Site icon Vistara News

Boiler blast : ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್‌ ಸ್ಫೋಟ, ಐವರು ಕಾರ್ಮಿಕರಿಗೆ ಗಂಭೀರ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ

boiler blast

#image_title

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಾಪಿಸಿದ್ದ ಹೊಸ ಬಾಯ್ಲರ್‌ ಒಂದು ಪ್ರಾಯೋಗಿಕ ಪರೀಕ್ಷೆ ವೇಳೆ ಸ್ಫೋಟಗೊಂಡಿದೆ (Boiler blast). ಘಟನೆಯಲ್ಲಿ ಐವರು ಕಾರ್ಮಿಕರಿಗೆ ಗಾಯಗಳಾಗಿದ್ದು, ಅವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಈ ಕಾರ್ಖಾನೆಯಲ್ಲಿ ಪೂನಾದ ಎಸ್ ಎಸ್ ಎಂಜಿನಿಯರ್ಸ್ ಕಂಪನಿ 220 ಟನ್ ಕೆಪಾಸಿಟಿ ಹೊಂದಿದ್ದ ನೂತನ ಬಾಯ್ಲರ್‌ ಒಂದನ್ನು ಅಳವಡಿಸಿತ್ತು. ಸುಮಾರು 51 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ನೂತನ ಬಾಯ್ಲರ್‌ನ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಬಾಯ್ಲರ್‌ ಸ್ಫೋಟಗೊಂಡು ಬಿಹಾರ ಮೂಲದ ಐವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ.

ಮಧ್ಯಾಹ್ನ 2.30ಕ್ಕೆ ನಡೆದಿರುವ ಘಟನೆಯಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಾಗಲಕೋಟೆ, ಮುಧೋಳ, ಬೀಳಗಿ, ವಿಜಯಪುರ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡು ಗಂಟೆಯಿಂದ ಬೆಂಕಿ ನಂದಿಸುತ್ತಿದ್ದಾರೆ. ಗಾಯಾಳುಗಳಿಗೆ ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ನೀಡಲಾಗುತ್ತಿದೆ.

ಬಾಯ್ಲರ್‌ ಅಕ್ರಮದ ಆರೋಪ ತನಿಖೆಗೆ ರೈತರ ಪಟ್ಟು

ಬಾಯ್ಲರ್‌ ದುರಂತಕ್ಕೆ ಅದರ ಖರೀದಿ ಮತ್ತು ಸ್ಥಾಪನೆಯಲ್ಲಿ ಆಗಿರುವ ಅಕ್ರಮ ಕಾರಣ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ. ದೆಹಲಿಯ ಐ ಎಸ್ ಜಿ ಸಿ ಕಂಪನಿಯ ಬಾಯ್ಲರ್ ಬದಲಾಗಿ ಪೂನಾದ ಎಸ್ ಎಸ್ ಎಂಜಿನಿಯರ್ಸ್ ಅವರಿಂದ ನೂತನ ಬಾಯ್ಲರ್ ಅಳವಡಿಸಿದ್ದೇ ದುರಂತಕ್ಕೆ ಕಾರಣ ಎನ್ನುವುದು ಆರೋಪ.

ನಿಜವೆಂದರೆ, ಆರಂಭದಲ್ಲಿ ದೆಹಲಿಯ ಐ ಎಸ್ ಜಿ ಸಿ ಕಂಪನಿಯ ಬಾಯ್ಲರ್ ಕಂಪನಿಯಿಂದ ಬಾಯ್ಲರ್‌ ಖರೀದಿಗೆ ಒಪ್ಪಂದ ನಡೆದಿತ್ತು. ಆದರೆ, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಗುತ್ತಿಗೆ ರದ್ದುಪಡಿಸಿತ್ತು. ಈ ರೀತಿ ಗುತ್ತಿಗೆ ರದ್ದುಪಡಿಸಿದ್ದ ದೆಹಲಿಯ ಐ ಎಸ್ ಜಿ ಸಿ ಕಂಪನಿಗೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ 5 ಕೋಟಿ ರೂಪಾಯಿ ದಂಡ ಪಾವತಿಸಿದೆ.

ಅಧ್ಯಕ್ಷ ಶಶಿಕಾಂತ ಪಾಟೀಲ್ ನೇತೃತ್ವದ ಆಡಳಿತ ಮಂಡಳಿ ಆಧಿಕಾರ ದುರುಪಯೋಗ ಮಾಡಿ ಹೆಚ್ಚು ದುಡ್ಡಿಗೆ ಕಳಪೆ ಗುಣಮಟ್ಟದ ಬಾಯ್ಲರ್ ಅಳವಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಬಗ್ಗೆ ತನಿಖೆಗೆ ಆಗ್ರಹಿಸಲಾಗಿದೆ.
ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : Bengaluru Cylinder Blast: ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ; ಮಕ್ಕಳು ಸೇರಿ 10 ಜನರಿಗೆ ಗಂಭೀರ ಗಾಯ

Exit mobile version