Site icon Vistara News

BMTC Accident | ಕಂಡಕ್ಟರ್ ಅವಾಂತರದಿಂದ ಬಿಎಂಟಿಸಿ ಬಸ್ ಅಪಘಾತ!

bmtc bus accident

ಬೆಂಗಳೂರು: ಸುಮ್ಮನೆ ನಿಂತಿದ್ದ ಬಸ್‌ ಅನ್ನು ತಾನು ಡ್ರೈವ್‌ ಮಾಡಿಬಿಡುತ್ತೇನೆಂಬ ಹುಮ್ಮಸ್ಸಿನಿಂದ ಬಿಎಂಟಿಸಿ ಬಸ್‌ (BMTC Accident) ನಿರ್ವಾಹಕನೊಬ್ಬ ಚಲಾಯಿಸಿದ್ದಲ್ಲದೆ, ಇನ್ನೊಂದು ಬಸ್‌ಗೆ ಗುದ್ದಿಸಿದ ಘಟನೆ ಶಿವಾಜಿನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಆಗತಾನೆ ಕೆಲಸ ಮುಗಿಸಿ ಬಸ್‌ ಅನ್ನು ನಿಲ್ದಾಣದಲ್ಲಿ ನಿಲ್ಲಿಸಿದ್ದ ಚಾಲಕ ಮೀರ್ಸಾಬ್ ಶೌಚಾಲಯಕ್ಕೆಂದು ಹೋಗಿದ್ದಾರೆ. ಈ ಸಮಯದಲ್ಲಿ ಚಾಲಕನ ಸೀಟ್‌ನಲ್ಲಿ ಕುಳಿತ ನಿರ್ವಾಹಕ ಮುನಾವರ್ ಬಸ್‌ ಸ್ಟಾರ್ಟ್‌ ಮಾಡಿ ಡ್ರೈವ್‌ ಮಾಡಿದ್ದಾರೆ.

ಬಸ್‌ ನಿರ್ವಾಹಕ ಮುನಾವರ್‌

ಆದರೆ, ಕಂಡಕ್ಟರ್‌ ನಿಯಂತ್ರಣಕ್ಕೆ ಬಸ್‌ ಸಿಗದ ಹಿನ್ನೆಲೆಯಲ್ಲಿ ಮುಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್‌ಗೆ ಗುದ್ದಲಾಗಿದೆ. ಕೊಂಚದರಲ್ಲಿ ಅನಾಹುತ ತಪ್ಪಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ ಆಗಿಲ್ಲ. ಆದರೆ, ನಿರ್ವಾಹಕರು ಯಾವ ಕಾರಣಕ್ಕಾಗಿ ಬಸ್‌ ಚಲಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ದೇವನಹಳ್ಳಿ ಡಿಪೋ‌ಗೆ ಈ ಬಸ್‌ ಸೇರಿದೆ ಎನ್ನಲಾಗಿದ್ದು, ಅಪಘಾತದಲ್ಲಿ ಬಸ್‌ ಮುಂಭಾಗ ಜಖಂಗೊಂಡಿದೆ. ಸ್ಥಳಕ್ಕೆ ಶಿವಾಜಿನಗರ ಬಸ್‌ ನಿಲ್ದಾಣ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | ಮಂಡ್ಯದ ಕಲ್ಲಹಳ್ಳಿ ಬಳಿ ಭೀಕರ ಅಪಘಾತ: ಬೈಕ್‌ಗೆ ಲಾರಿ ಡಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು

Exit mobile version