನುಷ್ಯ ವಯಸ್ಸಿಗೆ ಅನುಗುಣವಾಗಿ ಮತ್ತು ಉತ್ತಮ ಆರೋಗ್ಯದ ಸ್ಥಿತಿಯಲ್ಲಿದ್ದಾಗ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿ ಜತೆಗೆ ಮತ್ತಷ್ಟು ಚೈತನ್ಯಯುತವಾಗಿರಲು ಸಹಾಯಕವಾಗುತ್ತದೆ ಎಂದು ವಿದ್ಯಾ ಸ್ಫೂರ್ತಿ ಇಂಟರ್‌ನ್ಯಾಷನಲ್ ಅಕಾಡೆಮಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರಾಮಚಂದ್ರ ಟಿ. ತಿಳಿಸಿದರು.
ಪಟ್ಟಣದ ವಿದ್ಯಾಸ್ಫೂರ್ತಿ ಇಂಟರ್‌ನ್ಯಾಷನಲ್ ಅಕಾಡೆಮಿ ಶಾಲೆಯ ಆವರಣದಲ್ಲಿ ರೋಟರಿ ಸಂಸ್ಥೆ ನೆಲಮಂಗಲ, ರೋಟರಿ ನೆಲಮಂಗಲ ಟ್ರಸ್ಟ್, ನಾರಾಯಣ ಹೃದಯಾಲಯ ವತಿಯಿಂದ ಬಿಬಿಎಂಪಿ ಮಾಜಿ ಮೇಯರ್ ದಿ. ರಮೀಳಾ ಉಮಾಶಂಕರ್ ಅವರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ಉಚಿತ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ದಿ. ರಮೀಳಾ ಉಮಾಶಂಕರ್‌ರವರ ಸೇವೆ ಅವಿಸ್ಮರಣೀಯವಾದದ್ದು. ಮನುಷ್ಯನಿಗೆ ಅಪಘಾತ ಇಲ್ಲವೇ ಅನಾರೋಗ್ಯದ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಹೀಗಾಗಿ ಹಾಗಾಗಿ ಪ್ರತಿಯೊಬ್ಬ ವಯಸ್ಕರು ಆರೋಗ್ಯಯುತರಾಗಿದ್ದಾಗ ರಕ್ತದಾನ ಮಾಡಿ ಮತ್ತೊಂದು ಜೀವವನ್ನು ಉಳಿಸಿದ ಪುಣ್ಯ ಕಟ್ಟಿಕೊಳ್ಳಬೇಕು ಎಂದರು.
ನೆಲಮಂಗಲ ರೋಟರಿ ಸಂಸ್ಥೆಯ ಅಧ್ಯಕ್ಷ ಎನ್.ಜಿ.ನಾಗರಾಜು ಮಾತನಾಡಿ, ಆರೋಗ್ಯವಂತ ಮನುಷ್ಯ ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದ್ದು, ಆರೋಗ್ಯವಂತನ ದೇಹದಲ್ಲಿ ಸುಮಾರು 5ರಿಂದ 6 ಲೀಟರ್‌ಗಳಷ್ಟು ರಕ್ತವಿರುತ್ತದೆ ಎಂದು ಮಾಹಿತಿ ನೀಡಿದರು. ಹಲವಾರು ಮಂದಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾದರಿಯಾದರು.
ಈ ಸಂದರ್ಭದಲ್ಲಿ ಎದೆತುಂಬಿ ಹಾಡಿದೆನು ಖ್ಯಾತಿಯ ಹೃತ್ವಿಕ್ ಸಿದ್ದಾಚಾರ್, ಶಾಲಾ ವ್ಯವಸ್ಥಾಪಕ ಸೋಮಶೇಖರ್, ಪ್ರಾಂಶುಪಾಲ ಎಸ್.ರವಿನಂದನ್, ಡಿ.ಟಿ.ದಿಲೀಪ್‌ಕುಮಾರ್, ರೋಟರಿ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಲೋಕೇಶ್, ಎಸ್.ಚನ್ನಕೇಶವ, ರಾಜಶೇಖರ್, ಗಂಗಾದರಯ್ಯ, ಸುರೇಂದ್ರನಾಥ, ಹನುಮಂತ, ಕೆ.ಮಂಜುನಾಥ್ ಇದ್ದರು.
ಇದನ್ನೂ ಓದಿ | Blood Donors Day 2022: ಯಾರ್ಯಾರು ರಕ್ತದಾನ ಮಾಡಬಾರದು?