Site icon Vistara News

ಅಮೆರಿಕದಲ್ಲಿ ಖರೀದಿಸಿದ ಟೆಸ್ಲಾ ಕಾರಿಗೆ ತಾನು ಓಡಾಡಿದ ಬಿಎಂಟಿಸಿ ಬಸ್‌ ನಂ. ಹಾಕಿಸಿದ ಕನ್ನಡಿಗ, ಇದು KA-01 F 232 ಬಸ್‌ ಕತೆ

BMTC Bus Number In America's Tesla Car; This Kannadiga's Story Will Melt Your Heart

BMTC Bus Number In America's Tesla Car; This Kannadiga's Story Will Melt Your Heart

ಬೆಂಗಳೂರು: ನೆನಪುಗಳು ಇರುವುದೇ ಹಾಗೆ. ನಾವು ಆಧುನಿಕ ಜೀವನಕ್ಕೆ ಎಷ್ಟು ಒಗ್ಗಿಕೊಂಡಿದ್ದರೂ, ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದರೂ, ಮೂರು ಹೊತ್ತು ಮೊಬೈಲ್‌ನಲ್ಲಿಯೇ ಮುಳುಗಿದ್ದರೂ, ಯಾಂತ್ರಿಕ ಜೀವನ ಶೈಲಿಗೆ ‘ಅಡ್ಜಸ್ಟ್‌’ ಆಗಿದ್ದರೂ, ಬಾಲ್ಯದ ನೆನಪುಗಳು, ಸುಮಧುರ ಘಟನೆಗಳು, ಸಂತಸದ ಕ್ಷಣಗಳು ಒತ್ತರಿಸಿ ಬರುತ್ತವೆ. ನೆನಪಿನ ಕವಾಟದಿಂದ ಆಗಾಗ ಬಂದು ಮನಸ್ಸನ್ನು ಉಲ್ಲಾಸಗೊಳಿಸುತ್ತವೆ. ಛೇ, ಬಾಲ್ಯದ ದಿನಗಳೇ ಎಷ್ಟು ಚೆಂದ ಇದ್ದವಲ್ಲ ಎಂಬ ಭಾವನೆ ಮೂಡಿಸುತ್ತವೆ. ಆಟವಾಡಿದ ಗೆಳೆಯರು, ಬಿದ್ದು ಗಾಯ ಮಾಡಿಕೊಂಡ ಶಾಲೆಯ ಗ್ರೌಂಡು, ಬಸ್‌ಗಳಲ್ಲಿ ಶಾಲೆ-ಕಾಲೇಜಿಗೆ ತೆರಳಿದ ನೆನಪುಗಳ ಮೊಟ್ಟೆಗಳಂತೂ ಆಗಾಗ ಮರಿ ಹಾಕುತ್ತಲೇ ಇರುತ್ತವೆ. ಇಂತಹ ನೆನಪುಗಳ ಹಿಂದೆ ಬಿದ್ದು, ಆ ನೆನಪುಗಳನ್ನು ಹಚ್ಚಹಸಿರಾಗಿಸಲು ಬೆಂಗಳೂರಿನ ಹುಡುಗನೊಬ್ಬ ಅಮೆರಿಕದಲ್ಲಿ ಖರೀದಿಸಿದ ಟೆಸ್ಲಾ ಕಾರಿಗೆ ತಾನು ಬಾಲ್ಯದಲ್ಲಿ ಓಡಾಡಿದ ಬಿಎಂಟಿಸಿ ಬಸ್‌ ನಂಬರ್‌ಅನ್ನು ಹಾಕಿಸಿದ್ದಾನೆ.

ಹೌದು, ಚೆಂಗಪ್ಪ ಎಂಬ ಕನ್ನಡಿಗ ತಾನು ಖರೀದಿಸಿರುವ ಟೆಸ್ಲಾ ಕಾರಿನ ರಿಜಿಸ್ಟ್ರೇಷನ್‌ ನಂಬರ್‌ಅನ್ನು KA 01 F 232 ಎಂದು ಇಟ್ಟುಕೊಂಡಿದ್ದಾರೆ. ಚೆಂಗಪ್ಪ ಅವರು 1990ರ ದಶಕದಲ್ಲಿ ಬೆಂಗಳೂರಿನಲ್ಲಿ ಶಾಲೆಗೆ ಹೋಗುವಾಗ ದಿನಾಲೂ ಇದೇ ನಂಬರ್‌ನ ಬಸ್‌ ಹತ್ತುತ್ತಿದ್ದರು. ಶಾಲೆ ಎಂದರೆ ಚೆಂಗಪ್ಪ ಅವರಿಗೆ ಇದೇ ಬಸ್‌ ನೆನಪಾಗುತ್ತಿತ್ತು. ಅಷ್ಟರಮಟ್ಟಿಗೆ ಈ ಬಸ್‌ ಅವರಿಗೆ ಹತ್ತಿರವಾಗಿತ್ತು. ಚೆನ್ನಾಗಿ ಓದಿ ಈಗ ಅಮೆರಿಕದಲ್ಲಿ ನೆಲೆಸಿರುವ ಚೆಂಗಪ್ಪ ಅವರು ಹೊಸ ಕಾರಿಗೆ ಬಿಎಂಟಿಸಿ ಬಸ್‌ ನಂಬರ್‌ಅನ್ನೇ ಹಾಕಿಸಿದ್ದಾರೆ. ಕಾರಿನ ಜತೆಗೆ ನಿಂತು ಬಸ್‌ನಲ್ಲಿ ಕಳೆದ ನೆನಪುಗಳ ಮೆಲುಕು ಹಾಕಿದ್ದಾರೆ. ಇದೆಲ್ಲ ಪ್ರಸಂಗವನ್ನು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ಶ್ರೀವತ್ಸ ಜೋಶಿ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ‌

ಶ್ರೀವತ್ಸ ಜೋಶಿ ಅವರ ಫೇಸ್‌ಬುಕ್‌ ಪೋಸ್ಟ್

ಬಸ್‌ ಚಾಲಕನ ಮೇಲೂ ಅಭಿಮಾನ

ಚೆಂಗಪ್ಪ ಅವರು ಬಿಎಂಟಿಸಿ ಬಸ್‌ ಜತೆಗೆ ಬಸ್‌ ಚಾಲಕನ ಮೇಲೂ ಅಭಿಮಾನ ಹೊಂದಿದ್ದಾರೆ. ಬಾಲ್ಯದಲ್ಲಿ ಚಾಲಕ ಧನಪಾಲ್‌ ಮಂಚೇನಹಳ್ಳಿ ಅವರ ಜತೆ ಕಳೆದ ಒಡನಾಟವನ್ನೂ ಚೆಂಗಪ್ಪ ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಟೆಸ್ಲಾ ಕಾರ್‌ ಬಳಿ ನಿಂತು ಮಾತನಾಡಿರುವ ವಿಡಿಯೊವನ್ನು ಧನಪಾಲ್‌ ಮಂಚೇನಹಳ್ಳಿ ಅವರಿಗೆ ಕಳುಹಿಸಿದ್ದಾರೆ. ಬಿಎಂಟಿಸಿ ಬಸ್‌ ಫೋಟೊವನ್ನು ಕೂಡ ಧನಪಾಲ್‌ ಅವರು ಹಂಚಿಕೊಂಡಿದ್ದಾರೆ. ಧನಪಾಲ್‌ ಅವರು ಕೂಡ ಹಲವು ನೆನಪುಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಚಾಲಕ ಧನಪಾಲ್‌ ಅವರ ಪೋಸ್ಟ್

“ನಾನು 1992ರಲ್ಲಿ ಬಿಎಂಟಿಸಿ ಘಟಕ 11ರಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುವಾಗ ಅನೇಕ ಶಾಲಾ ಮಕ್ಕಳಿಗೆ ನನ್ನ ಬಸ್ಸೆಂದರೆ ತುಂಬಾ ಅಚ್ಚುಮೆಚ್ಚಾಗಿತ್ತು. ಆ ಮಕ್ಕಳಲ್ಲಿ ಚೆಂಗಪ್ಪ ಮತ್ತು ಆದಿತ್ಯ ಎಂಬ ಹುಡುಗರಂತೂ ನನ್ನ ವಾಹನದ ಬಾನೆಟ್ ಮೇಲೆ ಕುಳಿತು ಅನೇಕ ವರ್ಷಗಳು ಶಾಲೆಗೆ ಪ್ರಯಾಣ ಮಾಡಿದ್ದಾರೆ. ಆದಿತ್ಯ ಈಗ ಜರ್ಮನಿಯಲ್ಲಿದ್ದಾನೆ. ಚೆಂಗಪ್ಪ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿದ್ದಾನೆ. ಇತ್ತೀಚಿಗೆ ಅವನು ಒಂದು ಕಾರನ್ನು ಖರೀದಿಸಿದ್ದಾನೆ, ಅದರ ನಂಬರ್ ಆಗ ನಾನು ಚಲಾಯಿಸುತ್ತಿದ್ದ ಬಿಎಂಟಿಸಿ ಬಸ್ಸಿನ ನಂಬರನ್ನೇ ತೆಗೆದುಕೊಂಡಿದ್ದಾನೆ. ಈಗಲೂ ಅವನು ನನ್ನ ಸಂಪರ್ಕದಲ್ಲಿದ್ದಾನೆ. ಅವನ ಅಭಿಮಾನಕ್ಕೆ ನಾನು ಚಿರಋಣಿ” ಎಂದು ಧನಪಾಲ್‌ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: IPL 2023: ಟಿ.ನಟರಾಜನ್ ಮಗಳೊಂದಿಗೆ ಕುಶಲೋಪರಿ ನಡೆಸಿದ ಧೋನಿ; ವಿಡಿಯೊ ವೈರಲ್

ಅಮೆರಿಕದಲ್ಲಿ ನಮಗಿಷ್ಟದ ನಂಬರ್‌ ಬೇಕಾದರೂ ಹಾಕಿಸಿಕೊಳ್ಳಬಹುದೇ?

ಚೆಂಗಪ್ಪ ಅವರ ಹೃದಯಸ್ಪರ್ಶಿ ಘಟನೆ ಓದಿದ ಬಳಿಕ, “ಅಮೆರಿಕದಲ್ಲಿ ನಮಗೆ ಇಷ್ಟವಾದ ನಂಬರ್‌ಅನ್ನು ರಿಜಿಸ್ಟರ್‌ ಮಾಡಿಕೊಳ್ಳಬಹುದೇ” ಎಂದು ಶ್ರೀವತ್ಸ ಜೋಶಿ ಅವರಿಗೆ ಜನ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಜೋಶಿ ಪ್ರತಿಕ್ರಿಯಿಸಿದ್ದಾರೆ. “ಹೌದು. Maximum 7 characters (letters or numbers) ಇರುವಂತೆ, ನಮಗೆ ಬೇಕಾದ ರೀತಿಯ ರಿಜಿಸ್ಟ್ರೇಷನ್ ನಂಬರ್ ಇಟ್ಟುಕೊಳ್ಳಬಹುದು (ಆ ರಾಜ್ಯದೊಳಗೆ ಅದನ್ನು ಈಗಾಗಲೇ ಯಾರಾದರೂ ನೋಂದಾಯಿಸಿಕೊಂಡಿರದಿದ್ದರೆ). ನನ್ನ ಕಾರಿನ ನಂಬರ್ ವರ್ಜೀನಿಯಾ ರಾಜ್ಯದಲ್ಲಿ “S JOSHI 3″ ಎಂದು ಇದೆ. ಈ ಹಿಂದೆ ನಾನು ಮೇರಿಲ್ಯಾಂಡ್ ಮತ್ತು ಇಲ್ಲಿನಾಯ್ ರಾಜ್ಯಗಳಲ್ಲಿದ್ದಾಗಲೂ ನನಗೆ ಇದೇ ನಂಬರ್ ಸಿಕ್ಕಿತ್ತು. ನಾವು ಮೂವರು Sಗಳು: ಶ್ರೀವತ್ಸ, ಸಹನಾ, ಮತ್ತು ಸೃಜನ್. ಎಂಬುದಕ್ಕೆ ಹಾಗೆ ಇಟ್ಟಿದ್ದೇನೆ. ಇನ್ನೊಂದು ವಿಚಾರವೆಂದರೆ ಒಂದು ವೇಳೆ ಕಾರನ್ನು ಮಾರಿದರೂ ನಾವು ರಿಜಿಸ್ಟ್ರೇಷನ್ ನಂಬರ್ ಹಳೆಯದನ್ನೇ ಇಟ್ಟುಕೊಳ್ಳಬಹುದು, ಹೊಸ ಕಾರಿಗೆ ಆ ನಂಬರ್ ಪ್ಲೇಟ್ ಅಳವಡಿಸಬಹುದು. ಕೆಲವು ರಾಜ್ಯಗಳಲ್ಲಿ ಈರೀತಿ customized plateಗೆ ಹೆಚ್ಚು ಚಾರ್ಜ್ ಮಾಡುತ್ತಾರೆ. ಕೆಲವು ರಾಜ್ಯಗಳಲ್ಲಿ ಹಾಗೆ ಮಾಡುವುದಿಲ್ಲ” ಎಂದು ವಿವರಿಸಿದ್ದಾರೆ. ಒಟ್ಟಿನಲ್ಲಿ, ಚೆಂಗಪ್ಪ, ಅವರು ಸಂಚರಿಸಿದ ಬಿಎಂಟಿಸಿ ಬಸ್‌ ಹಾಗೂ ಧನಪಾಲ್‌ ಅವರ ಹೃದಯಸ್ಪರ್ಶಿ ಘಟನೆಯು ಜನರ ಮನಸ್ಸನ್ನು ತಟ್ಟಿದೆ.

Exit mobile version