ಬೆಂಗಳೂರು: ಭಾರತದಲ್ಲಿ ೫G ನೆಟ್ವರ್ಕ್ ವಿತರಣೆಗೆ ಹರಾಜು ಪ್ರಕ್ರಿಯೆ ಜು. ೨೬ರಂದು ನಡೆಯಲಿದೆ. ಇದಕ್ಕಿಂತ ಮೊದಲು ನೆಟ್ವರ್ಕ್ ವೇಗ ಹಾಗೂ ಪರಿಣಾಮಕಾರಿ ಅಳವಡಿಕೆ ಕುರಿತು ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿವೆ. ಈ ವಿಚಾರದಲ್ಲಿ Namma Metro ಸಂಸ್ಥೆಯ ಮೊದಲ ಬಾರಿ 5G ಬಳಸಿದ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ.
ಶುಕ್ರವಾರ ನಮ್ಮ ಮೆಟ್ರೊದ ಎಂಜಿ ರಸ್ತೆ ನಿಲ್ದಾಣದಿಂದ ಹಲಸೂರು ನಿಲ್ದಾಣದವರೆಗೆ ಈ ಸೇವೆಯ ಪರೀಕ್ಷೆ ನಡೆಸಲಾಯಿತು. ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ನೆರವಿನಿಂದ ಈ ಪೈಲೆಟ್ ಯೋಜನೆಯನ್ನು ನಡೆಸಿತು. ಜಿಯೊ ಸಂಸ್ಥೆಯು ೫ಜಿ ನೆಟ್ವರ್ಕ್ ವಿತರಣೆ ಮಾಡಿತ್ತು. ಬೆಳಗ್ಗೆ ೪.೮ ನಿಮಿಷಕ್ಕೆ ೫ಜಿ ತರಂಗಾಂತರವನ್ನು ಪರೀಕ್ಷೆ ನಡೆಸಲಾಯಿತು ಎನ್ನಲಾಗಿದೆ.
೫G ನೆಟ್ವರ್ಕ್ ಮೂಲಕ ಕ್ಯೂಆರ್ ಕೋಡ್ ಸೃಷ್ಟಿ, ಎಎಫ್‌ಸಿ ಗೇಟ್‌ಗಳ ನಿಯಂತ್ರಣ, ಟಿಕೆಟ್ ಕೌಂಟರ್‌ಗಳ ಪಿಒಎಸ್ (ಕಾರ್ಡ್ ರೀಡಿಂಗ್) ವ್ಯವಸ್ಥೆಯನ್ನು ಪರೀಕ್ಷೆ ಮಾಡಲಾಗಿದೆ. ಈ ಕುರಿತು ನಮ್ಮ BMRCL ಟ್ವೀಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿದೆ.
ವೇಗ ಎಷ್ಟಿತ್ತು?
ಪರೀಕ್ಷೆಯ ವೇಳೆ ೫G ನೆಟ್ವರ್ಕ್ ೧.೪೫ ಜಿಬಿಪಿಎಸ್ ಡೌನ್‌ಲೋಡ್ ಹಾಗೂ ೬೫ ಎಂಬಿಪಿಎಸ್ ಅಪ್‌ಲೋಡ್ ವೇಗವನ್ನು ಹೊಂದಿತ್ತು. ೪G ನೆಟ್ವರ್ಕ್‌ಗಿಂತ ಸುಮಾರು ೪೦ರಿಂದ ೫೦ ಪಟ್ಟು ವೇಗವಾಗಿತ್ತು ಎಂದು BMRCL ಹೇಳಿಕೊಂಡಿದೆ.
ಜುಲೈ ೨೬ರಂದ ಕೇಂದ್ರ ಸರ್ಕಾರ ಭಾರತದಲ್ಲಿ ೫ಜಿ ತರಂಗಾಂತರ ಹಂಚಿಕೆಗೆ ಬಿಡ್ ನಡೆಸಲಿದೆ. ನಾಲ್ಕು ಸಂಸ್ಥೆಗಳಿಂದ ಅರ್ಜಿ ಸ್ವೀಕಾರ ಮಾಡಲಾಗಿದ್ದು, ರಿಲಯನ್ಸ್ ಜಿಯೊ, ಅದಾನಿ ನೆಟ್ವರ್ಕ್, ವೊಡಾಫೋನ್ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್ ಕಂಪನಿಗಳು ೫ಜಿ ಖರೀದಿಗೆ ತುದಿಗಾಲಲ್ಲಿ ನಿಂತಿವೆ.
ಏನು ಲಾಭ?
೫ಜಿ ನೆಟ್ವರ್ಕ್ ಭಾರತಕ್ಕೆ ಬಂದರೆ ಇಂಟರ್ನೆಟ್ ಬಳಕೆಯ ಅನುಭವ ಇನ್ನಷ್ಟು ವೃದ್ಧಿಯಾಗಲಿದೆ. ಪ್ರಮುಖವಾಗಿ ೪K ವಿಡಿಯೊ ವೀಕ್ಷಣೆ ಅನುಭವ ಭಾರತದ ಗ್ರಾಹಕರಿಗೆ ಲಭಿಸಲಿದೆ. ಅಲ್ಲದೆ, AR ಮತ್ತು VR ಗೇಮಿಂಗ್ ಅಪ್ಲಿಕೇಷನ್‌ಗಳನ್ನು ಪರಿಣಾಮಕಾರಿಯಾಗಿ ಬಳಸಹುದು. ಪ್ರಯಾಣದ ಅವಧಿಯಲ್ಲಿ ನೆಟ್ವರ್ಕ್ ವೇಗವನ್ನು ಹೆಚ್ಚಿಸಲು ೫ಜಿ ಸಹಾಯ ಮಾಡಲಿದೆ.
೫ಜಿ ಪ್ರವೇಶದಿಂದ ಇಂಟರ್ನೆಟ್‌ಗಳನ್ನು ಆಧರಿಸಿ ಸೇವೆ ನೀಡುವ ಸಂಸ್ಥೆಗಳಿಗೆ ದೊಡ್ಡ ಪ್ರಯೋಜನ ಸಿಗಲಿದೆ. ಈ ಕಂಪನಿಗಳ ಸೇವಾಗುಣಮಟ್ಟ ವೇಗ ಹೆಚ್ಚಲಿದೆ. ಅಲ್ಲದೆ ಡಿಜಿಟಲ್ ಕ್ಷೇತ್ರದಲ್ಲಿ ಭಾರತಕ್ಕೆ ಪ್ರಗತಿ ಸಾಧಿಸಲು ೫ ಜಿ ಅನುಕೂಲಕರ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | 5G auction| ಜಿಯೊದಿಂದ 14,000 ಕೋಟಿ ರೂ. ಠೇವಣಿ, ಅದಾನಿ 100 ಕೋಟಿ ಸಲ್ಲಿಕೆ