ಬೆಂಗಳೂರು: ಜೀವನ ಶೈಲಿ ಬದಲಾಗುತ್ತಿದ್ದಂತೆ ಅನಾರೋಗ್ಯ ಸಮಸ್ಯೆಗಳು (health issue) ಹೆಚ್ಚಾಗುತ್ತಿದೆ. ಮುಪ್ಪಿನ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆಗಳು ಈಗ ಚಿಕ್ಕ ವಯಸ್ಸಿಗೆ ಕಾಡಲು ಆರಂಭಿಸಿದೆ. ಅದರಲ್ಲೂ 17-40 ವರ್ಷದೊಳಗಿನವರಿಗೆ ರಕ್ತದೊತ್ತಡ (Blood pressure) ಹೆಚ್ಚಾಗಿ ಕಂಡು ಬರುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಜಯದೇವ ಆಸ್ಪತ್ರೆಯ (Jayadeva Hospital) ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ (Dr Manjunath) ತಿಳಿಸಿದ್ದಾರೆ.
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ 2ನೇ ವರ್ಷದ ಘಟಿಕೋತ್ಸವದಲ್ಲಿ ಭಾಗಿಯಾದ ಡಾ. ಮಂಜುನಾಥ್, ವಿದ್ಯಾರ್ಥಿಗಳಿಗೆ ಜೀವನದ ಪಾಠದೊಂದಿಗೆ ಆರೋಗ್ಯದ ಕುರಿತು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಜಯದೇವ ಆಸ್ಪತ್ರೆ ಹೃದ್ರೋಗ ಆಸ್ಪತ್ರೆ ನಡೆಸಿದ ಸರ್ವೆ ಪ್ರಕಾರ 17 ರಿಂದ 40 ವರ್ಷ ವಯಸ್ಸಿನವರಲ್ಲಿ ರಕ್ತದೊತ್ತಡ ಹೆಚ್ಚಾಗಿ ಕಂಡು ಬರುತ್ತಿದೆ. ಯುವ ಪೀಳಿಗೆ ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್, ಸ್ಕ್ರೀನ್ ಅಡಿಕ್ಷನ್ ನಂತಹ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಇಷ್ಟು ದಿನ ಮಕ್ಕಳು ಪೋಷಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರೂ, ಆದರೆ ಇದೀಗ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಂತಾಗಿದೆ. ಇದು ಅತ್ಯಂತ ಅಪಾಯಕಾರಿ ವಿಚಾರವಾಗಿದೆ ಎಂದು ಆತಂಕವನ್ನು ಹೊರಹಾಕಿದ್ದಾರೆ.
ಯುವ ಪೀಳಿಗೆಯಲ್ಲಿ ಇಷ್ಟೆಲ್ಲ ಅನಾರೋಗ್ಯ ಸಮಸ್ಯೆಗಳು ಕಂಡು ಬರುತ್ತಿರುವುದಕ್ಕೆ ಡಾ.ಮಂಜುನಾಥ್ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಸಮಸ್ಯೆ ಕಂಡು ಬಂದಾಗ ಅದಕ್ಕೆ ಪರಿಹಾರವು ಇರುತ್ತದೆ. ಯುವಕರು ಹಾಗೂ ಪೋಷಕರು ಐದು ಸೂತ್ರಗಳನ್ನು ಅಳವಡಿಸಿಕೊಂಡರೆ ಆರೋಗ್ಯಕರ ಜೀವನವನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಉತ್ತಮ ಆರೋಗ್ಯಕ್ಕೆ ಪಂಚ ಸೂತ್ರ ಹೀಗಿವೆ
- ಸೂರ್ಯನ ಬೆಳಕು
- ಆಹಾರ ಪದ್ಧತಿ
- ವಿಶ್ರಾಂತಿ
- ವ್ಯಾಯಾಮ
- ಆತ್ಮವಿಶ್ವಾಸ
ಉತ್ತಮ ಆರೋಗ್ಯ ಪಡೆಯಲು ಐದು ಪಂಚ ಸೂತ್ರಗಳನ್ನು ಅನುಸರಿಸಬೇಕು. ಬೆಳಗ್ಗೆ ಎದ್ದ ಕೂಡಲೇ ಸೂರ್ಯನ ಬೆಳಕನ್ನು ಪಡೆಯಬೇಕು. ಮಿತವಾದ ಹಾಗೂ ಉತ್ತಮವಾದ ಆಹಾರ ಸೇವನೆಯನ್ನು ರೂಢಿಸಿಕೊಳ್ಳಬೇಕು. ಸಮಯಕ್ಕೆ ತಕ್ಕಂತೆ ವಿಶ್ರಾಂತಿ ಪಡೆಯುವುದು, ಪ್ರತಿ ದಿನ ವ್ಯಾಯಾಮದ ಜತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ ಎಂದು ಡಾ.ಮಂಜುನಾಥ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Road Accident : ಸವಾರನ ಎದೆಗೆ ಅಪ್ಪಳಿಸಿತ್ತು ಮತ್ತೊಂದು ಬೈಕ್!
ಬುದ್ಧಿವಂತಿಕೆಯನ್ನು ಸಮಾಜದ ಒಳಿತಿಗೆ ಬಳಸಿ
ಸಾಧನೆ ಮಾಡುವಾಗ ಕಷ್ಟಗಳು ಎದುರಾಗುತ್ತವೆ, ಎಷ್ಟೇ ಕಷ್ಟ ಬಂದರೂ ಭಯ ಪಡದೆ ಮುನ್ನುಗ್ಗಿದ್ದರೆ ಮಾತ್ರ ಯಶಸ್ಸು ಸಿಗುತ್ತದೆ. ನಿಮ್ಮ ಬುದ್ಧಿವಂತಿಯನ್ನು ಸಮಾಜದ ಒಳಿತಿಗಾಗಿ ಬಳಕೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇತ್ತೀಚೆಗೆ ಬುದ್ಧಿವಂತರು ಅಪರಾಧ, ದುಷ್ಕ್ರತ್ಯ, ವಿನಾಶಕಾರಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಯುವ ಪೀಳಿಗೆ ಓದುವ ಅಭ್ಯಾಸದಿಂದ ದೂರ ಉಳಿದಿದೆ. ವಿವಿಗಳಲ್ಲಿ ನಿಧಿಯ ಕೊರತೆಯಿಂದ ಸಂಶೋಧನಾ ವಲಯ ಹಿಂದೆ ಬಿದ್ದಿದೆ. ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನದ ಅವಶ್ಯವಿದೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ